ಬೈಂದೂರು | ದೇವಸ್ಥಾನಕ್ಕೆ ಪ್ರವೇಶ, ಪೂಜೆಗೆ ನಿರಾಕರಣೆ ಆರೋಪ: ಅರ್ಚಕರ ವಿರುದ್ಧ ಪ್ರಕರಣ ದಾಖಲು

Update: 2022-11-29 11:55 GMT

ಬೈಂದೂರು, ನ.29: ದೇವಸ್ಥಾನಕ್ಕೆ ಪ್ರವೇಶ ಹಾಗೂ ಪೂಜೆಗೆ ನಿರಾಕರಿಸಿ ಜಾತಿನಿಂದನೆಗೈದ ಅರ್ಚಕರ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಂಬದಕೋಣೆ ಗ್ರಾಮದ ಹಳಗೇರಿಯ ಶಿವರಾಮ(51) ಎಂಬವರು ನ.28ರಂದು ಬೆಳಗ್ಗೆ ದೇವರಿಗೆ ಪೂಜೆ ಮಾಡಿಸಲು ಹಣ್ಣುಕಾಯಿ, ಹೂವು ಹಾಗೂ ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ಮಗನೊಂದಿಗೆ ಕಂಬದ ಕೋಣೆ ಗ್ರಾಮದ ಕೊಕ್ಕೇಶ್ವರ ದೇವಸ್ಥಾನಕ್ಕೆ ಹೋಗಿದ್ದರು. ದೇವಸ್ಥಾನದ ಗರ್ಭ ಗುಡಿಯ ಬಳಿ ದೇವಸ್ಥಾನದ ಅರ್ಚಕ ಶೇಷಗಿರಿ ಕಾರಂತ್ ಇದ್ದು, ಶಿವರಾಮ ಹಾಗೂ ಅವರ ಮಗನನ್ನು ತಡೆದು ನಿಲ್ಲಿಸಿದ್ದರೆನ್ನಲಾಗಿದೆ.

ಶೇಷಗಿರಿ ಕಾರಂತರವರಲ್ಲಿ ದೇವರಿಗೆ ಪೂಜೆ ಮಾಡಿಕೊಡುವಂತೆ ಶಿವರಾಮ ವಿನಂತಿಸಿಕೊಂಡಿದ್ದು ಅದಕ್ಕೆ ಶೇಷಗಿರಿ ಕಾರಂತರು ಒಪ್ಪಲಿಲ್ಲ ಎನ್ನಲಾಗಿದೆ. ಈ ಮೂಲಕ ಅರ್ಚಕರು ಶಿವರಾಮ ಹಾಗೂ ಅವರ ಮಗನಿಗೆ ಜಾತಿನಿಂದನೆ ಮಾಡಿ ದೇವಸ್ಥಾನಕ್ಕೆ ಪ್ರವೇಶ ಹಾಗೂ ಪೂಜೆಗೆ ನಿರಾಕರಿಸಿರುವುದಾಗಿ ದೂರಲಾಗಿದೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 3(1)(ಆರ್), (ಎಸ್), (ವೈ), (ಝೆಡ್‌ಎ), (ಸಿ) ಎಸ್‌ಸಿ/ಎಸ್‌ಟಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

Similar News