ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ಚೀನಾ ಗೌರವಿಸಬೇಕು: ಮಾನವ ಹಕ್ಕು ನಿಗಾ ಸಂಸ್ಥೆ ಆಗ್ರಹ‌

Update: 2022-11-29 16:18 GMT

ನ್ಯೂಯಾರ್ಕ್,ನ.29: ಸರಕಾರದ ಕಠಿಣ ‘ಶೂನ್ಯ ಕೋವಿಡ್’ ನಿರ್ಬಂಧಗಳ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸುವ ಹಾಗೂ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಸಹಿತ ಜನತೆಯ ಮೂಲಭೂತ ಹಕ್ಕುಗಳನ್ನು ಚೀನಾ ಸರಕಾರ ಗೌರವಿಸಬೇಕು ಎಂದು ಮಾನವ ಹಕ್ಕುಗಳ ನಿಗಾ ಸಂಸ್ಥೆ (ಎಚ್‌ಆರ್‌ಡಬ್ಲ್ಯೂ) ಆಗ್ರಹಿಸಿದೆ.

 ಅಧಿಕಾರಿಗಳು ತಪ್ಪಾಗಿ ಬಂಧಿಸಿದ ಎಲ್ಲಾ ಪ್ರತಿಭಟನಾಕಾರರನ್ನು ಬಿಡುಗಡೆಗೊಳಿಸಬೇಕು ಹಾಗೂ ಆನ್‌ಲೈನ್‌ನಲ್ಲಿ ಪ್ರತಿಭಟನೆ ಸಂಬಂಧಿತ ಮಾಹಿತಿ ಪ್ರಸಾರದ ಮೇಲಿನ ಸೆನ್ಸಾರ್‌ಶಿಪ್ ಅನ್ನು ತಕ್ಷಣ ತೆರವುಗೊಳಿಸಬೇಕು ಎಂದು ನ್ಯೂಯಾರ್ಕ್ ಮೂಲದ ಎಚ್‌ಆರ್‌ಡಬ್ಲ್ಯೂ ಒತ್ತಾಯಿಸಿದೆ.

ಚೀನಾ ದೇಶದಾದ್ಯಂತದ ಜನತೆ ತಮ್ಮ ಮಾನವ ಹಕ್ಕುಗಳಿಗೆ ಹಕ್ಕೊತ್ತಾಯ ಸಲ್ಲಿಸುವ ಅಸಾಧಾರಣ ಅಪಾಯದ ಕ್ರಮ ತೆಗೆದುಕೊಂಡಿದ್ದಾರೆ. ಚೀನಾ ಅಧಿಕಾರಿಗಳು ಪ್ರತಿಭಟನೆಯನ್ನು ಹತ್ತಿಕ್ಕುವ ಬದಲು ಎಲ್ಲರೂ ಶಾಂತರೀತಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಒದಗಿಸಬೇಕು ಎಂದು ಮಾನವ ಹಕ್ಕುಗಳ ನಿಗಾ ಸಂಸ್ಥೆಯ ಚೀನಾಕ್ಕೆ ಸಂಬಂಧಿಸಿದ ತಜ್ಞ ಯಾಕ್ಯು ವಾಂಗ್ ಹೇಳಿದ್ದಾರೆ.

 ತಮ್ಮ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕಾಗಿ ಯಾವುದೇ ಅಪಾಯವನ್ನೂ ಎದುರಿಸಲು ಸಿದ್ಧವಾಗಿರುವ ಚೀನಾ ಜನತೆಯ ಆಶಯವನ್ನು ಚೀನಾ ಅಧಿಕಾರಿಗಳು ತೀರಾ ಕೀಳಂದಾಜಿಸಿದ್ದಾರೆ. ಎಲ್ಲರಂತೆ ತಮಗೂ ದೇಶದ ಆಡಳಿತವನ್ನು ನಿರ್ಧರಿಸುವ ಹಕ್ಕು ಇದೆ ಎಂಬುದನ್ನು ಅಸಾಧಾರಣ ಧೈರ್ಯದಿಂದ ಜನತೆ ಚೀನಾ ಕಮ್ಯುನಿಸ್ಟ್ ಪಕ್ಷಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ವಾಂಗ್ ಹೇಳಿದ್ದಾರೆ.

  ಶಾಂಘೈ ಹಾಗೂ ಇತರ ನಗರಗಳಲ್ಲಿ ಪ್ರತಿಭಟನೆಯನ್ನು ಚದುರಿಸಲು ಪೊಲೀಸರು ನಡೆಸಿದ್ದ ಕಾರ್ಯಾಚರಣೆ, ಪ್ರತಿಭಟನಾಕಾರರನ್ನು ಪೊಲೀಸ್ ವ್ಯಾನ್‌ನತ್ತ ಎಳೆದು ತರುವ ವೀಡಿಯೊ ದೃಶ್ಯ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ನಾಂಜಿಂಗ್‌ನ ವಿವಿಯ ಮೆಟ್ಟಿಲ ಮೇಲೆ ಕಾಲಿ ಹಾಳೆ ಹಿಡಿದು ನಿಂತಿದ್ದ ಯುವತಿಯನ್ನು ವ್ಯಕ್ತಿಯೊಬ್ಬ ಹಿಡಿದೆಳೆಯುತ್ತಿರುವ ವೀಡಿಯೋ ಕೂಡಾ ವೈರಲ್ ಆಗಿದೆ. ಈ ಮಧ್ಯೆ, ಪ್ರತಿಭಟನೆಗೆ ಸಂಬಂಧಿಸಿದ ಮಾಹಿತಿಗಳನ್ನು ಒದಗಿಸುವ ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳನ್ನು ಆನ್‌ಲೈನ್ ಸೆನ್ಸಾರ್ ಮೂಲಕ ತೆಗೆದು ಹಾಕಲಾಗಿದ್ದು , ಸಾಮಾಜಿಕ ವೇದಿಕೆಯಲ್ಲಿ ಪ್ರತಿಭಟನೆಗೆ ಸಂಬಂಧಿಸಿದ ಮಾಹಿತಿಯನ್ನು ‘ಸರ್ಚ್’ ಮಾಡಿದರೂ ಮಾಹಿತಿ ಪಡೆಯುವುದು ಕಷ್ಟವಾಗಿದೆ. ಚೀನಾ ಸರಕಾರವು ಪ್ರತಿಭಟನೆಯನ್ನು ಹಿಂಸಾತ್ಮಕ ರೀತಿಯಲ್ಲಿ ಹತ್ತಿಕ್ಕುವ ಇತಿಹಾಸವನ್ನು ಹೊಂದಿದ್ದು 1989ರ ತಿಯಾನನ್ಮೆನ್ ಸಾಮೂಹಿಕ ಹತ್ಯಾಕಾಂಡ ಅತ್ಯಂತ ಗಮನಾರ್ಹ ಘಟನೆಯಾಗಿದೆ. ಬೀಜಿಂಗ್‌ನಲ್ಲಿ ನಡೆದ ಶಾಂತಿಯುತ ಪ್ರತಿಭಟನೆಗಳ ಸಂದರ್ಭ ಚೀನಾದ ಮಿಲಿಟರಿ ಅಸಂಖ್ಯಾತ ಸಂಖ್ಯೆಯ ಪ್ರಜಾಪ್ರಭುತ್ವದ ಪರ ಪ್ರದರ್ಶನಕಾರರನ್ನು ಹತ್ಯೆಗೈದಿದೆ ಎಂದು ಎಚ್‌ಆರ್‌ಡಬ್ಲ್ಯೂ ವರದಿ ಹೇಳಿದೆ.

ಚೀನಾದಲ್ಲಿನ ಮಾನವ ಹಕ್ಕುಗಳ ಕುರಿತು ಧ್ವನಿ ಎತ್ತುವ ಸರಕಾರಗಳು ಹಾಗೂ ಅಂತರಾಷ್ಟ್ರೀಯ ಸಂಘಟನೆಗಳು, ಅಲ್ಲಿನ ಜನತೆಯ ವಾಕ್‌ಸ್ವಾತಂತ್ರ್ಯ ಹಾಗೂ ಸಭೆ ಸೇರುವ ಹಕ್ಕಿಗೆ ಬೆಂಬಲ ಸೂಚಿಸಬೇಕು ಮತ್ತು ಪ್ರತಿಭಟನೆಯನ್ನು ದಮನಿಸದಂತೆ ಚೀನೀ ಆಡಳಿತವನ್ನು ಆಗ್ರಹಿಸಬೇಕು ಎಂದು ಸಂಸ್ಥೆ ಒತ್ತಾಯಿಸಿದೆ.

Similar News