ಗೋಧಿಹಿಟ್ಟು ಪೂರೈಕೆ ಇಳಿಕೆ; ಬೆಲೆ ಗಗನಕ್ಕೆ

Update: 2022-11-28 03:00 GMT

ಹೊಸದಿಲ್ಲಿ: ಗೋಧಿಹಿಟ್ಟಿನ ಚಿಲ್ಲರೆ ದರ ಕಳೆದ ಒಂದು ವರ್ಷದಲ್ಲಿ ಶೇ. 17ರಷ್ಟು ಹೆಚ್ಚಿದ್ದು, ಮುಕ್ತ ಮಾರುಕಟ್ಟೆ ಯಲ್ಲಿ ಈ ಆಹಾರಧಾನ್ಯದ ಕೊರತೆ ಇದಕ್ಕೆ ಪ್ರಮುಖ ಕಾರಣ ಎಂದು ಗಿರಣಿ ಮಾಲಕರು ಹೇಳಿದ್ದಾರೆ. ಸರ್ಕಾರ ತಕ್ಷಣವೇ ತನ್ನ ದಾಸ್ತಾನಿನಿಂದ ಗೋಧಿ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಬಗ್ಗೆ hindustantimes.com ವರದಿ ಮಾಡಿದೆ.

ಸರಬರಾಜು ಕುಂಠಿತಗೊಂಡ ಕಾರಣದಿಂದ ಗೋಧಿಹಿಟ್ಟಿನ ಬೆಲೆ ಪ್ರತಿ ಕೆಜಿಗೆ ರೂ. 36.98ರಿಂದ ರೂ. 37.96ಕ್ಕೇರಿದ್ದು, ಈ ಬೆಲೆ ಅಕ್ಕಿ ಬೆಲೆಗೆ ಸಮನಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

"ಗೋಧಿಹಿಟ್ಟು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣ ಗೋಧಿ ಬೆಲೆ ಏರಿಕೆಯಾಗಿರುವುದು. ಸರ್ಕಾರ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಯಾವುದೇ ದಾಸ್ತಾನು ಬಿಡುಗಡೆ ಮಾಡಿಲ್ಲ. ಇದು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ರೋಲರ್ ಫ್ಲೋರ್ ಮಿಲ್ಸ್‌ ಅಸೋಸಿಯೇಶನ್ (Roller Flour Mills Association) ಅಧ್ಯಕ್ಷ ರಾಕೇಶ್ ಆನಂದ್ ಹೇಳಿದ್ದಾರೆ.

ಭಾರತ ಆಹಾರ ನಿಗಮದಲ್ಲಿ ದಾಸ್ತಾನು ಇರುವ ಆಹಾರ ಧಾನ್ಯಗಳನ್ನು ಸರ್ಕಾರ, ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ಬಿಡುಗಡೆ ಮಾಡುತ್ತದೆ. ಮೂಲಭೂತವಾಗಿ ಬೆಲೆ ನಿಯಂತ್ರಣದಲ್ಲಿ ಇಡಲು ಮತ್ತು ಸರ್ಕಾರಿ ಉಗ್ರಾಣಗಳಲ್ಲಿ ಸ್ಥಳಾವಕಾಶ ಸೃಷ್ಟಿಸಲು ಬಿಡುಗಡೆ ಮಾಡಲಾಗುತ್ತದೆ.

ಈ ವರ್ಷ ಸರ್ಕಾರ ಓಎಂಎಸ್‍ಎಸ್ (OMSS) ಯೋಜನೆಯಡಿ ಖಾಸಗಿ ಮಾರುಕಟ್ಟೆಗೆ ಗೋಧಿ ಬಿಡುಗಡೆ ಮಾಡಿಲ್ಲ. ಉತ್ತರ ಭಾರತದಲ್ಲಿ ಗೋಧಿ ಬೆಲೆ ಕ್ವಿಂಟಲ್‍ಗೆ 2900 ರೂಪಾಯಿ ತಲುಪಿದ್ದು, ಕನಿಷ್ಠ ಬೆಂಬಲ ಬೆಲೆ 2125 ರೂಪಾಯಿ ಎಂದು ಪಂಜಾಬ್‍ನ ಖಾನಾ ಮಂಡಿ ಪ್ರದೇಶದ ವ್ಯಾಪಾರಿ ಬಿನೋದ್ ಜೋಹರ್ ಹೇಳಿದ್ದಾರೆ. ಈ ಬಗ್ಗೆ hindustantimes.com ವರದಿ ಮಾಡಿದೆ.

Similar News