ಜಾಮಿಯಾ ಹಿಂಸಾಚಾರ : "ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ಪ್ರಕರಣದ ವಿವರ ಒದಗಿಸಲು ವಿಳಂಬ ಯಾಕೆ ?"

ಪೊಲೀಸರಿಗೆ ದಿಲ್ಲಿ ನ್ಯಾಯಾಲಯ ಪ್ರಶ್ನೆ

Update: 2022-11-27 16:41 GMT

ಹೊಸದಿಲ್ಲಿ, ನ. 27: ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದಲ್ಲಿ 2019ರಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದ ದಾಖಲೆಯನ್ನು ಒಂದು ವರ್ಷದಿಂದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವರ ಗಮನಕ್ಕೆ ಯಾಕೆ ತಂದಿಲ್ಲ ಎಂಬ ಬಗ್ಗೆ ವಿವರಿಸುವಂತೆ ದಿಲ್ಲಿ ನ್ಯಾಯಾಲಯ ಶನಿವಾರ ಪೊಲೀಸರಿಗೆ ತಿಳಿಸಿದೆ. 

ಗಲಭೆ, ದಂಡನೀಯವಲ್ಲದ ನರಹತ್ಯೆಗೆ ಪ್ರಯತ್ನ ಹಾಗೂ ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿದ ನಿಯಮಗಳ ಅಡಿಯಲ್ಲಿ ಪೊಲೀಸರು ಸಲ್ಲಿಸಿದ ಪ್ರಕರಣದಲ್ಲಿ ಆರೋಪ ರೂಪಿಸುವ ಕುರಿತು ವಾದವನ್ನು  ಆಲಿಸುವಾಗ ಸಹಾಯಕ ಸೆಷನ್ಸ್ ನ್ಯಾಯಾಧೀಶ ಅರುಳ್ ವರ್ಮಾ ಅವರು ಈ ನಿರ್ದೇಶನಗಳನ್ನು ನೀಡಿದರು. 

ಈ ಪ್ರಕರಣದಲ್ಲಿ ವಿದ್ಯಾರ್ಥಿ ಹೋರಾಟಗಾರರಾದ ಶರ್ಜೀಲ್ ಇಮಾಮ್, ಸಫೂರಾ ಝರ್ಗರ್, ಮುಹಮ್ಮದ್ ಇಲ್ಯಾಸ್, ಬಿಲಾಲ್ ನದೀಮ್, ಶಹ್ಝಾರ್ ರಝಾ ಖಾನ್, ಮೆಹಮೂದ್ ಅನ್ವರ್, ಮುಹಮ್ಮದ್ ಖಾಸಿಂ, ಉಮೈರ್ ಅಹ್ಮದ್, ಚಂದ ಯಾದವ್ ಹಾಗೂ ಅಬುಝರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. 
ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ 2019 ಡಿಸೆಂಬರ್ 15ರಂದು  ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಸಂದರ್ಭ ಹಿಂಸಾಚಾರ ಭುಗಿಲೆದ್ದಿತ್ತು.

Similar News