ಪ್ರಿ-ಕ್ವಾರ್ಟರ್ ಫೈನಲ್ ಗೆ ತಲುಪಲು ಕಾಯುತ್ತಿವೆ ಅರ್ಜೆಂಟೀನ, ಜರ್ಮನಿ

Update: 2022-11-29 18:10 GMT

ದೋಹಾ, ನ.29: ಕ್ರೀಡಾ ಇತಿಹಾಸದ ಅತ್ಯಂತ ಬಲಿಷ್ಠ  ಫುಟ್ಬಾಲ್ ತಂಡಗಳಾಗಿರುವ, ಒಟ್ಟಿಗೆ ಆರು ಬಾರಿ ವಿಶ್ವಕಪ್ ಪ್ರಶಸ್ತಿಗಳನ್ನು ಜಯಿಸಿರುವ  ಅರ್ಜೆಂಟೀನ ಹಾಗೂ ಜರ್ಮನಿ 2022ರ ವಿಶ್ವಕಪ್ ನಲ್ಲಿ ಇನ್ನಷ್ಟೇ ಅಂತಿಮ-16ರ ಸುತ್ತು ತಲುಪಬೇಕಾಗಿದೆ.  ಅರ್ಜೆಂಟೀನವು 1978 ಹಾಗೂ 1986ರ ಆವೃತ್ತಿಗಳಲ್ಲಿ ಚಾಂಪಿಯನ್ಪಟ್ಟಕ್ಕೇರಿದರೆ, ಜರ್ಮನಿಯು ವೆಸ್ಟ್ ಜರ್ಮನಿ ಹಾಗೂ ಏಕೀಕೃತ ಜರ್ಮನಿ ಆಗಿದ್ದಾಗ 1954, 1974, 1990 ಹಾಗೂ 2014ರಲ್ಲಿ ವಿಶ್ವಕಪ್ ಜಯಿಸಿತ್ತು.

ಎರಡು ಮಾಜಿ ಚಾಂಪಿಯನ್ ತಂಡಗಳಾಗಿರುವ ಅರ್ಜೆಂಟೀನ ಹಾಗೂ ಜರ್ಮನಿ ಅಂತಿಮ-16ರ ಸುತ್ತಿಗೆ ಅರ್ಹತೆ ಪಡೆಯಲು ಈಗಲೂ ಕಾಯುತ್ತಿವೆ. ಇವುಗಳಿಗೆ ಗ್ರೂಪ್ ಹಂತದಲ್ಲಿ ಇನ್ನೊಂದು ಸುತ್ತಿನ ಪಂದ್ಯ ಆಡಲು ಬಾಕಿ ಇದೆ.

ಮೆಕ್ಸಿಕೊ ವಿರುದ್ಧ 2-0 ಅಂತರದಿಂದ ಜಯ ಸಾಧಿಸಿರುವ ಅರ್ಜೆಂಟೀನ ಗೆಲುವಿನ ಹಳಿಗೆ ಮರಳಿದೆ. 4 ಬಾರಿಯ ಚಾಂಪಿಯನ್ ಜರ್ಮನಿ ‘ಇ’ ಗುಂಪಿನಲ್ಲಿ ಸ್ಪೇನ್, ಜಪಾನ್ ಹಾಗೂ ಕೋಸ್ಟರಿಕ ತಂಡಗಳ ಬಳಿಕ ಕೊನೆಯ ಸ್ಥಾನದಲ್ಲಿದೆ.

ಖತರ್ ನಲ್ಲಿ ಜರ್ಮನಿಯ ಪ್ರದರ್ಶನ:

ಈ ತನಕ 2 ಪಂದ್ಯವನ್ನಾಡಿರುವ ಜರ್ಮನಿ ಇನ್ನಷ್ಟೇ ಜಯ ಸಾಧಿಸಬೇಕಾಗಿದೆ. ಜರ್ಮನಿ ತನ್ನ ಮೊದಲ ಪಂದ್ಯದಲ್ಲಿ ಜಪಾನ್ ವಿರುದ್ಧ 1-2ರಿಂದ ಆಘಾತಕಾರಿ ಸೋಲುಂಡಿತ್ತು. ಆ ನಂತರ 2010ರ ಚಾಂಪಿಯನ್ ಸ್ಪೇನ್ ವಿರುದ್ಧ 1-1 ರಿಂದ ಡ್ರಾ ಸಾಧಿಸಿದೆ. ಈ ಮೂಲಕ 2 ಪಂದ್ಯಗಳಲ್ಲಿ 1 ಅಂಕ ಗಳಿಸಿದೆ.

ಮುಂದಿನ ಪಂದ್ಯ

ವಿಶ್ವಕಪ್ ಇತಿಹಾಸದಲ್ಲಿ 2ನೇ ಯಶಸ್ವಿ ತಂಡವಾಗಿರುವ ಜರ್ಮನಿ ಶನಿವಾರ ಕೋಸ್ಟರಿಕ ವಿರುದ್ಧ ಕೊನೆಯ ಗ್ರೂಪ್ ಪಂದ್ಯವನ್ನಾಡಲಿದೆ. ಜರ್ಮನಿಗೆ ಇದು ಮಾಡು-ಮಡಿ ಪಂದ್ಯವಾಗಿದೆ.

ಉತ್ತಮ ಸ್ಕೋರ್ ಮೂಲಕ ಕೋಸ್ಟರಿಕವನ್ನು ಮಣಿಸಿದರೆ ಜರ್ಮನಿಯ ಒಟ್ಟು ಅಂಕ 4ಕ್ಕೇರುತ್ತದೆ. ಸ್ಪೇನ್ ತಂಡ ಜಪಾನ್ ವಿರುದ್ಧ ಸೋಲುವುದನ್ನು ನಿರೀಕ್ಷಿಸಬೇಕಾಗುತ್ತದೆ. ಸ್ಪೇನ್ ಗೆದ್ದರೆ ಒಟ್ಟು 7 ಅಂಕ ಗಳಿಸುತ್ತದೆ. ಜಪಾನ್ 3 ಅಂಕಕ್ಕೆ ತೃಪ್ತಿಪಡುತ್ತದೆ. ಸ್ಪೇನ್ ತಂಡ ಅಂತಿಮ-16ರ ಸುತ್ತು ತಲುಪಲು ಪಂದ್ಯವನ್ನು ಡ್ರಾ ಮಾಡುವ ಅಗತ್ಯವಿದೆ. ಒಂದು ವೇಳೆ ಜಪಾನ್ ತಂಡ ಸ್ಪೇನ್ ತಂಡವನ್ನು ಸೋಲಿಸಿದರೆ 6 ಅಂಕದೊಂದಿಗೆ ಗ್ರೂಪ್ ಇಯಲ್ಲಿ ಅಗ್ರಸ್ಥಾನಕ್ಕೇರುತ್ತದೆ. ಸ್ಪೇನ್ ಗೋಲು ಅಂತರ (7 ಅಂಕ)ಉತ್ತಮವಾಗಿದೆ.  ಇಂತಹ ಸನ್ನಿವೇಶದಲ್ಲಿ ಜರ್ಮನಿಗೆ ಮುಂದಿನ ಸುತ್ತಿಗೇರುವುದು ಕಷ್ಟಕರವಾಗುತ್ತದೆ.

ಕೋಸ್ಟರಿಕ ವಿರುದ್ಧ ಜರ್ಮನಿ ಡ್ರಾ ಸಾಧಿಸಿದರೆ ಒಟ್ಟು 2 ಅಂಕ ಗಳಿಸಿ ಟೂರ್ನಿಯಿಂದ ನಿರ್ಗಮಿಸುತ್ತದೆ.

ಖತರ್ನಲ್ಲಿ ಅರ್ಜೆಂಟೀನದ ಸಾಧನೆ

ಅರ್ಜೆಂಟೀನ ತಂಡ ಕೆಳ ರ್ಯಾಂಕಿನ ಸೌದಿ ಅರೇಬಿಯ ವಿರುದ್ಧ 1-2 ಅಂತರದಿಂದ ಸೋಲನುಭವಿಸಿ ವಿಶ್ವಕಪ್ನಲ್ಲಿ ತನ್ನ ಅಭಿಯಾನ ಆರಂಭಿಸಿದೆ. ಮೆಕ್ಸಿಕೊ ವಿರುದ್ಧ ಜಯ ಸಾಧಿಸಿ ಮುಂದಿನ ಸುತ್ತಿಗೇರುವ ರೇಸ್ನಲ್ಲಿ ಉಳಿದಿದೆ.

ಲಿಯೊನೆಲ್ ಮೆಸ್ಸಿ ಬಳಗ ಗುರುವಾರ ಪೋಲ್ಯಾಂಡ್ ತಂಡವನ್ನು ಎದುರಿಸಲಿದೆ. ಉಭಯ ತಂಡಗಳು ಈ ತನಕ 11 ಪಂದ್ಯಗಳನ್ನು ಅಡಿದ್ದು, ಈ ಪೈಕಿ ಅರ್ಜೆಂಟೀನ 6ರಲ್ಲಿ ಜಯ, 3ರಲ್ಲಿ ಸೋಲು ಹಾಗೂ 2ರಲ್ಲಿ ಡ್ರಾ ಸಾಧಿಸಿದೆ.

ಜರ್ಮನಿಗೆ ಹೋಲಿಸಿದರೆ ಸದ್ಯ ಅರ್ಜೆಂಟೀನ ಉತ್ತಮ ಸ್ಥಾನದಲ್ಲಿದೆ. ಗ್ರೂಪ್ ಸಿಯಲ್ಲಿ ಪೋಲ್ಯಾಂಡ್ ನಂತರ 2ನೇ ಸ್ಥಾನದಲ್ಲಿದೆ. ತನ್ನ ಕೊನೆಯ ಸುತ್ತಿನ ಪಂದ್ಯದಲ್ಲಿ ಅರ್ಜೆಂಟೀನ ತಂಡ ಪೋಲ್ಯಾಂಡ್ನ್ನು ಸೋಲಿಸಿದರೆ ಒಟ್ಟು ಆರು ಅಂಕದೊಂದಿಗೆ ಪ್ರಿ-ಕ್ವಾರ್ಟರ್ ಫೈನಲ್ಗೆ ತಲುಪುತ್ತದೆ. ಇಲ್ಲಿ ಗೋಲು ಅಂತರ ಗಣನೆಗೆ ಬರುವುದಿಲ್ಲ.

ಒಂದು ವೇಳೆ ಪೋಲ್ಯಾಂಡ್ ವಿರುದ್ಧ ಅರ್ಜೆಂಟೀನ ಸೋತರೆ 3 ಅಂಕದಲ್ಲಿಯೇ ಉಳಿಯುತ್ತದೆ. ಪೋಲ್ಯಾಂಡ್ 7 ಅಂಕ ಗಳಿಸಿ ಮುಂದಿನ ಸುತ್ತಿಗೇರುತ್ತದೆ. ಈ ಸನ್ನಿವೇಶದಲ್ಲಿ ಸೌದಿ ಅರೇಬಿಯ-ಮೆಕ್ಸಿಕೊ ಪಂದ್ಯದ ಫಲಿತಾಂಶ ಬರುವ ಮೊದಲೇ ಮೆಸ್ಸಿ ಪಡೆ ಟೂರ್ನಿಯಿಂದ ನಿರ್ಗಮಿಸುತ್ತದೆ. ಸೌದಿ ಅರೇಬಿಯ ಜಯ ಸಾಧಿಸಿದರೆ 6 ಅಂಕ ಗಳಿಸಿ ಪೋಲ್ಯಾಂಡ್ನೊಂದಿಗೆ ಮುಂದಿನ ರೌಂಡ್ಗೆ ತೇರ್ಗಡೆಯಾಗುತ್ತದೆ. ಒಂದು ವೇಳೆ ಮೆಕ್ಸಿಕೊ ಜಯಶಾಲಿಯಾದರೆ 4 ಅಂಕದೊಂದಿಗೆ ಪೋಲ್ಯಾಂಡ್ನೊಂದಿಗೆ ಅಂತಿಮ-16ರ ಸುತ್ತು ತಲುಪುತ್ತದೆ.

ಒಂದು ವೇಳೆ ಪೋಲ್ಯಾಂಡ್ ವಿರುದ್ಧ ಅರ್ಜೆಂಟೀನ ಡ್ರಾ ಸಾಧಿಸಿದರೆ ಒಟ್ಟು 4 ಅಂಕ ಗಳಿಸುತ್ತದೆ. ಪೋಲ್ಯಾಂಡ್ 5 ಅಂಕ ತಲುಪುತ್ತದೆ. ಈ ಸನ್ನಿವೇಶದಲ್ಲಿ ಅರ್ಜೆಂಟೀನ ತಂಡ ಮೆಕ್ಸಿಕೊವು ಸೌದಿ ಅರೇಬಿಯವನ್ನು ಮಣಿಸುವುದನ್ನು ಬಯಸಬೇಕಾಗುತ್ತದೆ. ಹೀಗಾದಲ್ಲಿ ಮೆಕ್ಸಿಕೊ ಹಾಗೂ ಅರ್ಜೆಂಟೀನ ತಲಾ 4 ಅಂಕ ಗಳಿಸುತ್ತವೆ. ಆಗ ಗೋಲು ಅಂತರ ಇಲ್ಲಿ ಗಣನೆಗೆ ಬರುತ್ತದೆ. ಈ ಸನ್ನಿವೇಶದಲ್ಲಿ ಪೋಲ್ಯಾಂಡ್ ಅರ್ಹತೆ ಪಡೆಯುತ್ತದೆ. ಉತ್ತಮ ಗೋಲು ಅಂತರವಿರುವ ಅರ್ಜೆಂಟೀನ ಇಲ್ಲವೇ ಮೆಕ್ಸಿಕೊ(ಸೌದಿಯನ್ನು ಸೋಲಿಸಿದರೆ) ಗ್ರೂಪ್ ಸಿಯಲ್ಲಿ 2ನೇ ತಂಡವಾಗಿ ಮುಂದಿನ ಸುತ್ತಿಗೆ ತಲುಪುತ್ತದೆ. ಒಂದೊಮ್ಮೆ ಸೌದಿ ಅರೇಬಿಯವು ಮೆಕ್ಸಿಕೊವನ್ನು ಸೋಲಿಸಿದರೆ, ಗ್ರೂಪ್ನಲ್ಲಿ ಅಗ್ರ ಸ್ಥಾನಕ್ಕೇರಿ ಪೋಲ್ಯಾಂಡ್ನೊಂದಿಗೆ ಪ್ರಿ-ಕ್ವಾರ್ಟರ್ಗೆ ತಲುಪುತ್ತದೆ. ಅರ್ಜೆಂಟೀನ ಟೂರ್ನಿಯಿಂದ ನಿರ್ಗಮಿಸಲಿದೆ

Similar News