ಅಸ್ಸಾಂ-ಮೇಘಾಲಯ ಗಡಿಯಲ್ಲಿ ಹಿಂಸಾಚಾರ: ಪ್ರತಿಭಟನಕಾರರಿಂದ ಅಮಿತ್ ಶಾ, ಕೊನ್ರಾಡ್ ಸಂಗ್ಮಾ ಪ್ರತಿಕೃತಿ ದಹನ

Update: 2022-11-27 17:09 GMT

ಗುವಾಹತಿ, ನ. 27:  ಈ ವಾರದ ಆರಂಭದಲ್ಲಿ ಅಸ್ಸಾಂ ಪೊಲೀಸರು ನಡೆಸಿದ ಗೋಲಿಬಾರ್‌ನಿಂದ 6 ಮಂದಿ ಸಾವನ್ನಪ್ಪಿರುವುದನ್ನು  ಪ್ರತಿಭಟಿಸಿ ಶಿಲ್ಲಾಂಗ್ ನ ಹಲವು ಸಾಮಾಜಿಕ ಸಂಘಟನೆಗಳ ಸದಸ್ಯರು ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮೇಘಾಲಯ ಮುಖ್ಯಮಂತ್ರಿ ಕೊನ್ರಾಡ್ ಕೆ. ಸಂಗ್ಮಾ, ರಾಜ್ಯ ಸಚಿವ ಲಕ್ಮನ್ ರಿಂಬುಯಿ ಹಾಗೂ ಇತರರ ಪ್ರತಿಕೃತಿಗಳನ್ನು ದಹಿಸಿದರು. 

ಶಿಲ್ಲಾಂಗ್‌ನಲ್ಲಿರುವ ಮುಖ್ಯಮಂತ್ರಿ ಅವರ ಬಂಗ್ಲೆಯ ಪ್ರವೇಶ ದ್ವಾರದಲ್ಲಿ ಈ ಪ್ರತಿಕೃತಿಗಳನ್ನು ದಹಿಸಬೇಕು ಎಂದು ಅವರು ಆರಂಭದಲ್ಲಿ ಯೋಜನೆ ಹಾಕಿಕೊಂಡಿದ್ದರು. ಆದರೆ, ಅದನ್ನು ಪೊಲೀಸರು ಸಮೀಪದ ಸ್ಥಳಕ್ಕೆ ವರ್ಗಾಯಿಸಿದರು. 

ಹಿನ್ನೀವ್‌ಟ್ರೆಪ್ ಯೂತ್ ಕೌನ್ಸಿಲ್, ಈಸ್ಟ್ ನ್ಯಾಷನಲ್ ಕೌನ್ಸಿಲ್, ಜೈಂಟಿಯಾ ಸ್ಟೂಡೆಂಟ್ಸ್ ಮೂವ್‌ಮೆಂಟ್, ಹಿನ್ನೀವ್‌ಟ್ರೆಪ್ ಅಚಿಕ್ ನ್ಯಾಷನಲ್ ಮೂವ್‌ಮೆಂಟ್ ಹಾಗೂ ಕಾನ್ಫೆಡರೇಶನ್ ಆಫ್ ರಿ ಬೋಯಿ ಪೀಪಲ್ ಒಳಗೊಂಡ ಹಿನ್ನೀವ್‌ಟ್ರೆಪ್ ಮಿಶನ್ ಈ ಪ್ರತಿಭಟನೆ ಆಯೋಜಿಸಿತ್ತು. 
ಮುಕ್ರೋಹ್ ಗ್ರಾಮದಲ್ಲಿ ಮಂಗಳವರ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಮೃತಪಟ್ಟ ಐವರು ಮೇಘಾಲಯದ ನಿವಾಸಿಗಳು. ಇನ್ನೊಬ್ಬರು ಅಸ್ಸಾಂ ಅರಣ್ಯ ರಕ್ಷಕರು. ಅಲ್ಲದೆ, ಈ ಗ್ರಾಮ ತನ್ನ ರಾಜ್ಯದ ಭಾಗ ಎಂದು ಸಂಗ್ಮಾ ಹೇಳಿದ್ದರು. 

ಆದರೆ,  ಕೇವಲ ನಾಲ್ಕು ಮಂದಿ ಮಾತ್ರ ಮೃತಪಟ್ಟಿದ್ದಾರೆ. ಈ ಗ್ರಾಮ ತನ್ನ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಅಸ್ಸಾಂ ಸರಕಾರ ಪ್ರತಿಪಾದಿಸಿತ್ತು. 
ಅಂತರ್ ರಾಜ್ಯ ಗಡಿ ವಿವಾದವನ್ನು ಪರಿಹರಿಸುವಲ್ಲಿ ಕೇಂದ್ರ ಸರಕಾರ, ಅಸ್ಸಾಂ ಸರಕಾರ ಹಾಗೂ ಮೇಘಾಲಯ ಸರಕಾರ ತೋರಿಸಿದ ನಿರ್ಲಕ್ಷ್ಯದ ಫಲಿತಾಂಶ ಈ ಗೋಲಿಬಾರ್ ಘಟನೆ ಎಂದು ಹಿನ್ನೀವ್ ಟ್ರೆಪ್ ಯೂತ್ ಕೌನ್ಸಿಲ್‌ನ ಪ್ರಧಾನ ಕಾರ್ಯದರ್ಶಿ ರಾಯ್ ಕುಪಾರ್ ಸಿನ್ರೆಮ್ ತಿಳಿಸಿದ್ದಾರೆ.  

1971ರ ಅಸ್ಸಾಂ ಮರು ಸಂಘಟನೆ ಕಾಯ್ದೆ ಅಡಿಯಲ್ಲಿ 1972 ಜನವರಿ 21ರಂದು ಮೇಘಾಲಯವನ್ನು ಅಸ್ಸಾಂನಿಂದ ಪ್ರತ್ಯೇಕಿಸಲಾಗಿತ್ತು. ಅನಂತರ ಎರಡು ರಾಜ್ಯಗಳ ನಡುವೆ ಗಡಿ ವಿವಾದ ಆರಂಭವಾಗಿದೆ.

Similar News