ಪತ್ರಕರ್ತರು ತಮ್ಮ ಕೆಲಸವನ್ನಷ್ಟೇ ಮಾಡಬೇಕು: ಚೀನಾ

Update: 2022-11-29 15:45 GMT

ಬೀಜಿಂಗ್, ನ.29: ಪತ್ರಕರ್ತರು ತಮ್ಮ ವೃತ್ತಿಗೆ ಸಂಬಂಧಿಸದ ಚಟುವಟಿಕೆಯನ್ನು ತ್ಯಜಿಸಬೇಕು. ತಮ್ಮ ಕೆಲಸವನ್ನಷ್ಟೇ ಮಾಡಬೆಕು ಎಂದು ಚೀನಾ ವಿದೇಶಾಂಗ ಇಲಾಖೆಯ ವಕ್ತಾರ ಝಾವೊ ಲಿಜಿಯನ್ ಮಂಗಳವಾರ ಹೇಳಿದ್ದಾರೆ.

ಶಾಂಘೈಯಲ್ಲಿ ರವಿವಾರ ಕೋವಿಡ್ ನಿರ್ಬಂಧ ವಿರೋಧಿಸಿ ನಡೆದ ಪ್ರತಿಭಟನೆಯ ಸಂದರ್ಭ ತನ್ನ ಪತ್ರಕರ್ತನನ್ನು ಚೀನಾ ಪೊಲೀಸರು ಥಳಿಸಿ ಬಂಧಿಸಿದ್ದಾರೆ ಎಂಬ ಬಿಬಿಸಿ ಹೇಳಿಕೆಗೆ ಲಿಜಿಯನ್ ಪ್ರತಿಕ್ರಿಯಿಸುತ್ತಿದ್ದರು. ಬಿಬಿಸಿ ಜವಾಬ್ದಾರಿಯಿಂದ ವರ್ತಿಸುವ ಬದಲು ತನ್ನನ್ನು ಮುಗ್ದ ಬಲಿಪಶು ಎಂಬಂತೆ ಬಿಂಬಿಸುತ್ತಿದೆ. ಪ್ರಕರಣವನ್ನು ಖಂಡಿಸುವ ಮೂಲಕ ಬ್ರಿಟನ್ ಸರಕಾರ ತನ್ನ ಬೂಟಾಟಿಕೆಯ ದ್ವಿಮುಖ ಧೋರಣೆಯನ್ನು ಜಾಹೀರುಗೊಳಿಸಿದೆ ಎಂದು ಲಿಜಿಯನ್ ಟೀಕಿಸಿದರು.

ಇದಕ್ಕೂ ಮುನ್ನ ಹೇಳಿಕೆ ನೀಡಿದ್ದ ಬ್ರಿಟನ್‌ನ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವೆರ್ಲಿ ‘ಚೀನಾದಲ್ಲಿ ಸರಕಾರದ ವಿರುದ್ಧದ ಪ್ರತಿಭಟನೆ ಅಪರೂಪ. ಪ್ರತಿಭಟನೆ ನಡೆದಾಗ ವಿಶ್ವ ಇದನ್ನು ಗಮನಿಸಬೇಕು. ಚೀನಾ ಸರಕಾರವೂ ಈ ಬಗ್ಗೆ ಗಮನ ಹರಿಸಬೇಕಾಗಿದೆ. ಚೀನಾ ಸರಕಾರ ವಿಧಿಸಿರುವ ಕಟ್ಟುನಿಟ್ಟಾದ ನಿರ್ಬಂಧದ ಬಗ್ಗೆ ಜನತೆ ತೀವ್ರ ಅಸಮಾಧಾನಗೊಂಡಿರುವುದು ಸ್ಪಷ್ಟವಾಗಿದೆ’ ಎಂದಿದ್ದರು.

Similar News