ಹೆಚ್ಚು ಇಲೆಕ್ಟೋರಲ್ ಬಾಂಡ್‍ಗಳ ಮಾರಾಟ ಮುಂಬೈಯಲ್ಲಿ; ಗರಿಷ್ಠ ನಗದೀಕರಣ ಎಸ್‍ಬಿಐ ನ ಹೊಸದಿಲ್ಲಿ ಶಾಖೆಯಲ್ಲಿ

ಆರ್‌ಟಿಐ ಉತ್ತರದಿಂದ ಬಹಿರಂಗ

Update: 2022-11-29 09:07 GMT

ಹೊಸದಿಲ್ಲಿ: ಇಲೆಕ್ಟೋರಲ್ ಬಾಂಡ್ ಯೋಜನೆ 2018 ರಲ್ಲಿ ಜಾರಿಯಾದಂದಿನಿಂದ  ಇತ್ತೀಚಿಗಿನ ತನಕ (ಅಂದರೆ ಅಂಕಿಅಂಶ ಲಭ್ಯವಿರುವ ಅಕ್ಟೋಬರ್ 10, 2022) ಶೇ 65 ರಷ್ಟು ಬಾಂಡ್‍ಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಂಬೈ, ಕೊಲ್ಕತ್ತಾ ಮತ್ತು ಹೈದರಾಬಾದ್ ಶಾಖೆಗಳಲ್ಲಿ ಮಾರಾಟವಾಗಿದ್ದರೆ, ಈ ಒಟ್ಟು ಮಾರಾಟವಾದ ಬಾಂಡ್‍ಗಳ ಪೈಕಿ ಶೇ 62 ರಷ್ಟು ಬಾಂಡ್‍ಗಳನ್ನು ಬ್ಯಾಂಕಿನ ಹೊಸದಿಲ್ಲಿ ಶಾಖೆಯಲ್ಲಿ ನಗದೀಕರಿಸಲಾಗಿತ್ತು ಎಂದು  ಎಸ್‍ಬಿಐ ಒದಗಿಸಿದ ಆರ್‍ಟಿಐ ಉತ್ತರವೊಂದರಿಂದ ತಿಳಿದು ಬಂದಿದೆ. 

2018 ರಿಂದೀಚೆಗೆ ರೂ 10,791.47 ಕೋಟಿ ಮೌಲ್ಯದ ಬಾಂಡ್‍ಗಳನ್ನು ಎಸ್‍ಬಿಐ ನ 17 ಶಾಖೆಗಳ ಮೂಲಕ ಮಾರಾಟ ಮಾಡಲಾಗಿದೆ. ಬ್ಯಾಂಕಿನ ಒಟ್ಟು 29 ಶಾಖೆಗಳಿಗೆ ಬಾಂಡ್‍ಗಳನ್ನು ಮಾರಾಟ ಮಾಡುವ ಅನುಮತಿಯಿದೆ ಎಂದು ಆರ್‍ಟಿಐ ಉತ್ತರದಲ್ಲಿ ತಿಳಿಸಲಾಗಿದೆ.

ಗರಿಷ್ಠ ಇಲೆಕ್ಟೋರಲ್ ಬಾಂಡ್‍ಗಳು ಮುಂಬೈಯಲ್ಲಿ (ರೂ 2,741.12 ಕೋಟಿ) ಮಾರಾಟವಾಗಿದ್ದರೆ ಕೊಲ್ಕತ್ತಾದಲ್ಲಿ ರೂ 2,387.71 ಕೋಟಿ, ಹೈದರಾಬಾದ್‍ನಲ್ಲಿ ರೂ 1,885.35 ಕೋಟಿ ಮೌಲ್ಯದ ಬಾಂಡ್‍ಗಳು ಮಾರಾಟವಾಗಿವೆ ಎಂದು ಕೊಮ್ಮೊಡೋರ್ (ನಿವೃತ್ತ) ಲೋಕೇಶ್ ಬಾತ್ರ ಅವರಿಗೆ ದೊರೆತ ಆರ್‍ಟಿಐ ಉತ್ತರದಿಂದ ತಿಳಿದು ಬಂದಿದೆ.

ಬ್ಯಾಂಕಿನ ಹೊಸದಿಲ್ಲಿ ಶಾಖೆ ರೂ 1,519.44 ಕೋಟಿ ಮೌಲ್ಯದ ಬಾಂಡ್‍ಗಳನ್ನು ಮಾರಾಟ ಮಾಡಿದ್ದರೆ ಅದು ರೂ 6,748.97 ಕೋಟಿ ಮೌಲ್ಯದ ಬಾಂಡ್‍ಗಳನ್ನು ನಗದೀಕರಿಸಿದೆ. ಹೈದರಾಬಾದ್ ಶಾಖೆ ರೂ 1,384.03 ಕೋಟಿ  ಮೌಲ್ಯದ ಹಾಗೂ ಕೊಲ್ಕತ್ತಾ ಶಾಖೆ ರೂ 1,012.98 ಕೋಟಿ ಮೌಲ್ಯದ ಬಾಂಡ್‍ಗಳನ್ನು ನಗದೀಕರಿಸಿವೆ.

ಇಲ್ಲಿಯ ತನಕ ಎಸ್‍ಬಿಐ ನ 14 ಪ್ರಾದೇಶಿಕ ಶಾಖೆಗಳಲ್ಲಿ ಬಾಂಡ್‍ಗಳನ್ನು ನಗದೀಕರಿಸಲಾಗಿದೆ. ಶ್ರೀನಗರ ಮತ್ತು ಗ್ಯಾಂಕ್ಟಾಕ್ ಶಾಖೆಗಳಲ್ಲಿ ಯಾವುದೇ ಇಲೆಕ್ಟೋರಲ್ ಬಾಂಡ್‍ಗಳ ಮಾರಾಟ ನಡೆಯದೇ ಇದ್ದರೂ ಕ್ರಮವಾಗಿ ರೂ 50 ಲಕ್ಷ ಹಾಗೂ ರೂ 2.5 ಕೋಟಿ ಮೌಲ್ಯದ ಬಾಂಡ್‍ಗಳನ್ನು ಇಲ್ಲಿ ನಗದೀಕರಿಸಲಾಗಿದೆ. ಬಿಜೆಪಿ ಪಕ್ಷವು ಹೆಚ್ಚಿನ ಬಾಂಡ್‌ ಗಳನ್ನು ಹೊಂದಿದೆ. 2019-20 ರಲ್ಲಿ ಬಿಜೆಪಿ ಪಕ್ಷವೊಂದೇ 76% ಎಲೆಕ್ಟಾರಲ್‌ ಬಾಂಡ್‌ ಗಳನ್ನು ಹೊಂದಿತ್ತು.

Similar News