ಪಿಡಿಓ ಸಹೋದರನ ಒತ್ತುವರಿ ಜಮೀನು, ಅನಧಿಕೃತ ಕಟ್ಟಡ ತೆರವಿಗೆ ಉಡುಪಿ ತಹಶೀಲ್ದಾರ್ ಆದೇಶ

Update: 2022-11-29 15:12 GMT

ಉಡುಪಿ, ನ.29: ಹೆಬ್ರಿ, ಮುದ್ರಾಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸದಾಶಿವ ಸೇರ್ವೆಗಾರ್ ಅವರ ಸಹೋದರ ಅನಂತ ಪದ್ಮನಾಭ ಸೇರ್ವೆಗಾರ್ ಪೆರ್ಡೂರು ಗ್ರಾಮದ ಸ.ನಂ.296ರಲ್ಲಿ ಒತ್ತುವರಿ ಮಾಡಿರುವ 0.15 ಎಕ್ರೆ ಸರಕಾರಿ ಜಮೀನು ಮತ್ತು ಅದರಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ಕಟ್ಟಡವನ್ನು ತಕ್ಷಣದಿಂದ ಅನ್ವಯ ವಾಗುವಂತೆ ತೆರವುಗೊಳಿಸಬೇಕು ಎಂದು ಉಡುಪಿ ತಹಶೀಲ್ದಾರ್ ನ.19ರಂದು ಆದೇಶ ಹೊರಡಿಸಿದ್ದಾರೆ.

ಪಿಡಿಓ ಸದಾಶಿವ ಸೇರ್ವೆಗಾರ್ ತಮ್ಮ ಅಧಿಕಾರ ದುರುಪಯೋಗ ಪಡಿಸಿ, ತನ್ನ ಸಹೋದರ ಪದ್ಮನಾಭ ಸೇರ್ವೆಗಾರ್ ಜೊತೆ ಸೇರಿಕೊಂಡು ಸರಕಾರಿ ಜಾಗವನ್ನು ಒತ್ತುವರಿ ಮಾಡಿ ಅನಧಿಕೃತ ಬಹುಮಹಡಿ ಕಟ್ಟಡ ಕಾಮಗಾರಿ ಮಾಡುತ್ತಿದ್ದು, ಅದನ್ನು ತೆರವುಗೊಳಿಸುವಂತೆ ನವೀನ್‌ ಎಂಬವರು ದೂರು ನೀಡಿದ್ದರು. ಇದರ ವಿರುದ್ಧ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸಿ ತಾಲೂಕು ದಂಡಾಧಿಕಾರಿಗಳಿಗೆ ದೂರು ಸಲ್ಲಿಸಿತ್ತು. ಒತ್ತುವರಿ ಮಾಡಿಕೊಂಡು ನಿರ್ಮಿಸಿದ ಅಕ್ರಮ ಕಟ್ಟಡದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಗಿತ್ತು.

ಈ ದೂರಿನ ಬಗ್ಗೆ ತಹಶೀಲ್ದಾರ್, ಭೂಮಾಪಕರಿಂದ ಅಳತೆ ಮಾಡಿಸಿ ಕಂದಾಯ ನಿರೀಕ್ಷಕರ ತನಿಖಾ ವರದಿ ಪಡೆದು, ಅನಂತ ಪದ್ಮನಾಭ ಸೇರ್ವೆ ಗಾರ್ ಎಂಬವರು ಪೆರ್ಡೂರು ಗ್ರಾಮದಲ್ಲಿ ಸರಕಾರಿ ಜಮೀನು ಒತ್ತುವರಿ ಮಾಡಿರುವುದು ಹಾಗೂ ಅದರಲ್ಲಿ ಅನಧಿಕೃತವಾಗಿ ವಾಸ್ತವ್ಯದ ಕಟ್ಟಡ ನಿರ್ಮಿಸಿರುವುದು ಕಂಡುಬಂದಿದೆ.

ಈ ಕುರಿತು ಅನಂತ ಪದ್ಮನಾಭ ಸೇರ್ವೆಗಾರ್‌ಗೆ ಅನಧಿಕೃತವಾಗಿ ನಿರ್ಮಿಸುತ್ತಿರುವ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸುವಂತೆ ಹಾಗೂ ಒತ್ತುವರಿ ಮಾಡಿರುವ ಜಾಗದ ಬಗ್ಗೆ ಕ್ರಮ ಜರಗಿಸಲಾಗುವುದು ಎಂದು ನೋಟೀಸ್ ಜಾರಿ ಮಾಡಲಾಗಿತ್ತು. ಆದರೆ ಈ ನೋಟೀಸಿಗೆ ಒತ್ತುವರಿದಾರರಿಂದ ಯಾವುದೇ ಉತ್ತರ ಬಂದಿರುವುದಿಲ್ಲ ಎಂದು ತಹಶೀಲ್ದಾರ್ ಆದೇಶದಲ್ಲಿ ತಿಳಿಸಲಾಗಿದೆ.

ಈ ಕಾರಣಗಳಿಂದಾಗಿ ಒತ್ತುವರಿದಾರ ಅನಂತ ಪದ್ಮನಾಭ ಸೇರ್ವೆಗಾರರು ಒತ್ತುವರಿ ಮಾಡಿರುವ ಜಮೀನು ಮತ್ತು ಅದರಲ್ಲಿರುವ ಅನಧಿಕೃತ ಕಟ್ಟಡವನ್ನು ತಕ್ಷಣದಿಂದ ಅನ್ವಯವಾಗುವಂತೆ ತೆರವುಗೊಳಿಸಬೇಕು. ಉಡುಪಿ ಕಂದಾಯ ನಿರೀಕ್ಷಕರು ಮತ್ತು ಪೆರ್ಡೂರು ಗ್ರಾಮ ಕರಣಿಕರು ಒತ್ತುವರಿ ಜಮೀನನ್ನು ಕೂಡಲೇ ತೆರವುಗೊಳಿಸಿ ಸ್ಥಳ ಮಹಜರು ನಡೆಸಿ ಸ್ವಾಧೀನ ಪಡೆದುಕೊಂಡು ಕೈಗೊಂಡ ಕ್ರಮದ ಬಗ್ಗೆ ವರದಿ ನೀಡಲು ತಹಶೀಲ್ದಾರ್ ತಮ್ಮ ಆದೇಶದಲ್ಲಿ ನಿರ್ದೇಶಿಸಿದ್ದಾರೆ.

10 ದಿನಗಳಾದರೂ ಆದೇಶ ಜಾರಿಯಾಗಿಲ್ಲ: ಸೊರಕೆ

ಸರಕಾರಿ ಜಾಗ ಒತ್ತುವರಿ ಹಾಗೂ ಅನಧಿಕೃತ ಕಟ್ಟಡ ತೆರವುಗೊಳಿಸುವಂತೆ ತಹಶೀಲ್ದಾರ್ ಮಾಡಿರುವ ಆದೇಶವು ಕೆಲವೊಂದು ಭ್ರಷ್ಟ ಅಧಿಕಾರಿಗಳಿಂದ ಆಗುತ್ತಿರುವ ಅಧಿಕಾರ ದುರುಪಯೋಗದ ಬಗ್ಗೆ ಹಾಗೂ ಬಡಜನರ ಪರ ನಿರಂತರ ಧ್ವನಿಯೆತ್ತಿ ಹೋರಾಟ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿದ ಜಯ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ತಿಳಿಸಿದ್ದಾರೆ.‌

ಗ್ರಾಮ ಲೆಕ್ಕಿಗರಿಗೆ, ಗ್ರಾಪಂ ಅಧಿಕಾರಿಗೆ ಹಾಗೂ ಕಂದಾಯ ನಿರೀಕ್ಷಕರಿಗೆ, ಪೊಲೀಸ್ ರಕ್ಷಣೆ ಪಡೆದು ಜಾಗ ಮತ್ತು ಅಕ್ರಮ ಕಟ್ಟಡವನ್ನು ಕೂಡಲೇ ತೆರವುಗೊಳಿಸಿ, ಸರಕಾರದ ಸ್ವಾಧೀನಕ್ಕೆ ಒಳಪಡಿಸಬೇಕೆಂದು, ತಹಶೀಲ್ದಾರ್ ಆದೇಶ ಹೊರಡಿಸಿ 10 ದಿನಗಳಾದರೂ, ಸಂಬಂಧಪಟ್ಟ ಅಧಿಕಾರಿಗಳು ಇನ್ನೂ ಆದೇಶ ವನ್ನು ಕಾರ್ಯರೂಪಕ್ಕೆ ತರಲು ಹಿಂದೇಟು ಹಾಕುತ್ತಿರುವುದು ವಿಷಾದನೀಯ ಎಂದು ಅವರು ತಿಳಿಸಿದ್ದಾರೆ.

ಆದಷ್ಟು, ಶೀಘ್ರವಾಗಿ ತಾಲೂಕು ದಂಡಾಧಿಕಾರಿಗಳ ಆದೇಶದಂತೆ ಅಕ್ರಮ ಕಟ್ಟಡವನ್ನು ನೆಲಸಮಗೊಳಿಸುವ ಕಾರ್ಯಾಚರಣೆ ಕೈಗೊಳ್ಳಬೇಕು ಮತ್ತು ಅಕ್ರಮ ಎಸಗಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಇದರ ವಿರುದ್ಧ ಮತ್ತೊಮ್ಮೆ, ಇನ್ನಷ್ಟು ತೀವ್ರ ಸ್ವರೂಪದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. 

Similar News