ಈ ವರ್ಷ ಎಚ್‌ಐವಿ ಸೋಂಕಿತ ಗರ್ಭಿಣಿಯರ ಸಂಖ್ಯೆ ಶೂನ್ಯ: ಡಿಎಚ್‌ಓ ಡಾ.ನಾಗಭೂಷಣ ಉಡುಪ

Update: 2022-11-29 15:03 GMT

ಉಡುಪಿ, ನ.29: ಉಡುಪಿ ಜಿಲ್ಲೆಯಲ್ಲಿ 2022-2023 (ಅಕ್ಟೋಬರ್ ವರೆಗೆ)ನೇ ಸಾಲಿನಲ್ಲಿ ಪರೀಕ್ಷೆಗೆ ಒಳಪಟ್ಟ 11733 ಗರ್ಭಿರ್ಣಿಯರ ಪೈಕಿ ಒಬ್ಬರಲ್ಲೂ ಎಚ್‌ಐವಿ ಪಾಸಿಟಿವ್ ಕಂಡುಬಂದಿಲ್ಲ. ಕಳೆದ ವರ್ಷ ಜಿಲ್ಲೆಯಲ್ಲಿ 6 ಮಂದಿ ಎಚ್‌ಐವಿ ಸೋಂಕಿತ ಗರ್ಭಿಣಿಯರು ಪತ್ತೆಯಾಗಿದ್ದಾರೆಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಉಡುಪಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 2022-23 (ಅಕ್ಟೋಬರ್‌ವರೆಗೆ)ನೇ ಸಾಲಿನಲ್ಲಿ 58801 ಮಂದಿಯನ್ನು ಎಚ್‌ಐವಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 137 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 2021-22ನೆ ಸಾಲಿನಲ್ಲಿ 183, 2020-21ನೇ ಸಾಲಿನಲ್ಲಿ 189 ಮಂದಿಯಲ್ಲಿ ಎಚ್‌ಐವಿ ಸೋಂಕು ಪತ್ತೆಯಾಗಿತ್ತು ಎಂದರು.

ಉಡುಪಿ ಜಿಲ್ಲೆಯಲ್ಲಿ 2016ರಿಂದ ಈವರೆಗೆ ಗರ್ಭಿಣಿ ತಾಯಿಯಿಂದ ಮಗುವಿಗೆ ಎಚ್‌ಐವಿ ಸೋಂಕು ಹರಡಿರುವ ಬಗ್ಗೆ ವರದಿಯಾಗಿಲ್ಲ. ಜಿಲ್ಲೆಯ ಉಡುಪಿ ಎಆರ್‌ಟಿ ಸೆಂಟರ್‌ನಲ್ಲಿ 2607, ಕುಂದಾಪುರ ಎಆರ್‌ಟಿ ಸೆಂಟರ್ ನಲ್ಲಿ 1293 ಹಾಗೂ ಕೆಎಂಸಿ ಮಣಿಪಾಲ ಸೆಂಟರ್‌ನಲ್ಲಿ 81 ಮಂದಿ ಸೇರಿದಂತೆ ಒಟ್ಟು 3981 ಮಂದಿ ಎಚ್‌ಐವಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

48 ಎಚ್‌ಐವಿ ಪೀಡಿತರು ಮೃತ್ಯು

ಈ ವರ್ಷದ 137 ಎಚ್‌ಐವಿ ಸೋಂಕಿತರ ಪೈಕಿ 46 ಮಂದಿ ಹೊರ ಜಿಲ್ಲೆ ಹಾಗೂ ಮೂರು ಮಂದಿ ಹೊರ ರಾಜ್ಯದವರಾಗಿದ್ದಾರೆ. ಈ ವರ್ಷ ಜಿಲ್ಲೆಯಲ್ಲಿ 48 ಮಂದಿ ಎಚ್‌ಐವಿ ಸೋಂಕಿತರು ಮೃತಪಟ್ಟಿದ್ದು, ಕಳೆದ ವರ್ಷ 90 ಜನ ಮರಣ ಹೊಂದಿದ್ದರು ಎಂದು ಡಾ.ನಾಗಭೂಷಣ ಉಡುಪ ತಿಳಿಸಿದರು.

ಜಿಲ್ಲೆಯಲ್ಲಿ 2022-23(ಅಕ್ಟೋಬರ್‌ವರೆಗೆ)ನೆ ಸಾಲಿನಲ್ಲಿ 15ಸಾವಿರ ಯುನಿಟ್ ರಕ್ತ ಸಂಗ್ರಹದ ಗುರಿಯೊಂದಿಗೆ 18624 ಯುನಿಟ್ ರಕ್ತ ಸಂಗ್ರಹ ಮಾಡುವ ಮೂಲಕ ಶೇ.124 ಸಾಧನೆ ಮಾಡಲಾಗಿದೆ. ರಕ್ತದಾನ ಮಾಡಿದವರ ರಕ್ತ ಪರೀಕ್ಷಿಸಿದಾಗ ಅದರಲ್ಲಿ 9 ಮಂದಿಗೆ ಎಚ್‌ಐವಿ ಪಾಸಿಟಿವ್ ಕಂಡು ಬಂದಿದೆ. ಕಳೆದ ವರ್ಷ 27985 ಯುನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದರು.

ಲೋ ಪಟ್ಟಿಯಲ್ಲಿ ಉಡುಪಿ

ಎಚ್‌ಐವಿ ಸೋಂಕಿತರ ಪಟ್ಟಿಯಲ್ಲಿ ಬೆಂಗಳೂರು ಮತ್ತು ಬೆಳಗಾವಿ ಜಿಲ್ಲೆಗಳು ಹೈ ಬರ್ಡನ್‌ನಲ್ಲಿದ್ದರೆ, 8 ಜಿಲ್ಲೆಗಳು ಮಿಡಿಯಂ ಬರ್ಡನ್‌ನಲ್ಲಿ ಮತ್ತು ಉಡುಪಿ ಸೇರಿದಂತೆ ಉಳಿದ ಜಿಲ್ಲೆಗಳು ಲೋ ಬರ್ಡನ್‌ನಲ್ಲಿದೆಂದು ಡಾ.ನಾಗಭೂಷಣ ಉಡುಪ ಹೇಳಿದರು.

18ವರ್ಷದೊಳಗಿನ ಎಚ್‌ಐವಿ ಸೋಂಕಿತರು ಹಾಗೂ ಸೋಂಕಿತರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಸರಕಾರ ಪ್ರತಿ ತಿಂಗಳು 1000ರೂ. ಸಹಾಯಧನ ನೀಡುತ್ತಿದೆ. ಅದೇ ರೀತಿ ಸೋಂಕಿತರಿಗೆ ಜಿಲ್ಲೆಯಲ್ಲಿ ಶೇ.50 ರಿಯಾಯಿತಿ ಯಲ್ಲಿ ಬಸ್ ಪಾಸ್ ನೀಡಲಾಗುತ್ತಿದೆ. ಕಳೆದ ವರ್ಷ ಇದಕ್ಕಾಗಿ 16 ಮಂದಿ ಅರ್ಜಿ ಸಲ್ಲಿಸಿದರೆ, ಈ ವರ್ಷ ಕೇವಲ ಎರಡೇ ಅರ್ಜಿಗಳು ಬಂದಿವೆ ಎಂದರು.

ಡಿಸೆಂಬರ್ ತಿಂಗಳಲ್ಲಿ ಜಿಲ್ಲೆಯ 217 ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಎಚ್‌ಐವಿ ಸೇರಿದಂತೆ ಇತರ ಹದಿಹರೆಯದ ಕಾಯಿಲೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಅದೇ ರೀತಿ ಜಿಲ್ಲೆಯ ಶಾಲೆಗಳಲ್ಲಿ ಮಾಹಿತಿ ಕಾರ್ಯಾಗಾರಗಳನ್ನು ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು ಎಸ್.ವಿ. ಉಪಸ್ಥಿತರಿದ್ದರು.

ಡಿ.1ರಂದು ವಿಶ್ವಏಡ್ಸ್ ದಿನ ಜಾಥಾ-ಜಾಗೃತಿ

ವಿಶ್ವಏಡ್ಸ್ ದಿನ ಜಾಥಾ ಮತ್ತು ಜಾಗೃತಿ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮ ದಡಿಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ಸನ್ಮಾನ ಕಾರ್ಯಕ್ರಮವು ಡಿ.1ರಂದು ಬೆಳಗ್ಗೆ 10 ಗಂಟೆಗೆ ನಗರದ ಮಿನಿ ಟೌನ್ ಹಾಲ್‌ನಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಉದ್ಘಾಟಿಸಲಿದ್ದು, ಜಿಪಂ ಮುಖ್ಯಕಾರ್ಯನಿರ್ವಹಣಾಧಿ ಕಾರಿ ಪ್ರಸನ್ನ ಎಚ್. ಅಧ್ಯಕ್ಷತೆ ವಹಿಸಲಿ ರುವರು. ಬೋರ್ಡ್ ಹೈಸ್ಕೂಲ್‌ನಿಂದ ಕೆ.ಎಂ. ಮಾರ್ಗವಾಗಿ ಮಿನಿ ಟೌನ್ ಹಾಲ್‌ವರೆಗೆ ನಡೆಯುವ ಜಾಥಾ ಕಾರ್ಯಕ್ರಮವನ್ನು ಅಂದು ಬೆಳಗ್ಗೆ 9.15ಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ಉದ್ಘಾಟಿಸಲಿರುವರು.

Similar News