ಕಾಂಗ್ರೆಸ್ ಆಳ್ವಿಕೆಯಲ್ಲಿಯೇ ಬಡತನ ಹೆಚ್ಚಳ: ಪ್ರಧಾನಿ ಮೋದಿ

Update: 2022-12-01 15:21 GMT

ಬೊಡೇಲಿ (ಗುಜರಾತ್),ಡಿ.1: ಹಿಂದಿನ ಕಾಂಗ್ರೆಸ್ ಸರಕಾರದ ‘ಗರೀಬಿ ಹಟಾವೋ’ ('Garibi Hatao')ಆಂದೋಲನದ ಬಗ್ಗೆ  ಗುರುವಾರ ಟೀಕಾ ಪ್ರಹಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ(Narendra Modi),  ವಾಸ್ತವಿಕವಾಗಿ ಕೈ ಪಕ್ಷದ ಆಳ್ವಿಕೆಯಲ್ಲಿಯೇ  ದೇಶದಲ್ಲಿ ಬಡತನ ಹೆಚ್ಚಳವಾಗಿತ್ತು ಎಂದು ಹೇಳಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಬಡತನ ನಿರ್ಮೂಲನೆಗಾಗಿ ಯಾವುದೇ ದೃಢವಾದ ಕ್ರಮವನ್ನು ಕೈಗೊಳ್ಳುವ ಬದಲು ಅದು ಕೇವಲ ಘೋಷಣೆಗಳನ್ನು ಕೂಗುವುದರಲ್ಲಿ ನಿರತವಾಗಿತ್ತು ಹಾಗೂ ಜನರನ್ನು ತಪ್ಪುದಾರಿಗೆಳೆದಿತ್ತು ಎಂವರು ಆಪಾದಿಸಿದ್ದಾರೆ.

 ಗುಜರಾತ್ ನ ಛೋಟಾ ಉದಯಪುರ ಜಿಲ್ಲೆಯ ಬೊಡೇಲಿ ಪಟ್ಟಣದಲ್ಲಿ ಚುನಾವಣಾ ಪ್ರಚಾರ ರ್ಯಾಲಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಗುಜರಾತ್ ವಿಧಾನಸಭೆಗೆ ಡಿಸೆಂಬರ್ 5ರಂದು ಎರಡನೆ ಹಂತದ ಮತದಾನ ನಡೆಯಲಿದೆ.

ಕಾಂಗ್ರೆಸ್  ಪಕ್ಷವು ಹಲವು ದಶಕಗಳಿಂದ ಗರೀಬಿ ಹಟಾವೋ (ಬಡನ ತೊಲಗಿಸಿ) ಎಂದು ಹೇಳುತ್ತಲೇ ಬಂದಿದೆ.  ಹಾಗೆ ಮಾಡಲೆಂದೇ ಜನತೆ ನಿಮಗೆ (ಕಾಂಗ್ರೆಸ್) ಅಧಿಕಾರ ನೀಡಿದ್ದರು. ಆದರೆ  ನೀವು ಬಡತನ ತೊಲಗಿಸುವಂತೆ ಜನರನ್ನೇ ಕೇಳಿಕೊಳ್ಳುತ್ತಿದ್ದೀರಿ’’ ಎಂದವರು ವ್ಯಂಗ್ಯವಾಡಿದರು. ಘೋಷಣೆಗಳನ್ನು ಕೂಗುವುದು,  ಭರವಸೆಗಳನ್ನು ನೀಡುವುದು ಹಾಗೂ ಜನರನ್ನು ತಪ್ಪುದಾರಿಗೆಳೆಯುವುದು ಇವುಗಳನ್ನಷ್ಟೇ ಕಾಂಗ್ರೆ ಈವರೆಗೆ ಮಾಡುತ್ತಾ ಬಂದಿದೆ. ಕಾಂಗ್ರೆಸ್ನ ಆಡಳಿತದಲ್ಲಿ   ಬಡತನ ಹೆಚ್ಚಾಗುವುದಕ್ಕೆ  ಇದುವೇ ನಿಜವಾದ ಕಾರಣವಾಗಿದೆ’’ ಎಂದು ಮೋದಿ ಆಪಾದಿಸಿದರು.

ಹಿಂದಿನ ಕಾಂಗ್ರೆಸ್ ನೇತೃತ್ವದ ಸರಕಾರದ ನೀತಿಗಳ ಕಾರಣದಿಂದಾಗಿ ಬಡ ಪ್ರಜೆಗಳಿಗೆ  ದೇಶದ ಆರ್ಥಿಕತೆಯಲ್ಲಿ ಸಕ್ರಿಯ ಪಾತ್ರ ವಹಿಸಲು ಸಾಧ್ಯವಾಗುತ್ತಿರಲಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ ಬ್ಯಾಂಕುಗಳ ರಾಷ್ಟ್ರೀಕೃತಗೊಂಡಿದ್ದವಾದರೂ, ಬಡವರಿಗೆ ತಮ್ಮ ಬ್ಯಾಂಕ್ ಖಾತೆಗಳನ್ನು ತೆರೆಯಲು ಸಾಧ್ಯವಾಗಿರಲಿಲ್ಲವೆಂದು ಪ್ರಧಾನಿ ಹೇಳಿದರು.

ಕಾಂಗ್ರೆಸ್ ಆಡಳಿತದಲ್ಲಿ  ಶಿಕ್ಷಣ, ಆರೋಗ್ಯ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಬಡಜನರು, ಬುಡಕಚ್ಟು ಜನರು ಹಾಗೂ ಇತರ ಹಿಂದುಳಿದ ವರ್ಗಗಳಗೆ ಆದ್ಯತೆಯನ್ನು ನೀಡುತ್ತಿರಲಿಲ್ಲ ಎಂದರು.

ಈ ವರ್ಷ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು (Draupadi Murmu) ಅವರ ಆಯ್ಕೆಯ ಬಗ್ಗೆ ಪ್ರಸ್ತಾವಿಸಿದ ಮೋದಿ ‘‘ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ಆಲಂಕರಿಸುವುದನ್ನು ಕಾಂಗ್ರೆಸ್ ಪಕ್ಷವು ಬೆಂಬಲಿಸಲಿಲ್ಲ ಹಾಗೂ ಅದು ತನ್ನದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿತು’’ಎಂದರು.

Similar News