99.5% ಷೇರುಗಳು ಅದಾನಿ ಸಮೂಹಕ್ಕೆ ವರ್ಗಾವಣೆ: ಎನ್‌ಡಿಟಿವಿ ಪ್ರಮೋಟರ್‌ ಆರ್‌ಆರ್‌ಪಿಆರ್ ಘೋಷಣೆ

Update: 2022-11-29 17:34 GMT

ಹೊಸದಿಲ್ಲಿ: ಹಿರಿಯ ಪತ್ರಕರ್ತರಾದ ರಾಧಿಕಾ ರಾಯ್ ಮತ್ತು ಪ್ರಣಯ್ ರಾಯ್ ಒಡೆತನದ ಆರ್‌ಆರ್‌ಪಿಆರ್ ಹೋಲ್ಡಿಂಗ್ ಕಂಪೆನಿಯು,  ಸೋಮವಾರ ತನ್ನ ಈಕ್ವಿಟಿ ಬಂಡವಾಳದ 99.5 % ಅದಾನಿ ಗ್ರೂಪ್ ಒಡೆತನದ ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್‌ಗೆ (ವಿಸಿಪಿಎಲ್) ವರ್ಗಾಯಿಸಿದೆ ಎಂದು ಹೇಳಿದೆ. ಇದರೊಂದಿಗೆ ಎನ್ ಡಿ ಟಿ ವಿ ಮೇಲೆ ಪೂರ್ಣ ಸ್ವಾಧೀನ ಪಡೆಯುವ ಅದಾನಿ ಸಮೂಹದ ಪ್ರಯತ್ನಕ್ಕೆ ಜಯ ಸಿಕ್ಕಿದೆ. 

ಎನ್‌ಡಿಟಿವಿಯ ಪ್ರೊಮೋಟರ್ ಆಗಿದ್ದ ಆರ್‌ಆರ್‌ಪಿಆರ್ ಹೋಲ್ಡಿಂಗ್ ಸಂಸ್ಥೆಯು ಷೇರುಗಳ ವರ್ಗಾವಣೆ ಮಾಡಿರುವುದರಿಂದ ಅದಾನಿ ಸಮೂಹಕ್ಕೆ NDTV ಯಲ್ಲಿ 29.18 ರಷ್ಟು ಪಾಲು ಸಿಕ್ಕಿದೆ. ಇದರೊಂದಿಗೆ, ಅದಾನಿ ಸಮೂಹ ಈ ಮಾಧ್ಯಮ ಸಂಸ್ಥೆಯಲ್ಲಿ ಇನ್ನೂ 26 ಶೇಕಡಾ ಪಾಲನ್ನು ಪಡೆಯಲು ಹೊರಟಿದೆ. ಬಿಎಸ್‌ಇ ಅಂಕಿಅಂಶಗಳ ಪ್ರಕಾರ, ನವೆಂಬರ್ 22 ರಂದು ಪ್ರಾರಂಭವಾದ ಓಪನ್ ಆಫರ್‌ನಲ್ಲಿ ಇದುವರೆಗೆ 31.78 ಶೇಕಡಾ ಷೇರುಗಳನ್ನು (53 ಲಕ್ಷ ಷೇರುಗಳು) ಶೇರುದಾರರು ಮಾರಾಟಕ್ಕಿಟ್ಟಿದ್ದಾರೆ. 

ಅದಾನಿ ಗ್ರೂಪ್ ಸಂಸ್ಥೆಯ ಪರವಾಗಿ ಆಫರ್ ಅನ್ನು ನಿರ್ವಹಿಸುತ್ತಿರುವ ಜೆಎಂ ಫೈನಾನ್ಶಿಯಲ್, ಆಫರ್ ಡಿಸೆಂಬರ್ 5 ರಂದು ಮುಕ್ತಾಯಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹವು ಕಳೆದ ಆಗಸ್ಟ್‌ನಲ್ಲಿ ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ (ವಿಸಿಪಿಎಲ್) ಅನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿತ್ತು. ಮಹೇಂದ್ರ ನಹತಾ ಎಂಬುವವರಿಗೆ ಸೇರಿದ ವಿಸಿಪಿಎಲ್ ಸಂಸ್ಥೆ 2009-10ರಲ್ಲಿ ಆರ್‌ಆರ್‌ಪಿಆರ್‌ಗೆ 404 ಕೋಟಿ ರೂ ಸಾಲ ಕೊಟ್ಟಿತ್ತು. ಇದಕ್ಕೆ ಬದಲಾಗಿ ಪರಿವರ್ತಿಸಲು ಸಾಧ್ಯವಾಗಬಲ್ಲ ಸಾಲಪತ್ರಗಳನ್ನು (ಕನ್ವರ್ಟಿಬಲ್ ಡಿಬಂಚರ್ಸ್) ವಿಸಿಪಿಎಲ್‌ಗೆ ಕೊಡಲಾಗಿತ್ತು.  

ತನ್ನ ಗಮನಕ್ಕೆ ಬಾರದೆಯೇ ವಿಸಿಪಿಎಲ್ ಸಂಸ್ಥೆಯನ್ನು ಅದಾನಿ ಗ್ರೂಪ್‌ಗೆ ಮಾರಾಟ ಮಾಡಲಾಗಿದೆ ಎಂಬುದು ಎನ್‌ಡಿಟಿವಿ ಸಂಸ್ಥಾಪಕರಾದ ರಾಧಿಕಾ ರಾಯ್ ಮತ್ತು ಪ್ರಣಯ್ ರಾಯ್ ಆಕ್ಷೇಪ ವ್ಯಕ್ತಪಡಿಸಿದ್ದರು.

Similar News