ಹಿಂಸೆಗೆ ತಿರುಗಿದ ಅದಾನಿ ಬಂದರು ವಿರುದ್ಧದ ಪ್ರತಿಭಟನೆ: 25 ಪೊಲೀಸರಿಗೆ ಗಾಯ

Update: 2022-11-28 03:00 GMT

ತಿರುವನಂತಪುರಂ: ಅದಾನಿ ಕಂಪನಿಯ ಬಂದರು ನಿರ್ಮಾಣ ಯೋಜನೆಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ರವಿವಾರ ಹಿಂಸೆಗೆ ತಿರುಗಿದ್ದು, ಭುಗಿಲೆದ್ದ ಹಿಂಸಾಚಾರದಲ್ಲಿ ಕನಿಷ್ಠ 25 ಮಂದಿ ಪೊಲೀಸರು ಗಾಯಗೊಂಡಿದ್ದಾರೆ ಎಂದು newindianexpress.com ವರದಿ ಮಾಡಿದೆ.

ಶನಿವಾರ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿಸಿರುವ ಐದು ಮಂದಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಕೋರಿ ಪ್ರತಿಭಟನಾಕಾರರು ವಿಳಿಂಝಮ್ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದರು.

ಅದಾನಿ ಸಮೂಹ ವಿಳಿಂಝಮ್‍ನಲ್ಲಿ ನಿರ್ಮಿಸಲು ಉದ್ದೇಶಿಸಿದ ಬಂದರು ಯೋಜನೆ ವಿರುದ್ಧ ಕಳೆದ ಕೆಲ ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಿದೆ. ಬಹುತೇಕ ಕರಾವಳಿ ಗ್ರಾಮಗಳಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆಗಳು ನಡೆಯುತ್ತಿದ್ದು, ಕರಾವಳಿ ಪರಿಸರ ವ್ಯವಸ್ಥೆಗೆ ಧಕ್ಕೆ ತರುವ ಈ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಬೇಕು ಎನ್ನುವುದು ಪ್ರತಿಭಟನಾಕಾರರ ಆಗ್ರಹ.

ಇದಕ್ಕೂ ಮುನ್ನ ರವಿವಾರ ಪ್ರತಿಭಟನಾಕಾರರ ವಿರುದ್ಧ ಕಠಿಣ ನಿಲುವು ತಳೆದ ಸರ್ಕಾರ, ಪ್ರತಿಭಟನೆಯ ನೇತೃತ್ವ ವಹಿಸಿರುವ ಆರ್ಚ್‍ ಬಿಷಪ್ ಥಾಮಸ್ ಜೆ.ನೆಟ್ಟೊ ಸೇರಿದಂತೆ ಲ್ಯಾಟೀನ್ ಚರ್ಚ್ ಧರ್ಮಗುರುಗಳ ವಿರುದ್ಧ ಪ್ರಕರಣ ದಾಖಲಿಸಿದೆ. ಸಂಚು ಹಾಗೂ ಹಿಂಸೆ ಪ್ರಚೋದನೆ ಆರೋಪವನ್ನು ಹೊರಿಸಲಾಗಿದೆ.

ಶನಿವಾರದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಶೆಲ್ಟಾನ್ ಎಂಬವರನ್ನು ಪೊಲೀಸರು ಬಂಧಿಸಿದ್ದರು. ಅವರ ಬಿಡುಗಡೆಗೆ ಆಗ್ರಹಿಸಿ ಠಾಣೆಗೆ ತೆರಳಿದ್ದ ಪ್ರತಿಭಟನಾ ಸಮಿತಿಯ ಇತರ ನಾಲ್ಕು ಮಂದಿಯನ್ನೂ ಬಂಧಿಸಲಾಗಿತ್ತು. ಈ ಗುಂಪು ಹಿಂಸಾಚಾರ ನಡೆಸಿದೆ ಎನ್ನುವುದು ಪೊಲೀಸರ ಆರೋಪ. ಈ ಸುದ್ದಿ ಹರಡುತ್ತಿದ್ದಂತೆ, ಮಹಿಳೆಯರೂ ಸೇರಿ ನೂರಾರು ಮಂದಿ ಠಾಣೆಗೆ ಮುತ್ತಿಗೆ ಹಾಕಿ ಬಂಧಿತರ ಬಿಡುಗಡೆಗೆ ಆಗ್ರಹಿಸಿದರು. ಎರಡು ಪೊಲೀಸ್ ವಾಹನಗಳನ್ನು ಜಖಂಗೊಳಿಸಿ, ಹಲವು ಮಂದಿ ಪೊಲೀಸ್ ಸಿಬ್ಬಂದಿಯನ್ನು ಗಾಯಗೊಳಿಸಿದರು ಎಂದು ಸ್ಥಳೀಯ ಮೂಲಗಳು ಹೇಳಿವೆ. ಈ ಬಗ್ಗೆ newindianexpress.com ವರದಿ ಮಾಡಿದೆ.

Similar News