ಫಿಫಾ ವಿಶ್ವಕಪ್: ಮೊರೊಕ್ಕೊ, ಕ್ರೊಯೇಶಿಯ ಪ್ರಿ-ಕ್ವಾರ್ಟರ್ ಫೈನಲ್‌ಗೆ ಪ್ರವೇಶ

Update: 2022-12-01 17:37 GMT

 ದೋಹಾ, ಡಿ.1: ಫಿಫಾ ವಿಶ್ವಕಪ್ ಟೂರ್ನಮೆಂಟ್‌ನ ಎಫ್ ಗುಂಪಿನಲ್ಲಿ ಮೊದಲೆರಡು ಸ್ಥಾನ ಪಡೆದಿರುವ ಮೊರೊಕ್ಕೊ ಹಾಗೂ ಕ್ರೊಯೇಶಿಯ ಪ್ರಿ-ಕ್ವಾರ್ಟರ್ ಫೈನಲಿಗೆ ಪ್ರವೇಶಿಸಿವೆ.

ಮೊರೊಕ್ಕೊ ತಂಡ ಕೆನಡಾವನ್ನು 2-1 ಅಂತರದಿಂದ ಸೋಲಿಸಿ ಪ್ರಿ-ಕ್ವಾರ್ಟರ್‌ಫೈನಲ್‌ಗೆ ತಲುಪಿದೆ. ಕ್ರೊಯೇಶಿಯ ತಂಡ ಬೆಲ್ಜಿಯಮ್ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿ ಮುಂದಿನ ಸುತ್ತಿಗೆ ಮುನ್ನಡೆದಿದೆ. ಬೆಲ್ಜಿಯಂ ಹಲವು ಅವಕಾಶವನ್ನು ಕೈಚೆಲ್ಲಿದೆ. ಈ ಫಲಿತಾಂಶದಿಂದ ಬೆಲ್ಜಿಯಮ್ ಟೂರ್ನಮೆಂಟ್‌ನಿಂದ ನಿರ್ಗಮಿಸಿದೆ.

ಗುರುವಾರ ಅಲ್ ತುಮಾಮ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದ ಮೊದಲಾರ್ಧದ ಅಂತ್ಯದಲ್ಲಿ ಮೊರೊಕ್ಕೊ 2-1 ಮುನ್ನಡೆ ಪಡೆದು ಉತ್ತಮ ಆರಂಭ ಪಡೆಯಿತು. ಮೊರೊಕ್ಕೊ ತಂಡದ ಪರ ಹಕೀಂ ಝಿಯಾಶ್ 4ನೇ ನಿಮಿಷದಲ್ಲಿ ಗೋಲು ಖಾತೆ ತೆರೆದರು. 23ನೇ ನಿಮಿಷದಲ್ಲಿ ಗೋಲು ಗಳಿಸಿದ ಯೂಸುಫ್ ಅಲ್ ನಸೀರಿ ಮೊರೊಕ್ಕೊ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು.  

ನಾಯಿಫ್ ಅಕ್ರದ್ 40ನೇ ನಿಮಿಷದಲ್ಲಿ ಸ್ವಯಂ ಗೋಲು ಗಳಿಸಿದ ಕಾರಣ ಕೆನಡಾ ಖಾತೆಗೆ ಒಂದು ಗೋಲು ಜಮೆಯಾಯಿತು.

3 ಪಂದ್ಯದಲ್ಲಿ 7 ಅಂಕ ಗಳಿಸಿದ ಮೊರೊಕ್ಕೊ ಮೊದಲ ಸ್ಥಾನಿಯಾಗಿ ಅಂತಿಮ-16ರ ಸುತ್ತು ತಲುಪಿದರೆ, ಕ್ರೊಯೇಶಿಯ 3 ಪಂದ್ಯದಲ್ಲಿ 5 ಅಂಕ ಗಳಿಸಿ ಮುಂದಿನ ಸುತ್ತಿಗೇರಿದೆ. ಬೆಲ್ಜಿಯಮ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.

ಅಹ್ಮದ್ ಬಿನ್ ಅಲಿ ಸ್ಟೇಡಿಯಮ್‌ನಲ್ಲಿ ಗುರುವಾರ ನಡೆದ ಮತ್ತೊಂದು ಎಫ್ ಗುಂಪಿನ ಪಂದ್ಯದಲ್ಲಿ ಬೆಲ್ಜಿಯಂ ಹಾಗೂ ಕ್ರೊಯೇಶಿಯ ಸಮಬಲದ ಹೋರಾಟ ನೀಡಿದ ಕಾರಣ ಗೋಲು ದಾಖಲಾಗಲಿಲ್ಲ.

 

Similar News