ಭಾರತದ ಜಿ20 ಅಧ್ಯಕ್ಷತೆಯು ಮಾನವಕುಲದ ಒಳಿತಿಗಾಗಿ ಶ್ರಮಿಸಲಿದೆ : ಪ್ರಧಾನಿ ಮೋದಿ

Update: 2022-12-01 17:17 GMT

ಹೊಸದಿಲ್ಲಿ,ಡಿ.1: ಭಾರತವು ಗುರುವಾರ ಒಂದು ವರ್ಷದ ಅವಧಿಗೆ ಜಿ20 ಗುಂಪಿನ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು,ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು,ಭಾರತದ ಜಿ20 ಅಧ್ಯಕ್ಷತೆಯು ಮಾನವ ಕುಲದ ಒಳಿತಿಗಾಗಿ ಶ್ರಮಿಸಲಿದೆ ಎಂದು ಹೇಳಿದ್ದಾರೆ. ಮೋದಿ ನ.16ರಂದು ಇಂಡೋನೇಶ್ಯಾದಲ್ಲಿ ಎರಡು ದಿನಗಳ ಜಿ20 ಶೃಂಗಸಭೆಯಲ್ಲಿ ಆ ದೇಶದ ಅಧ್ಯಕ್ಷ ಜೊಕೊ ವಿಡೋಡೊ(Joko Widodo) ಅವರಿಂದ ಭಾರತದ ಜಿ20 ಅಧ್ಯಕ್ಷತೆಯನ್ನು ಅಧಿಕೃತವಾಗಿ ಸ್ವೀಕರಿಸಿದ್ದರು.

ಇಂದಿನಿಂದ ಭಾರತದ ಜಿ20 ಅಧ್ಯಕ್ಷತೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಗಳನ್ನು ಮಾಡಿರುವ ಮೋದಿ,‘‘ಈ ಅಧಿಕಾರವು ಏಕತ್ವದ ಸಾರ್ವತ್ರಿಕ ಅರ್ಥವನ್ನು ಹೊಂದಿದ್ದು,‘ಒಂದು ಭೂಮಿ,ಒಂದು ಕುಟುಂಬ,ಒಂದು ಭವಿಷ್ಯ ’ಪರಿಕಲ್ಪನೆಯನ್ನು ಉತ್ತೇಜಿಸಲು ಕಾರ್ಯ ನಿರ್ವಹಿಸಲಿದೆ. ಜಗತ್ತು ಇಂದು ಎದುರಿಸುತ್ತಿರುವ ಹವಾಮಾನ ಬದಲಾವಣೆ,ಭಯೋತ್ಪಾದನೆ ಮತ್ತು ಸಾಂಕ್ರಾಮಿಕದ ಬಹು ದೊಡ್ಡ ಸವಾಲುಗಳನ್ನು ಪರಿಹರಿಸಲು ಒಟ್ಟಾಗಿ ಕಾರ್ಯ ನಿರ್ವಹಿಸುವ ಅಗತ್ಯವಿದೆ ’’ ಎಂದು ಹೇಳಿದ್ದಾರೆ.

ವಿಶ್ವ ಜನಸಂಖ್ಯೆಯ ಆರನೇ ಒಂದು ಪಾಲು ಮತ್ತು ತನ್ನ ವೈವಿಧ್ಯಪೂರ್ಣ ಭಾಷೆಗಳು,ಧರ್ಮಗಳು,ಆಚರಣೆಗಳು ಮತ್ತು ನಂಬಿಕೆಗಳೊಂದಿಗೆ ಭಾರತವು ಜಗತ್ತನ್ನು ಪ್ರತಿಬಿಂಬಿಸುತ್ತಿದೆ ಎಂದು ಹೇಳಿರುವ ಮೋದಿ,‘ಸಾಮೂಹಿಕ ನಿರ್ಧಾರವನ್ನು ಕೈಗೊಳ್ಳುವ ತನ್ನ ಹಳೆಯ ಸಂಪ್ರದಾಯದೊಂದಿಗೆ ಪ್ರಜಾಪ್ರಭುತ್ವದ ಭದ್ರ ಬುನಾದಿಯನ್ನು ರೂಪಿಸುವಲ್ಲಿ ಭಾರತವು ಪ್ರಮುಖ ಪಾತ್ರವನ್ನು ಹೊಂದಿದೆ. ಮುಕ್ತ,ಅಂತರ್ಗತ ಮತ್ತು ಪರಸ್ಪರ ಕಾರ್ಯಸಾಧ್ಯ ಡಿಜಿಟಲ್ ಸಾರ್ವಜನಿಕ ಸೌಲಭ್ಯಗಳ ಅಭಿವೃದ್ಧಿಯಲ್ಲಿ ನಾವು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡಿದ್ದೇವೆ. ಭಾರತವು ನಾಗರಿಕ ಕಲ್ಯಾಣಕ್ಕಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ ’ ಎಂದಿದ್ದಾರೆ.

ಭಾರತದ ಜಿ20 ಅಧ್ಯಕ್ಷತೆಯ ಕಾರ್ಯಸೂಚಿಯು ಮಹತ್ವಾಕಾಂಕ್ಷೆಯದಾಗಿದ್ದು,ಅಂತರ್ಗತ,ಕ್ರಿಯಾಶೀಲ ಮತ್ತು ನಿರ್ಣಾಯಕವಾಗಿರಲಿದೆ. ಅದನ್ನು ಸಫಲಗೊಳಿಸಲು ನಾವೆಲ್ಲ ಪರಸ್ಪರ ಕೈಜೋಡಿಸೋಣ.

ಪ್ರಧಾನಿ ನರೇಂದ್ರ ಮೋದಿ

ಇಂಡೋನೇಶ್ಯಾದ ಶೃಂಗಸಭೆಯಲ್ಲಿ ರಶ್ಯದ ಆಕ್ರಮಣದೊಂದಿಗೆ ಆರಂಭಗೊಂಡ ಉಕ್ರೇನ್ ಬಿಕ್ಕಟ್ಟು ಪ್ರಮುಖವಾಗಿತ್ತು. ಇದು ಜಾಗತಿಕ ಆರ್ಥಿಕ ಸಮಸ್ಯೆಗಳ ಕುರಿತು ಹೆಚ್ಚಿನ ಗಮನವನ್ನು ಬಯಸಿದ್ದ ಕೆಲವು ಸದಸ್ಯ ರಾಷ್ಟ್ರಗಳನ್ನು ಹತಾಶಗೊಳಿಸಿತ್ತು. ಮೋದಿ ಈಗ ವಿಶ್ವವು ಎದುರಿಸುತ್ತಿರುವ ಬೃಹತ್ ಸವಾಲುಗಳ ಕುರಿತು ಮಾತನಾಡಿರುವುದು ಈ ರಾಷ್ಟ್ರಗಳಲ್ಲಿ ಭಾರತದ ಜಿ20 ಅಧ್ಯಕ್ಷತೆಯಲ್ಲಿ ಭರವಸೆಯ ಆಶಾಕಿರಣವನ್ನು ಮೂಡಿಸಿದೆ.

Similar News