ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರುಗಳಾಗಿ ಅಶೋಕ್ ಮಲ್ಹೋತ್ರಾ, ಜತಿನ್ ಪರಾಂಜಪೆ

Update: 2022-12-01 17:56 GMT

ಹೊಸದಿಲ್ಲಿ, ಡಿ.1: ಭಾರತದ ಮಾಜಿ ಕ್ರಿಕೆಟಿಗರಾದ ಅಶೋಕ್ ಮಲ್ಹೋತ್ರಾ ಹಾಗೂ ಜತಿನ್ ಪರಾಂಜಪೆ ಅವರನ್ನು ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ)ಸದಸ್ಯರು ಗಳನ್ನಾಗಿ ಬಿಸಿಸಿಐ ಗುರುವಾರ ನೇಮಕ ಮಾಡಿದೆ.
ಮೂವರು ಸದಸ್ಯರುಗಳ ಸಮಿತಿಯಲ್ಲಿ ಮಲ್ಹೋತ್ರಾ, ಪರಾಂಜಪೆ ಹಾಗೂ ಸುಲಕ್ಷಣ ನಾಯಕ್ ಅವರಿದ್ದಾರೆ. ಇವರು ಸಿಎಸಿ ಭಾಗವಾಗಿ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿಕೆ ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.


ಮಲ್ಹೋತ್ರಾ ಅವರು ಭಾರತದ ಮಾಜಿ ವೇಗಿ ಮದನ್ ಲಾಲ್ ಹಾಗೂ ಪರಾಂಜಪೆ ಅವರು ರುದ್ರಪ್ರತಾಪ್ ಸಿಂಗ್ರಿಂದ ತೆರವಾದ ಸ್ಥಾನಕ್ಕೆ ಆಯ್ಕೆ ಯಾಗಿದ್ದಾರೆ. ಈ ಸಮಿತಿಯು ಈ ತಿಂಗಳಾಂತ್ಯದಲ್ಲಿ ನೂತನ ಆಯ್ಕೆ ಸಮಿತಿಯನ್ನು ಆಯ್ಕೆ ಮಾಡಲಿದೆ. 


ಮಲ್ಹೋತ್ರಾ ಭಾರತವನ್ನು 7ಟೆಸ್ಟ್ ಹಾಗೂ 20 ಏಕದಿನ ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಪ್ರತಿನಿಧಿಸಿ ದ್ದಾರೆ. ಇತ್ತೀಚೆಗೆ ಭಾರತೀಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿದ್ದರು. ಮತ್ತೊಂದೆಡೆ ಪರಾಂಜಪೆ ಭಾರತದ ಪರ 4 ಏಕದಿನ ಪಂದ್ಯವನ್ನು ಆಡಿದ್ದಾರೆ. ಹಿರಿಯ ಪುರುಷರ ಆಯ್ಕೆ ಸಮಿತಿಯ ಭಾಗವಾಗಿದ್ದರು.
ಸುಲಕ್ಷಣ ನಾಯಕ್ 11 ವರ್ಷಗಳ ವೃತ್ತಿಜೀವನದಲ್ಲಿ ಭಾರತದ ಮಹಿಳಾ ತಂಡದ ಪರ 2 ಟೆಸ್ಟ್, 46 ಏಕದಿನ ಹಾಗೂ 31 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ.


ನವೆಂಬರ್ನಲ್ಲಿ ಬಿಸಿಸಿಐ ಚೇತನ್ ಶರ್ಮಾ ನೇತೃತ್ವದ ಇಡೀ ಆಯ್ಕೆ ಸಮಿತಿಯನ್ನು ವಜಾ ಮಾಡಿತ್ತು. ಆಯ್ಕೆ ಸಮಿತಿಯಲ್ಲಿ ಹರ್ವಿಂದರ್ ಸಿಂಗ್, ಸುನೀಲ್ ಜೋಶಿ ಹಾಗೂ ದೆಬಾಶಿಶ್ ಮೊಹಾಂತಿ ಇತರ ಸದಸ್ಯರಾಗಿದ್ದಾರೆ.
ಚೇತನ್ ಅವರು ಹರ್ವಿಂದರ್ ಜೊತೆಗೆ ಮತ್ತೊಮ್ಮೆ ಆಯ್ಕೆ ಸಮಿತಿಗಾಗಿ ಅರ್ಜಿ ಸಲ್ಲಿಸಿದ್ದಾರೆ.


ನಯನ್ ಮೊಂಗಿಯಾ, ವೆಂಕಟೇಶ್ ಪ್ರಸಾದ್, ಮಣಿಂದರ್ ಸಿಂಗ್, ಶಿವ ಸುಂದರ್ ದಾಸ್, ಸುಬ್ರೊತ ಬ್ಯಾನರ್ಜಿ, ಸಲೀಲ್ ಅಂಕೋಲ, ಅಮಯ್ ಖುರಾಸಿಯಾ, ರೀತಿಂದರ್ ಸಿಂಗ್ ಸೋಧಿ, ನಿಖಿಲ್ ಚೋಪ್ರಾ ಹಾಗೂ ಅತುಲ್ ವಾಸನ್ ಅವರು ಆಯ್ಕೆ ಸಮಿತಿಯಲ್ಲಿ ಸ್ಥಾನ ಪಡೆಯಲು ಅರ್ಜಿ ಹಾಕಿರುವ ಪ್ರಮುಖರಾಗಿದ್ದಾರೆ.

Similar News