ಮಗುವಾಗಿದ್ದಾಗ ಅಪಹರಣ: 51 ವರ್ಷ ಬಳಿಕ ಕುಟುಂಬಕ್ಕೆ ಮರಳಿದ ಮಹಿಳೆ

Update: 2022-11-29 04:59 GMT

ವಾಷಿಂಗ್ಟನ್: ಮಗುವಾಗಿದ್ದಾಗ ಅಪಹರಣಕ್ಕೆ ಒಳಗಾಗಿದ್ದ ಈಕೆಗಾಗಿ ಐದು ದಶಕಗಳ ಕಾಲ ನಡೆಸಿದ ಹುಡುಕಾಟ ಕೊನೆಗೂ ಸುಖಾಂತ್ಯವಾಗಿದೆ. 51 ವರ್ಷ ಬಳಿಕ ಈಕೆ ಪತ್ತೆಯಾಗಿದ್ದು, ಕುಟುಂಬಕ್ಕೆ ಮರಳಿದ್ದಾರೆ ಎಂದು ndtv.com ವರದಿ ಮಾಡಿದೆ.

1971ರ ಆಗಸ್ಟ್ 23ರಂದು ಟೆಕ್ಸಾಸ್‍ನ ಫೋರ್ಟ್‍ವರ್ತ್ ನಲ್ಲಿರುವ ಮನೆಯಿಂದ ಮೆಲಿಸ್ಸಾ ಹೈಸ್ಮಿತ್ ಎಂಬ ಮಗುವನ್ನು ಬೇಬಿಸಿಟ್ಟರ್ ಎಂದು ಬಿಂಬಿಸಿಕೊಂಡ ವ್ಯಕ್ತಿಯೊಬ್ಬ ಅಪಹರಿಸಿದ್ದ. ಆಕೆಯ ತಾಯಿ ಆಲ್ಟಾ ಅಪಾಂಟೆಂಕೊ ಬೇಬಿಸಿಟ್ಟರ್ ಬೇಕು ಎಂದು ಜಾಹೀರಾತು ನೀಡಿದ್ದರು. ಆಲ್ಟಾ ಉದ್ಯೋಗದಲ್ಲಿದ್ದ ಕಾರಣ ಮಗುವನ್ನು ಪೋಷಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರನ್ನು ನೇಮಿಸಿಕೊಂಡಿದ್ದರು. ಆಲ್ಟಾ ಅವರ ರೂಮ್‍ಮೇಟ್ ಈ ಮಗುವನ್ನು ಬೇಬಿಸಿಟ್ಟ‌ರಿಗೆ ನೀಡಿದ್ದರು. ಬಳಿಕ ಮಗುವನ್ನು ಅಕೆ ಅಪಹರಿಸಿದ್ದಳು ಎನ್ನಲಾಗಿದ್ದು, ಕಣ್ಮರೆಯಾಗಿದ್ದಳು.

ಈ ವರ್ಷದ ಸೆಪ್ಟೆಂಬರ್‌ ನಲ್ಲಿ ಹೈಸ್ಮಿತ್ ಅವರ ಸಂಬಂಧಿಕರಿಗೆ ಫೋರ್ಟ್‍ವರ್ತ್‍ನಿಂದ 1100 ಮೈಲು ದೂರದ ಚಾರ್ಲ್ಸ್‌ಟನ್ ಬಳಿ ಆಕೆ ಇದ್ದಾಳೆ ಎಂಬ ಬಗ್ಗೆ ಸುಳಿವು ದೊರಕಿದೆ. ಡಿಎನ್‍ಎ ಪರೀಕ್ಷೆ ಫಲಿತಾಂಶ ಮತ್ತು ಹುಟ್ಟುವಾಗ ಇದ್ದ ಗುರುತುಗಳು, ಜನ್ಮ ದಿನಾಂಕ ಎಲ್ಲವೂ ಆಕೆ ಮೆಲಿಸ್ಸಾ ಎನ್ನುವುದನ್ನು ದೃಢಪಡಿಸಲು ನೆರವಾದವು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಫೋಟ್‍ವರ್ತ್‍ನ ಚರ್ಚ್‍ನಲ್ಲಿ ನಡೆದ ಸಮಾರಂಭದಲ್ಲಿ ಮೆಲಿಸ್ಸಾ ಆಕೆಯ ತಂದೆ, ತಾಯಿ ಮತ್ತು ಇಬ್ಬರು ಒಡಹುಟ್ಟಿದವರ ಜತೆ ಭಾಗವಹಿಸಿದ್ದರು ಎಂದು 'ಗಾರ್ಡಿಯನ್' ವರದಿ ಮಾಡಿದೆ.

ಲಿಸಾ ಜೋ ಶ್ಚೆಲ್ ಎಂಬ ಕ್ಲಿನಿಕಲ್ ಲ್ಯಾಬ್ ವಿಜ್ಞಾನಿ ಮತ್ತು ಹವ್ಯಾಸಿ ವಂಶವಾಹಿ ತಜ್ಞೆಯ ನೆರವು ಪಡೆದು ಡಿಎನ್‍ಎ ಫಲಿತಾಂಶವನ್ನು ವಿಶ್ಲೇಷಿಸಲಾಗಿತ್ತು ಎಂದು ಮೆಲಿಸ್ಸಾ ಅವರ ಸಹೋದರಿ ಶರೋನ್ ಹೈಸ್ಮಿತ್ ಹೇಳಿದ್ದಾರೆ. ಈ ಬಗ್ಗೆ ndtv.com ವರದಿ ಮಾಡಿದೆ.

Similar News