ಬಿಜೆಪಿಯ ವಂಶಾಡಳಿತ ಆರೋಪಕ್ಕೆ ಫೋಟೋ ಮೂಲಕ ಅಖಿಲೇಶ್ ಯಾದವ್ ಪ್ರತ್ಯುತ್ತರ

Update: 2022-11-29 06:49 GMT

ಲಕ್ನೋ: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಇಂದು ಟ್ವಿಟರ್‌  ಪೋಸ್ಟ್‌ನಲ್ಲಿ ಎಲ್ಲಾ ಬಿಜೆಪಿ ನಾಯಕರ ಪುತ್ರರು ಹಾಗೂ ಪುತ್ರಿಯರ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಬಿಜೆಪಿಯ ವಂಶಾಡಳಿತ ಆರೋಪಕ್ಕೆ ಪ್ರತ್ಯುತ್ತರ ನೀಡಿದ್ದಾರೆ.

ಸಮಾಜವಾದಿ ಪಕ್ಷದ ಸಂಸ್ಥಾಪಕ  ಮುಲಾಯಂ ಸಿಂಗ್ ಯಾದವ್ ಅವರ ನಿಧನದ ನಂತರ ತೆರವಾಗಿರುವ ಉತ್ತರ ಪ್ರದೇಶದ ಮೈನ್‌ಪುರಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆಯ ಕೆಲವು ದಿನಗಳ ಮೊದಲು ಈ ಟ್ವಿಟರ್ ಪೋಸ್ಟ್ ಮಾಡಿದ್ದಾರೆ.

ಸಮಾಜವಾದಿ ಪಕ್ಷವು ಅಖಿಲೇಶ್ ಯಾದವ್ ಅವರ ಪತ್ನಿ ಹಾಗೂ  ಮಾಜಿ ಸಂಸದೆ ಡಿಂಪಲ್ ಯಾದವ್ ಅವರನ್ನು ಮೈನ್ ಪುರಿಯಲ್ಲಿ  ತನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಬಿಜೆಪಿಯು ಸಮಾಜವಾದಿ ಪಕ್ಷದ ಮಾಜಿ ಸಂಸದ ರಘುರಾಜ್ ಸಿಂಗ್ ಶಾಕ್ಯಾ ಅವರನ್ನು ಪ್ರಮುಖ ಉಪಚುನಾವಣೆ ಸ್ಪರ್ಧೆಗೆ ಆಯ್ಕೆ ಮಾಡಿದೆ.

ಬಿಜೆಪಿ  ಸಂಘಟನೆಯಲ್ಲಿ ಪ್ರಮುಖ ಸ್ಥಾನಗಳನ್ನು ಅಲಂಕರಿಸಿರುವ ಹಿರಿಯ ಬಿಜೆಪಿ ನಾಯಕರಾದ ಬಿ.ಎಸ್. ಯಡಿಯೂರಪ್ಪ, ರಾಜನಾಥ್ ಸಿಂಗ್, ರಮಣ್ ಸಿಂಗ್, ಕೈಲಾಶ್ ವಿಜಯವರ್ಗಿಯಾ ಹಾಗೂ  ಅವರ ಸಂಬಂಧಿಕರ ಫೋಟೊದ ಜೊತೆಗೆ   "ಚಿತ್ರ ಅಭಿ ಬಾಕಿ ಹೈ (ಚಿತ್ರ ಇನ್ನೂ ಮುಗಿದಿಲ್ಲ)" ಎಂದು ಯಾದವ್ ಬರೆದಿದ್ದಾರೆ.

ಡಿಂಪಲ್ ಯಾದವ್ ಅವರನ್ನು ಮೈನ್‌ಪುರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ ನಂತರ ಬಿಜೆಪಿಯ ವಂಶರಾಜಕೀಯ  ಆರೋಪವನ್ನು ಎದುರಿಸಲು ಯಾದವ್ ಈ ಟ್ವೀಟ್ ಮಾಡಿದ್ದಾರೆ.

Similar News