×
Ad

ಮೆಟಲ್ ಡಿಟೆಕ್ಟರ್ ಮೂಲಕ ತಪಾಸಣೆ ವೇಳೆ ಪ್ಲೇಯಿಂಗ್ ಹಾಲ್ ಮಧ್ಯೆ ಬರಿಗಾಲಲ್ಲಿ ನಿಲ್ಲಿಸಿ ಭಾರತದ ಚೆಸ್ ಆಟಗಾರನಿಗೆ ಅವಮಾನ

Update: 2022-11-29 10:46 IST

ಹೊಸದಿಲ್ಲಿ: “ಬುಂಡೆಸ್ಲಿಗಾ ಚೆಸ್ ಲೀಗ್‌ನಲ್ಲಿ ನನ್ನ ಪಂದ್ಯಕ್ಕೂ ಮುನ್ನ ಮೆಟಲ್ ಡಿಟೆಕ್ಟರ್ ಮೂಲಕ ತಪಾಸಣೆ ವೇಳೆ ಪ್ಲೇಯಿಂಗ್ ಹಾಲ್‌ನ ಮಧ್ಯದಲ್ಲಿ ಬರಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದರಿಂದ ನಾನು ಅವಮಾನಿತನಾಗಿದ್ದೇನೆ" ಎಂದು ಭಾರತೀಯ ಗ್ರ್ಯಾಂಡ್ ಮಾಸ್ಟರ್ ಎಸ್‌.ಎಲ್. ನಾರಾಯಣನ್ ಹೇಳಿದ್ದಾರೆ.

ಅವಮಾನದಿಂದ ನಾರಾಯಣನ್ ಎಷ್ಟು ಬಾಧಿತರಾಗಿದ್ದರೆಂದರೆ ಅವರು  ತನ್ನ ತಂಡ SV ಡೆಗೆನ್‌ಡಾರ್ಫ್ ಪರ ಆಡಿದ  ಋತುವಿನ ಮೊದಲ ಪಂದ್ಯವನ್ನು ಸೋತರು. ಝೆಕ್ ರಿಪಬ್ಲಿಕ್ ನಂ.1 ಜಿಎಂ ಡೇವಿಡ್ ನವರಾ  ವಿರುದ್ಧ ನಾರಾಯಣನ್ ಸೋತರು. ಇದು SV ಡೆಗೆನ್‌ಡಾರ್ಫ್ ತಂಡಕ್ಕೆ ಋತುವಿನಲ್ಲಿ ಅವರ ಮೊದಲ ಸೋಲಾಗಿತ್ತು.

24 ವರ್ಷದ ನಾರಾಯಣನ್  ರವಿವಾರ ತಡರಾತ್ರಿ ಟ್ವಿಟರ್ ಹಾಗೂ  ಫೇಸ್‌ಬುಕ್‌ನಲ್ಲಿ ಹೇಳಿಕೆಯನ್ನು ನೀಡಿದ್ದು, ತಾನು ಎದುರಿಸಿರುವ  ಅಗ್ನಿಪರೀಕ್ಷೆಯನ್ನು ವಿವರಿಸಿದ್ದಾರೆ.

"ನಾನು ಇಂದು ಬುಂಡೆಸ್ಲಿಗಾದಲ್ಲಿ ಆಡಿದ್ದೇನೆ. ಮೊದಲ ಸುತ್ತಿಗಿಂತ ಮೊದಲು, ರ್ಯಾಂಡಮ್ ಪರಿಶೀಲನೆಗಾಗಿ ಆರ್ಬಿಟರ್ ಆಯ್ಕೆ ಮಾಡಿದ 5 ಆಟಗಾರರಲ್ಲಿ ನಾನು ಒಬ್ಬನಾಗಿದ್ದೆ. ಮೆಟಲ್ ಡಿಟೆಕ್ಟರ್ ಮೂಲಕ ತಪಾಸಣೆ ನಡೆಸಿದಾಗ ಬೀಪ್ ಸದ್ದು ಕೇಳಿಸಿತು. ಹೀಗಾಗಿ, ನನ್ನ ಬೂಟುಗಳನ್ನು ತೆಗೆಯುವಂತೆ ಹೇಳಿದರು.  ಅವರು ಮತ್ತೊಮ್ಮೆ ಪರಿಶೀಲಿಸಿದರು. ಆಗ ಬೀಪ್ ಸದ್ದು ಮಾಡಿತು. ಆಗ, ನನ್ನ ಸಾಕ್ಸ್ ತೆಗೆಯುವಂತೆ ಹೇಳಿದರು. ಆರ್ಬಿಟರ್ ನಂತರ ಮೆಟಲ್ ಡಿಟೆಕ್ಟರ್ ಅನ್ನು ನನ್ನ ಬೆತ್ತಲೆ ಪಾದದ ಮೇಲೆ ಓಡಿಸಿದರು. ಆಗ  ನಮಗೆ ಮತ್ತೆ ಬೀಪ್ ಶಬ್ದ ಕೇಳಿಸಿತು.

"ಈ ಹಂತದಲ್ಲಿ, ನನಗೆ ಪಕ್ಕಕ್ಕೆ ಸರಿಯಲು ಹೇಳಲಾಯಿತು ಹಾಗೂ  ಮುಂದಿನ ಆಟಗಾರನನ್ನು ತಪಾಸಣೆ ನಡೆಸಲಾಯಿತು. ಆಗ ನನಗೆ  ಎಷ್ಟು ಕೆಟ್ಟ ಭಾವನೆ ಉಂಟಾಗಿದೆ ಎಂಬುದನ್ನು ವಿವರಿಸುವುದು ಕಷ್ಟವಾಗುತ್ತದೆ. ಇದೆಲ್ಲವೂ ಆಟದ ಸಭಾಂಗಣದ ಮಧ್ಯದಲ್ಲಿ ನಡೆಯಿತು. ನಾನು ಸಾಕ್ಸ್ ಅನ್ನು ಹಿಡಿದು ಬರಿ ಎಡಗಾಲಿನೊಂದಿಗೆ ನಿಂತಿದ್ದೆ. ಆಗ ನನಗೆ ಹೇಗಾಗಿರಬಹುದು  ಎಂದು ಊಹಿಸಿ.

ಬೇರೊಬ್ಬ  ಆಟಗಾರನ ಪಾದದಲ್ಲೂ  ಬೀಪ್ ಶಬ್ದವನ್ನು ಆಲಿಸಿದ ಸೆಕ್ಯುರಿಟಿಯು ಬೀಪ್‌ಗೆ ಕಾರಣವೇನೆಂದು ಅರಿತುಕೊಳ್ಳಲು ಕೆಳಗಿನ ಕಾರ್ಪೆಟ್ ಅನ್ನು ಪರೀಕ್ಷಿಸಲು ನಿರ್ಧರಿಸಿದ. ಅದುವೇ ಬೀಪ್ ಗೆ ಕಾರಣ ಎಂದು ಗೊತ್ತಾಯಿತು. ಅಲ್ಲಿ ನನ್ನ ಅಗ್ನಿಪರೀಕ್ಷೆಯು ಕೊನೆಗೊಂಡಿತು ”ಎಂದು ನಾರಾಯಣನ್ ಬರೆದಿದ್ದಾರೆ.

ಆರ್ಬಿಟರ್  ನನ್ನಲ್ಲಿ ಕ್ಷಮೆಯಾಚಿಸಿದರು. ಆದರೆ ಅದರಿಂದ ನನಗೆ ಎಷ್ಟು ಮುಜುಗರವಾಯಿತು ಎಂದು ನಾನು ಹೇಳಲೇಬೇಕು. ನೆನಪಿಡಿ, ಇದು ನನ್ನ ಸುತ್ತಿನ ಸ್ಪರ್ಧೆಯ ಕೆಲವೇ ನಿಮಿಷಗಳ ಮೊದಲು ನಡೆದಿತ್ತು ಎಂದು ನಾರಾಯಣನ್ ಬರೆದಿದ್ದಾರೆ.

ಪ್ರವೇಶದ್ವಾರದಲ್ಲಿ ಭದ್ರತಾ ತಪಾಸಣೆಗಳನ್ನು ಮಾಡಲಾಗುತ್ತದೆ, ವಿವರವಾದ ಹುಡುಕಾಟವನ್ನು ಸಾಮಾನ್ಯವಾಗಿ ಖಾಸಗಿಯಾಗಿ ನಡೆಸಲಾಗುತ್ತದೆ.  ಸ್ಪರ್ಧೆಯ  ಹಾಲ್‌ನ ಮಧ್ಯದಲ್ಲಿ ಬರಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದು ನಾರಾಯಣನ್ ಅವರನ್ನು ಕೆರಳಿಸಿದೆ.  ಆ ಸಂದರ್ಭ ನಾರಾಯಣನ್ ರನ್ನು ಇತರ ಆಟಗಾರರು ಅನುಮಾನದಿಂದ ನೋಡುತ್ತಿದ್ದರು.

Similar News