×
Ad

ಡಿ.5ರಿಂದ ಮೆದುಳು ಜ್ವರದ ವಿರುದ್ಧ ಮಕ್ಕಳಿಗೆ ಲಸಿಕಾ ಅಭಿಯಾನ: ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್

Update: 2022-12-01 21:22 IST

ಉಡುಪಿ, ಡಿ.1: ಮಕ್ಕಳಲ್ಲಿ ಜಪಾನೀಸ್ ಎನ್‌ಸೆಫೆಲೈಟಿಸ್ (ಮೆದುಳು ಜ್ವರ- ಜೆ.ಇ.) ರೋಗ ಕಾಣಿಸಿಕೊಳ್ಳದಂತೆ  ತಡೆಯುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಡಿ.5ರಿಂದ24ರವರೆಗೆ ಒಂದರಿಂದ 15 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದ್ದಾರೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 1ರಿಂದ 15 ವರ್ಷ ದೊಳಗಿನ ಒಟ್ಟು 2,18,324 ಮಕ್ಕಳನ್ನು ಗುರುತಿಸಲಾಗಿದ್ದು, ಈ ಎಲ್ಲರಿಗೂ  ಒಂದು ಸುತ್ತಿನ ಲಸಿಕೆಯನ್ನು ನೀಡಲಾಗುವುದು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗಳ ಸಹಯೋಗದಲ್ಲಿ ಜೆ.ಇ. ಲಸಿಕಾ ಅಭಿಯಾನವನ್ನು ನಡೆಸಲಾಗುತ್ತಿದೆ.

ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಡಿ.5ರಂದು ಬೆಳಗ್ಗೆ 10 ಗಂಟೆಗೆ ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ (ಬೋರ್ಡ್ ಹೈಸ್ಕೂಲ್) ಇಲ್ಲಿ ಚಾಲನೆ ನೀಡಲಾಗುವುದು. ಡಿ.5ರಿಂದ 11ರವರೆಗೆ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ, ಡಿ.12ರಿಂದ 18ರವರೆಗೆ ಎಲ್ಲಾ ಅಂಗನವಾಡಿಗಳಲ್ಲಿ ಹಾಗೂ  ಡಿ.19ರಿಂದ 24ರವರೆಗೆ ಮನೆ ಮನೆಗೆ ತೆರಳಿ, ಸಮುದಾಯಗಳಲ್ಲಿರುವ ಮಕ್ಕಳಿಗೆ ಲಸಿಕೆಯನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

1922 ಲಸಿಕಾ ಕೇಂದ್ರ: ಜಿಲ್ಲೆಯಲ್ಲಿ 1ರಿಂದ 15 ವರ್ಷದೊಳಗಿನ ಒಟ್ಟು 2,18,324 ಮಕ್ಕಳಿದ್ದಾರೆ. ಉಡುಪಿ ತಾಲೂಕಿನಲ್ಲಿ 1,01,087, ಕುಂದಾಪುರದಲ್ಲಿ 76,715 ಹಾಗೂ ಕಾರ್ಕಳ ತಾಲೂಕಿನಲ್ಲಿ 40,522 ಮಕ್ಕಳಿದ್ದಾರೆ. ಇವರಲ್ಲಿ 1ರಿಂದ 6ವರ್ಷದೊಳಗಿನ ಮಕ್ಕಳ ಸಂಖ್ಯೆ 56,499 ಆದರೆ (ಉಡುಪಿ- 25,697, ಕುಂದಾಪುರ- 21,649, ಕಾರ್ಕಳ 9,153) 6ರಿಂದ 15 ವರ್ಷದೊಳಗಿನ ಮಕ್ಕಳ ಸಂಖ್ಯೆ 1,61,825 (ಉಡುಪಿ-75,390, ಕುಂದಾಪುರ- 55,066, ಕಾರ್ಕಳ-31,369) ಆಗಿದೆ. ಅಲ್ಲದೇ ಶಾಲೆಯಿಂದ ಹೊರಗುಳಿದ ಒಟ್ಟು 434 ಮಕ್ಕಳನ್ನು (ಉಡುಪಿ-215, ಕುಂದಾಪುರ-133, ಕಾರ್ಕಳ-86) ಜಿಲ್ಲೆಯಲ್ಲಿ ಗುರುತಿಸಲಾಗಿದೆ.

ಇವರಿಗೆ ಲಸಿಕೆಯನ್ನು ನೀಡಲು 1161 ಶಾಲಾ ಲಸಿಕಾ ಕೇಂದ್ರಗಳನ್ನು ( ಉಡುಪಿ-473, ಕುಂದಾಪುರ-442, ಕಾರ್ಕಳ-247), ಸಮುದಾಯ ಮಟ್ಟದಲ್ಲಿ 551 (ಉಡುಪಿ-269, ಕುಂದಾಪುರ-183, ಕಾರ್ಕಳ-99) ಹಾಗೂ ಕೆಲವು ಹೈರಿಸ್ಕ್ ಪ್ರದೇಶಗಳಲ್ಲಿ 209 (47+96+66) ಲಸಿಕಾ ಕೇಂದ್ರಗಳನ್ನು ತೆರೆಯಲಾಗುವುದು. ಈ ಮೂಲಕ ಉಡುಪಿ 789, ಕುಂದಾಪುರ 721, ಕಾರ್ಕಳ 412 ಸೇರಿ ಜಿಲ್ಲೆಯಲ್ಲಿ ಒಟ್ಟು 1922 ಲಸಿಕಾ ಕೇಂದ್ರಗಳಿರುತ್ತವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯಲ್ಲಿ 379 ಲಸಿಕಾ ಕಾರ್ಯಕರ್ತರು, 86 ಮೇಲ್ವಿಚಾರಕರನ್ನು ಹಾಗೂ 2536 ಕರ್ತವ್ಯ ನಿರ್ವಹಿಸುವ ಸ್ವಯಂ ಸೇವಕರನ್ನು ಲಸಿಕಾ ಅಭಿಯಾನದ ಯಶಸ್ಸಿಗೆ ನೇಮಿಸಲಾಗಿದೆ. ಸರಕಾರಿ ಹಾಗೂ ಖಾಸಗಿ ಸೇರಿದಂತೆ ಎಲ್ಲಾ ಶಾಲೆಗಳಲ್ಲಿ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಮಕ್ಕಳ ಪೋಷಕರಿಗೆ ಲಸಿಕೆ ನೀಡಬೇಕಾದ ಅಗತ್ಯತೆ ಕುರಿತು ಮನವರಿಕೆ ಮಾಡುವಂತೆ ತಿಳಿಸಲಾಗಿದೆ ಎಂದು ಅವರು ನುಡಿದರು.

ಮೆದುಳು ಜ್ವರ ಎಂಬುದು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮಾರಕ ಕಾಯಿಲೆಯಾಗಿದೆ. ಇದರಲ್ಲಿ ರೋಗ ಬಂದ ಮಕ್ಕಳಲ್ಲಿ ಮರಣದ ಪ್ರಮಾಣ ಶೇ.30 ಆಗಿದೆ. ಉಡುಪಿ ಜಿಲ್ಲೆಯಲ್ಲಿ 2014ರಿಂದ ಈವರೆಗೆ ಒಟ್ಟು 39 ಪ್ರಕರಣಗಳು ಪತ್ತೆಯಾಗಿವೆ. 2014ರಲ್ಲಿ ಮರವಂತೆಯಲ್ಲಿ 14 ವರ್ಷ ಪ್ರಾಯದ ಮಗುವೊಂದು ಇದರಿಂದ ಸಾವನ್ನಪ್ಪಿದೆ ಎಂದು ಆರೋಗ್ಯ ಇಲಾಖೆಯ ಡಾ.ಎಂ.ಜಿ.ರಾಮ ಹಾಗೂ ಡಾ.ರಾಜೇಶ್ ತಿಳಿಸಿದರು.

ರಾಜ್ಯದಲ್ಲಿ ಹತ್ತು ಜಿಲ್ಲೆಗಳಲ್ಲಿ ಈ ಲಸಿಕಾ ಅಭಿಯಾನ ಯಶಸ್ವಿಯಾಗಿ ಮುಗಿದ ಬಳಿಕ ಇದೀಗ ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಇನ್ನೂ 10 ಜಿಲ್ಲೆಗಳನ್ನು ಅಭಿಯಾನಕ್ಕಾಗಿ ಆಯ್ಕೆ ಮಾಡಲಾಗಿದೆ. ಜಿಲ್ಲೆಯಲ್ಲಿ ಶೇ.100ರಷ್ಟು ಮಕ್ಕಳಿಗೆ ಲಸಿಕೆ ನೀಡುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದೆ ಎಂದವರು ನುಡಿದರು.

ಜಿಲ್ಲೆಯ 1ರಿಂದ 15 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಲಸಿಕೆ ನೀಡಿದ ಬಳಿಕ, ಇನ್ನು ಜನಿಸುವ ಮಕ್ಕಳಿಗೆ 9ರಿಂದ 16 ತಿಂಗಳುಗಳ ನಡುವೆ ಉಳಿದ ಲಸಿಕೆಯೊಂದಿಗೆ ಜೆ.ಇ. ಲಸಿಕೆಯನ್ನು ಸಹ ನೀಡಲಾಗುತ್ತದೆ. ವಯಸ್ಕರಲ್ಲಿ ಇದು ಕಾಣಿಸಿಕೊಂಡರೂ ಮಾರಕವಾಗಿರುವುದಿಲ್ಲ ಎಂದು ಡಾ.ರಾಮ ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್ಪಿ ಹಾಕೆ ಅಕ್ಷಯ್ ಮಚ್ಚಿಂದ್ರ, ಎಡಿಸಿ ಬಿ.ಎನ್. ವೀಣಾ, ಡಿಎಚ್‌ಓ ಡಾ.ನಾಗಭೂಷಣ ಉಡುಪ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಎಡಗಾಲು, ಎಡಕೈಗೆ ಇಂಜೆಕ್ಷನ್

ಜೆ.ಇ. ಲಸಿಕೆಯನ್ನು ಐದು ವರ್ಷದೊಳಗಿನ ಮಗುವಿನ ಎಡಗಾಲಿಗೆ ಹಾಗೂ 5ವರ್ಷ ಮೇಲಿನ ಮಕ್ಕಳಿಗೆ ಎಡಗೈಗೆ ಇಂಜೆಕ್ಷನ್ ರೂಪದಲ್ಲಿ ನೀಡಲಾಗುತ್ತದೆ. ಇದರಿಂದ ಯಾವುದೇ ರೀತಿಯ ಅಪಾಯವೂ ಇರುವುದಿಲ್ಲ ಎಂದು ಆರೋಗ್ಯ ಇಲಾಖೆಯ ಡಾ.ರಾಮ ತಿಳಿಸಿದರು.

ರೋಗದ ಪ್ರಮುಖ ಲಕ್ಷಣ ವಿಪರೀತ ಜ್ವರ, ತಲೆನೋವು, ತಲೆ ಸುತ್ತುವಿಕೆ, ನಿಶ್ಯಕ್ತಿ. ಜ್ವರದ ತೀವ್ರತೆ ಹೆಚ್ಚಿದಂತೆ ಕುತ್ತಿಗೆ ಬಿಗಿತ, ಮೈ ನಡುಕ, ವಾಂತಿ ಮುಂತಾದವು ಕಾಣಿಸಿಕೊಳ್ಳಬಹುದು. ಇವರಿಗೆ ತಕ್ಷಣ ಚಿಕಿತ್ಸೆಯ ಅಗತ್ಯವಿರುತ್ತದೆ. ರಕ್ತದ ಪರೀಕ್ಷೆಯಿಂದ ಮಾತ್ರ ರೋಗವನ್ನು ಪತ್ತೆ ಹಚ್ಚಬಹುದು. ಇದಕ್ಕಾಗಿ ಅದನ್ನು ಬೆಂಗಳೂರಿಗೆ ಕಳುಹಿಸಬೇಕಾಗುತ್ತದೆ ಎಂದು ಡಾ.ರಾಮ ವಿವರಿಸಿದರು.

Similar News