ಇಂದು 3ನೇ ಏಕದಿನ ಪಂದ್ಯ: ಸರಣಿ ಸಮಬಲಗೊಳಿಸುವ ವಿಶ್ವಾಸದಲ್ಲಿ ಭಾರತ

Update: 2022-11-29 18:13 GMT

ಕ್ರೈಸ್ಟ್ಚರ್ಚ್, ನ.29: ಭಾರತದ ನ್ಯೂಝಿಲ್ಯಾಂಡ್ ಕ್ರಿಕೆಟ್ ಪ್ರವಾಸದಲ್ಲಿ ಪ್ರತಿಕೂಲ ಹವಾಮಾನ ಹಾಗೂ ಮಳೆ ಕಾಟ ನಿರಂತರವಾಗಿ ಕಾಡುತ್ತಿದೆ. ಬುಧವಾರ ನಡೆಯಲಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಮಳೆ ಅಡ್ಡಿಯಾಗದೆಂಬ ವಿಶ್ವಾಸದಲ್ಲಿರುವ ಭಾರತ ಸರಣಿ ಸಮಬಲಗೊಳಿಸುವತ್ತ ಚಿತ್ತಹರಿಸಿದೆ.

ಆಕ್ಲಂಡ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 7 ವಿಕೆಟ್ ನಿಂದ ಜಯ ಸಾಧಿಸಿರುವ ನ್ಯೂಝಿಲ್ಯಾಂಡ್ ಸದ್ಯ ಸರಣಿಯಲ್ಲಿ 1-0 ಮುನ್ನಡೆಯಲ್ಲಿದೆ. ಮಳೆಯಿಂದಾಗಿ ಹ್ಯಾಮಿಲ್ಟನ್ ನಲ್ಲಿ ಎರಡನೇ ಪಂದ್ಯವು ಫಲಿತಾಂಶರಹಿತವಾಗಿತ್ತು. ಏಕದಿನ ಸರಣಿ ಆರಂಭಕ್ಕೆ ಮೊದಲು ಭಾರತವು ಟ್ವೆಂಟಿ-20 ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿತ್ತು.

ಬುಧವಾರದ ಹವಾಮಾನ ಮುನ್ಸೂಚನೆ ಉತ್ತೇಜನಕಾರಿಯಾಗಿಲ್ಲ. ಮಳೆ ಸುರಿಯುವ ಮೂಲಕ ಮೈದಾನದ ಸಿಬ್ಬಂದಿ ವ್ಯಸ್ತರಾಗುವ ನಿರೀಕ್ಷೆಯಿದೆ.  3 ಪಂದ್ಯಗಳ ಟ್ವೆಂಟಿ-20 ಸರಣಿ ಸೇರಿದಂತೆ ಐದು ಸೀಮಿತ ಓವರ್ ಪಂದ್ಯಗಳಲ್ಲಿ ಎರಡು ಪಂದ್ಯಗಳು(1 ಟ್ವೆಂಟಿ-20, 1 ಏಕದಿನ)ಫಲಿತಾಂಶರಹಿತವಾಗಿದ್ದವು. ಒಂದು ಪಂದ್ಯ(ಟಿ-20)ಡಕ್ವರ್ತ್-ಲೂಯಿಸ್ ಪದ್ಧತಿಯ ಪ್ರಕಾರ ಟೈನಲ್ಲಿ ಅಂತ್ಯವಾಗಿತ್ತು.

ಹ್ಯಾಮಿಲ್ಟನ್ ಪಿಚ್ ಸಾಂಪ್ರದಾಯಿಕವಾಗಿ ವೇಗದ ಬೌಲರ್ಗಳಿಗೆ ನೆರವಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಮೊದಲು ಬ್ಯಾಟಿಂಗ್ ಮಾಡಿದ್ದ ತಂಡ ಗಳಿಸಿರುವ ಸರಾಸರಿ ಸ್ಕೋರ್ 230. ಭಾರತದ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ಎರಡು ಪಂದ್ಯಗಳಲ್ಲಿ 50 ಹಾಗೂ ಔಟಾಗದೆ 45 ರನ್ ಗಳಿಸಿದ್ದರು.  ಈ ಮೈದಾನದಲ್ಲಿ ಕಳೆದ ಕೆಲವು ಏಕದಿನ ಪಂದ್ಯಗಳಲ್ಲಿ ಸ್ವಿಂಗ್ ಬೌಲರ್ಗಳು ಹೆಚ್ಚು ಮಿಂಚಿರುವ ಕಾರಣ ಭಾರತದ ಬ್ಯಾಟಿಂಗ್ ಸರದಿಗೆ ದೊಡ್ಡ ಸವಾಲಿದೆ. ರಿಷಭ್ ಪಂತ್ ಏಕದಿನ ದಾಖಲೆ ಅತ್ಯುತ್ತಮವಾಗಿದೆ.  ಅದರೆ ಅವರು ಇಂಗ್ಲೆಂಡ್ ಪ್ರವಾಸದ ಬಳಿಕ ರನ್ ಬರ ಎದುರಿಸುತ್ತಿದ್ದಾರೆ.

ಮೊದಲ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ವಿಫಲವಾಗಿರುವ ಕಾರಣ ಅರ್ಷದೀಪ್ ಸಿಂಗ್, ದೀಪಕ್ ಚಹಾರ್ ಹಾಗೂ ಉಮ್ರಾನ್ ಮಲಿಕ್ ವೇಗದ ದಾಳಿ ಮುಂದುವರಿಸುವ ಸಾಧ್ಯತೆಯಿದೆ. ನ್ಯೂಝಿಲ್ಯಾಂಡ್ನಲ್ಲಿ ವೇಗಿಗಳಾದ ಮ್ಯಾಟ್ ಹೆನ್ರಿ, ಟಿಮ್ ಸೌಥಿ ಹಾಗೂ ಲಾಕಿ ಫರ್ಗ್ಯುಸನ್ ಪಿಚ್ನ ಲಾಭ ಪಡೆಯುವ ಉತ್ಸಾಹದಲ್ಲಿದ್ದಾರೆ.

ಪಿಚ್ ಹಾಗೂ ಮೋಡಕವಿದ ವಾತಾವರಣವು ಭಾರತದ ಬೌಲಿಂಗ್ಗೆ ಪೂರಕವಾಗಿದ್ದು, ಭುವನೇಶ್ವರ ಕುಮಾರ್ ಹಾಗೂ ಅರ್ಷದೀಪ್ ಸಿಂಗ್  ಎರಡೂ ಬದಿಯಲ್ಲಿ ಚೆಂಡನ್ನು ಸ್ವಿಂಗ್ ಮಾಡಿ ನ್ಯೂಝಿಲ್ಯಾಂಡ್ ಅಗ್ರ ಸರದಿಯ ಬ್ಯಾಟಿಂಗ್ಗೆ ಸವಾಲಾಗಬಲ್ಲರು.

ಈ ಸರಣಿಯ ಬಳಿಕ ಭಾರತವು 3 ಏಕದಿನ ಹಾಗೂ 2 ಟೆಸ್ಟ್ ಪಂದ್ಯಗಳನ್ನಾಡಲು ಬಾಂಗ್ಲಾದೇಶಕ್ಕೆ ಪ್ರವಾಸಕೈಗೊಳ್ಳಲಿದೆ.

Similar News