ಮಾತನಾಡುವುದಿದೆ: ದಿಟ್ಟ ಪತ್ರಕರ್ತ ರವೀಶ್ ಕುಮಾರ್ ರಾಜೀನಾಮೆಯ ನಂತರ...

Update: 2022-12-02 04:40 GMT

ದೇಶದ ಮಾಧ್ಯಮ ವಲಯದಲ್ಲಿ ವಿಭಿನ್ನ ಧ್ವನಿಯಾಗಿದ್ದ ಎನ್‌ಡಿಟಿವಿ ಇನ್ನು ಹಾಗಿರಲು ಆಗದು. ಸ್ವಾತಂತ್ರ್ಯದ ಕುರಿತ ತುಡಿತ ದೊಡ್ಡದೆಂದು ನಂಬುವ ರವೀಶ್ ಈಗ ಅದರ ಭಾಗವಲ್ಲ. ಭಾರತೀಯ ಟಿವಿ ನ್ಯೂಸ್‌ನಿಂದ ರವೀಶ್‌ರಂತಹ ಮಹತ್ವದ ಧ್ವನಿಯ ನಿರ್ಗಮನ ನಿಜಕ್ಕೂ ಕಾಡುತ್ತದೆ. ದೇಶವಿದೇಶಗಳಲ್ಲಿ ವೀಕ್ಷಕರು ಕಾತರದಿಂದ ಕಾಯುತ್ತಿದ್ದ ಪ್ರೈಮ್ ಟೈಮ್ with ರವೀಶ್ ಇನ್ನು ಪ್ರತಿರಾತ್ರಿ ಎನ್‌ಡಿಟಿವಿಯಲ್ಲಿ ಬರುವುದಿಲ್ಲ. ಟಿಆರ್‌ಪಿಗಾಗಿ ಏನನ್ನೂ ಮಾಡಲು ಹೇಸದ ಟಿವಿ ಆ್ಯಂಕರ್‌ಗಳ ನಡುವೆ ತಾನು ಝೀರೋ ಟಿಆರ್‌ಪಿ ಆ್ಯಂಕರ್ ಎಂದು ಸ್ವಯಂಘೋಷಿಸಿಕೊಂಡರೂ ಭಾರತದಲ್ಲಿ ಮಾತ್ರವಲ್ಲ ಜಾಗತಿಕವಾಗಿಯೂ ಅದೆಷ್ಟೋ ಅಭಿಮಾನಿ ವೀಕ್ಷಕರನ್ನು ಸಂಪಾದಿಸಿರುವ ದಿಟ್ಟ ಪತ್ರಕರ್ತ ರವೀಶ್ ಕುಮಾರ್.

ದೇಶದ ಬಹುತೇಕ ಟಿವಿ ಚಾನೆಲ್‌ಗಳಲ್ಲಿ ಸುದ್ದಿ ನಿರೂಪಕರು ಸರಕಾರಿ ಕೃಪಾ ಪೋಷಿತ ಪೋಷಾಕಿನಲ್ಲಿ ಪ್ರತೀ ದಿನ ಹಾಗೂ ರಾತ್ರಿ ಅಬ್ಬರಿಸುತ್ತ್ತಾ, ಹೂಂಕರಿಸುತ್ತಾ ಠೇಂಕರಿಸುತ್ತಾ ಇರುವಾಗ, ಅದೊಂದು ಚಾನೆಲ್‌ನಲ್ಲಿ ಆ ಒಬ್ಬ ನಿರೂಪಕ ಆತ್ಮೀಯ ದನಿಯಲ್ಲಿ ಆದರೆ ಅಷ್ಟೇ ಮೊನಚಾಗಿ, ಅದಕ್ಕಿಂತಲೂ ಕರಾರುವಾಕ್ಕಾಗಿ ಪ್ರತಿರಾತ್ರಿ ಮಾತನಾಡುತ್ತಿದ್ದರು. ಅವರ ಒಂದೊಂದು ಮಾತೂ ಟಿವಿಯೆದುರು ಕೂತಿರುವವರ ಮುಖದಲ್ಲಿ ಮಂದಹಾಸ ತರಿಸುತ್ತಲೇ ಗಂಭೀರವಾಗಿ ಯೋಚನೆಗೆ ಹಚ್ಚುತ್ತಿತ್ತು. ಅವರ ಸೌಮ್ಯ ದನಿಗೆ ಆಳುವವರನ್ನು ಅಲ್ಲಾಡಿಸುವಂಥ ಆತ್ಮಸ್ಥೈರ್ಯವಿರುತ್ತಿತ್ತು. ಆ ನವಿರು ಭಾಷೆಗೆ ಮನಸೋಲದವರೇ ಇರಲಿಲ್ಲ. ಆ ಟಿವಿ ವಾಹಿನಿ ಎನ್‌ಡಿಟಿವಿ ಮತ್ತು ದೇಶದ ಮಾಧ್ಯಮದಲ್ಲಿ ಅತಿ ಮುಖ್ಯ ಹೆಸರಾದ ಆ ನಿರೂಪಕ ರವೀಶ್ ಕುಮಾರ್. ಎನ್‌ಡಿಟಿವಿಯ ಹಿರಿಯ ಕಾರ್ಯನಿರ್ವಾಹಕ ಸಂಪಾದಕ ಹುದ್ದೆಗೆ ಅವರೀಗ ರಾಜೀನಾಮೆ ನೀಡಿದ್ದಾರೆ.

 ‘‘ನಮ್ಮ ದೇಶ ಸರಿಯಾಗಲು ಮೊದಲು ಜನರು ತಮ್ಮ ಮನೆಯಿಂದ ಟಿವಿಯನ್ನು ತೆಗೆದು ಬಿಸಾಡಬೇಕು, ಟಿವಿ ನ್ಯೂಸ್ ಚಾನೆಲ್‌ಗಳನ್ನು ನೋಡುವುದನ್ನು ಬಿಟ್ಟುಬಿಡಬೇಕು. ಅದರಲ್ಲಿ ಕೇವಲ ಸುಳ್ಳು ಪ್ರಸಾರವಾಗುತ್ತಿದೆ, ನೇತಾಗಳ ಚಮಚಾಗಿರಿ ನಡೆಯುತ್ತಿದೆ ಹಾಗೂ ಹಿಂದೂ-ಮುಸ್ಲಿಮ್ ಡಿಬೇಟ್ ಮಾಡಿ ಜನರನ್ನು ಮಾನವ ಬಾಂಬ್ ಮಾಡುವ ಪ್ರಯತ್ನ ನಡೆಯುತ್ತಿದೆ’’ ಎಂದು ಎಚ್ಚರಿಸುತ್ತಿದ್ದ ರವೀಶ್ ಕುಮಾರ್ ಈಗ ಸ್ವತಃ ಟಿವಿಯಿಂದ ನಿರ್ಗಮಿಸಿದ್ದಾರೆ.

ಎನ್‌ಡಿಟಿವಿ ಅದಾನಿ ಗ್ರೂಪ್ ಪಾಲಾಗುತ್ತಿದ್ದಂತೆ ಸಂಸ್ಥಾಪಕರಾಗಿದ್ದ ಪ್ರಣಯ್ ರಾಯ್ ಮತ್ತವರ ಪತ್ನಿ ರಾಧಿಕಾ ರಾಯ್ ಎನ್‌ಡಿಟಿವಿಯಲ್ಲಿ ಪಾಲಿದ್ದ ಆರ್‌ಆರ್‌ಪಿಆರ್ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿದರು. ಅದರ ಬೆನ್ನಲ್ಲೇ ಅದರ ಹಿಂದಿ ಚಾನೆಲ್‌ನ ಆಧಾರ ಸ್ತಂಭದಂತೆ ಇದ್ದ ರವೀಶ್ ಕುಮಾರ್ ಕೂಡ ಹೊರನಡೆದಿದ್ದಾರೆ. ತಮ್ಮ ದಿಟ್ಟ ಪತ್ರಿಕಾ ಧರ್ಮದ ಕಾರಣಕ್ಕಾಗಿ ಪ್ರಾಣ ಬೆದರಿಕೆಯನ್ನೂ ಎದುರಿಸಿದ್ದ ರವೀಶ್, ಅಂಥವಕ್ಕೆಂದೂ ಮಣಿದವರಲ್ಲ. ಈಗಲೂ ಅವರು ತೋರಿರುವುದು ದಿಟ್ಟ ನಿಲುವು. ತಮ್ಮದಾಗಿರದ ಜಾಗದಲ್ಲಿ ನಿಲ್ಲಕೂಡದು ಎಂಬುದು. ಪತ್ರಿಕೋದ್ಯಮದ ಘನತೆಯನ್ನು ಎತ್ತಿಹಿಡಿಯುವ ನೇರವಂತಿಕೆ.

ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿಯೂ ನಿಮ್ಮನ್ನು ಖರೀದಿಸಲು ಸಾಧ್ಯವಿಲ್ಲ ಎಂದಾದರೆ ಅದಕ್ಕೆ ಬಹಳ ಗಟ್ಟಿ ಬೆನ್ನುಮೂಳೆ ನಿಮಗಿರಬೇಕು ಎಂದು ರವೀಶ್ ನಿರ್ಧಾರಕ್ಕೆ ಜನರು ಸೋಷಿಯಲ್ ಮೀಡಿಯಾದಲ್ಲಿ ಶಹಬ್ಬಾಶ್ ಹೇಳಿದ್ದು ಬಹಳ ಸೂಕ್ತವಾಗಿದೆ.

 ಕಳೆದ 27 ವರ್ಷಗಳಿಂದ ಎನ್‌ಡಿಟಿವಿಯ ಭಾಗವಾಗಿದ್ದ ರವೀಶ್, ಕಚೇರಿಯಲ್ಲಿ ವೀಕ್ಷಕರ ಪತ್ರ ಓದುವ ಕೆಲಸದಿಂದ ಆರಂಭಿಸಿ, ಈಗ ಕಾರ್ಯನಿರ್ವಾಹಕ ಸಂಪಾದಕ ಹುದ್ದೆಯವರೆಗೂ ಏರಿದ್ದವರು. ದೇಶದ ಅತ್ಯಂತ ಪ್ರಭಾವಿ ಟಿವಿ ಪತ್ರಕರ್ತರಲ್ಲಿ ಒಬ್ಬರು. ಅವರ ವರದಿಗಾರಿಕೆ, ನಿರೂಪಣೆ ಎರಡೂ ಎಲ್ಲರಿಗಿಂತ ವಿಭಿನ್ನ. ಅವರದೇ ವಿಶಿಷ್ಟ ಸ್ಟೈಲ್. ಎನ್‌ಡಿಟಿವಿಯಲ್ಲಿ ಅವರು ನಡೆಸಿಕೊಡುತ್ತಿದ್ದ ಪ್ರೈಮ್ ಟೈಂ, ಹಮ್ ಲೋಗ್, ರವೀಶ್ ಕಿ ರಿಪೋರ್ಟ್ ಮತ್ತು ದೇಶ್ ಕಿ ಬಾತ್ ಕಾರ್ಯಕ್ರಮಗಳು ಅಪಾರ ಜನಮನ್ನಣೆ ಗಳಿಸಿದ್ದವು.

ಪ್ರತೀ ರಾತ್ರಿ ಅವರ ಪ್ರೈಮ್ ಟೈಮ್ ವಿತ್ ರವೀಶ್ ವಾಟ್ಸ್ ಆ್ಯಪ್ ಸುಳ್ಳಿನ ಲೋಕದಲ್ಲಿ ಮುಳುಗಿದವರಿಗೆ ಕಣ್ತೆರೆಸಿ ಕಟು ಸತ್ಯದ ದರ್ಶನ ಮಾಡಿಸಿದರೆ ಆಳುವವರ ಕಣ್ಣು ಕೆಂಪಾಗಿಸುತ್ತಿತ್ತು. ಸುಮಾರು ಅರ್ಧ ಗಂಟೆಯ ಆ ಕಾರ್ಯಕ್ರಮಕ್ಕಾಗಿ ಅವರು ಮಾಡುತ್ತಿದ್ದ ಅಧ್ಯಯನ, ಅದಕ್ಕಾಗಿ ಸಂಗ್ರಹಿಸುತ್ತಿದ್ದ ಮಾಹಿತಿ, ಅಂಕಿ ಅಂಶಗಳು, ವಿವರಗಳು ಅವರ ಕಟು ಟೀಕಾಕಾರರೂ ಅಹುದಹುದು ಎಂದು ಒಪ್ಪಿಕೊಳ್ಳುವಂತೆ ಮಾಡುತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಆ ಮಾಹಿತಿಗಳಿಗೆ ಅವರು ನೀಡುತ್ತಿದ್ದ ವಿಶಿಷ್ಟ ಒಳನೋಟ ಹಾಗೂ ಅದನ್ನು ಅವರು ವೀಕ್ಷಕರ ಎದುರಿಡುವ ಪರಿ ಅತ್ಯಂತ ವಿಶಿಷ್ಟವಾಗಿತ್ತು, ಆಕರ್ಷಕವಾಗಿತ್ತು.

ಸಾಮಾಜಿಕ ಸಮಸ್ಯೆಗಳನ್ನು ಅವರು ವಿಡಂಬನಾತ್ಮಕವಾಗಿಯೇ ಬಿಡಿಸಿಡುವ ಬಗೆ ಅನನ್ಯ. ಅಲಕ್ಷಿತರ ಅಗತ್ಯ ಮತ್ತು ಹಕ್ಕುಗಳಿಗಾಗಿ ಮಾತನಾಡುವ ಬದ್ಧತೆ. ಅವರದೇ ಆದ ವರದಿಗಾರಿಕೆಯ ಶೈಲಿ ದೇಶಾದ್ಯಂತ ಅದೆಷ್ಟೋ ಮನಸ್ಸುಗಳನ್ನು ಎಚ್ಚರಿಸಿದೆ. ನೀವು ಯಾರಿಗೆ ಬೇಕಾದರೂ ಮತ ಹಾಕಿ, ಆದರೆ ನಿಮ್ಮ ಶಿಕ್ಷಣದ, ಉದ್ಯೋಗದ, ಆರೋಗ್ಯದ ಹಕ್ಕಿನ ಕುರಿತು ನಾನು ಸರಕಾರವನ್ನು ಪ್ರಶ್ನಿಸುತ್ತೇನೆ, ನೀವೂ ಅವರನ್ನು ಪ್ರಶ್ನಿಸಿ ಎಂದು ಕೋಮುವಾದದ ಭ್ರಮೆಯಲ್ಲಿ ತೇಲಾಡುವ ನಿರುದ್ಯೋಗಿ ಯುವಜನರಿಗೆ ಆಗಾಗ ರವೀಶ್ ಹೇಳುತ್ತಿದ್ದರು. ಹಾಗೆ ಹೇಳುವ ಹಕ್ಕೂ ಅವರಿಗಿತ್ತು. ಏಕೆಂದರೆ ಬೇರೆಲ್ಲ ಚಾನೆಲ್‌ಗಳು ಯುವಕರನ್ನು ಧರ್ಮದ್ವೇಷದ ಅಮಲೇರಿಸಿ ಕುರುಡಾಗಿಸಿದರೆ, ರವೀಶ್ ಸರಣಿ ವಿಶೇಷ ವರದಿಗಳ ಮೂಲಕ ಲಕ್ಷಾಂತರ ಯುವಜನರಿಗೆ ಸರಕಾರಿ, ಖಾಸಗಿ ಉದ್ಯೋಗ ನೇಮಕಾತಿ ಆಗುವ ಹಾಗೆ ಮಾಡಿದವರು. ವಿಶ್ವವಿದ್ಯಾನಿಲಯಗಳ ಅವ್ಯವಸ್ಥೆಯನ್ನು ಬಯಲು ಮಾಡಿ ಶಿಕ್ಷಣ ವ್ಯವಸ್ಥೆಯನ್ನು ರಿಪೇರಿ ಮಾಡಿಸಿದವರು.

ಅವರ ಪತ್ರಿಕೋದ್ಯಮದ ಭಾಗವಾಗಿಯೇ ಗಮನ ಸೆಳೆದಿರುವುದು ಅವರ ಬರವಣಿಗೆ. ‘ಬೋಲ್ನಾ ಹಿ ಹೈ - ಲೋಕತಂತ್ರ್, ಸಂಸ್ಕೃತಿ ಔರ್ ರಾಷ್ಟ್ರ ಕೆ ಬಾರೇ ಮೆ’ ಎಂಬ ಪ್ರಖ್ಯಾತ ಹಿಂದಿ ಕೃತಿ ‘ದಿ ಫ್ರೀ ವಾಯ್ಸಾ: ಆನ್ ಡೆಮಾಕ್ರಸಿ, ಕಲ್ಚರ್ ಆ್ಯಂಡ್ ದಿ ನೇಷನ್’ ಎಂದು ಇಂಗ್ಲಿಷ್‌ನಲ್ಲಿ ಅನುವಾದವಾಗಿದೆ. ‘ಎ ಸಿಟಿ ಹ್ಯಾಪನ್ಸ್ ಇನ್ ಲವ್’ ಎಂಬುದು ಅವರ ಇನ್ನೊಂದು ಕೃತಿ. ಅಲ್ಲದೆ, ‘ದೇಖ್ತೆ ರಹಿಯೆ’, ‘ರವೀಶ್ ಪಂತಿ’ ಎಂಬ ಕೃತಿಗಳನ್ನೂ ಬರೆದಿದ್ದಾರೆ.

ಏಶ್ಯದ ನೊಬೆಲ್ ಎನ್ನಲಾಗುವ ರೆಮೊನ್ ಮ್ಯಾಗ್ಸೆಸ್ಸೆ ಪ್ರಶಸ್ತಿ, ರಾಮನಾಥ್ ಗೋಯೆಂಕಾ ಪ್ರಶಸ್ತಿ, ಮೊದಲ ಕುಲದೀಪ್ ನಯ್ಯರ್ ಪತ್ರಿಕೋದ್ಯಮ ಪ್ರಶಸ್ತಿ, ಗಣೇಶ್ ಶಂಕರ್ ವಿದ್ಯಾರ್ಥಿ ಪ್ರಶಸ್ತಿ, ಮುಂಬೈ ಪ್ರೆಸ್ ಕ್ಲಬ್‌ನ ಬೆಸ್ಟ್ ಜರ್ನಲಿಸ್ಟ್ ಪ್ರಶಸ್ತಿ ಮೊದಲಾದ ಪ್ರತಿಷ್ಠಿತ ಗೌರವಗಳು ಅವರ ಪತ್ರಿಕಾ ವೃತ್ತಿಯಲ್ಲಿನ ಸಾಧನೆಗೆ ಸಂದಿವೆ. 2016ರಲ್ಲಿ ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆ ಮಾಡಿದ್ದ ನೂರು ಪ್ರಭಾವಿ ಭಾರತೀಯರ ಪಟ್ಟಿಯಲ್ಲಿ ರವೀಶ್ ಹೆಸರಿತ್ತು. ಬಿಹಾರದ ಜಿತ್ವಾರ್ಪುರ್ ಗ್ರಾಮದಿಂದ ಬಂದ ಭೋಜಪುರಿ ಮಾತೃಭಾಷೆಯ ರವೀಶ್ ದೇಶವಿದೇಶಗಳಲ್ಲಿ ಹೀಗೆ ಗುರುತಾದವರು.

 ಮಾಧ್ಯಮವು ಪ್ರಭುತ್ವದ ತುತ್ತೂರಿಯಾಗುವುದನ್ನು ರವೀಶ್ ಅವರೆಂದೂ ಸಹಿಸಿಲ್ಲ. ಗೌರವಾನ್ವಿತ ಪತ್ರಿಕೋದ್ಯಮ ಮಾಡದೆ, ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಹಲವು ಪತ್ರಕರ್ತರು ಪ್ರಭುತ್ವವನ್ನು ಹೊಗಳುತ್ತ, ಅದರ ಮತ್ತು ಅದರ ಸುತ್ತಲಿನ ಕಾರ್ಪೊರೇಟ್ ವಲಯ ಮತ್ತು ಕೆಲವು ಗಣ್ಯರ ಹಿತಾಸಕ್ತಿಗಳನ್ನು ಕಾಯುವಂಥ ಸುಳ್ಳು ಮತ್ತು ಪ್ರಚೋದನಾಕಾರಿ ಸುದ್ದಿಗಳನ್ನು ಪ್ರಸಾರ ಮಾಡುವುದನ್ನು ಕಟುವಾಗಿ ಖಂಡಿಸಿದವರು ರವೀಶ್. ಅಂಥ ಮಾಧ್ಯಮವನ್ನು ಅವರು ‘ಗೋದಿ ಮೀಡಿಯಾ’ ಎಂದು ಕುಟುಕಿದರು. ಲ್ಯಾಪ್ ಡಾಗ್ ಮೀಡಿಯಾ ಎಂಬುದಕ್ಕೆ ಸಂವಾದಿಯಾಗಿ ಅವರು ಹೇಳಿದ ಈ ಪದ ರೈತರ ಪ್ರತಿಭಟನೆ, ನಾಗರಿಕತ್ವ ತಿದ್ದುಪಡಿ ವಿರುದ್ಧದ ಪ್ರತಿಭಟನೆ ವೇಳೆ ಬಹಳ ಖ್ಯಾತಿ ಪಡೆಯಿತು. ಈಗದು ಎಲ್ಲ ಭಟ್ಟಂಗಿ ಪತ್ರಕರ್ತರನ್ನು ಗುರುತಿಸುವ ಹೊಸ ಹೆಸರಾಗಿ ರೂಢಿಯಲ್ಲಿದೆ.

ಇತಿಹಾಸ ಓದಿಕೊಂಡವರಾದ ರವೀಶ್ ಅವರಿಗೆ ಈ ದೇಶದ ಚರಿತ್ರೆ ಹೇಗೆ ಕಂಡಕಂಡವರ ಪಾಲಾಗಿ ಛಿದ್ರಗೊಳ್ಳುತ್ತಿದೆ ಎಂಬ ಸತ್ಯ ಗೊತ್ತು. ಭಾರತೀಯ ರಾಜಕಾರಣ ಕಳೆದೊಂದು ದಶಕದಲ್ಲಿ ಕಂಡಿರುವ ಸ್ಥಿತ್ಯಂತರದ ಬಗೆಗಿನ ವಿಷಾದವೂ ಅವರ ತಣ್ಣಗಿನ ಮಾತುಗಳಲ್ಲಿ, ವಿಡಂಬನೆಯ ಅಂಚಿನಲ್ಲಿ ವ್ಯಕ್ತವಾಗುತ್ತದೆ.

ರೈತರ ಪ್ರತಿಭಟನೆ ವೇಳೆ ದಿಲ್ಲಿ ಪೊಲೀಸರು ಯುವ ಪತ್ರಕರ್ತ ಮನ್‌ದೀಪ್ ಪುನಿಯಾ ಅವರನ್ನು ಬಂಧಿಸಿ ತಿಹಾರ್ ಜೈಲಿನಲ್ಲಿರಿಸಿದ್ದರು. ಆಗ ಅಲ್ಲಿನ ಜೈಲರ್ ಹೆಸರಿಗೆ ರವೀಶ್ ಬರೆದ ಪತ್ರವು ಈ ದೇಶದ ರಾಜಕಾರಣವನ್ನು ಮತ್ತು ಪ್ರಭುತ್ವವನ್ನು ಮಾರ್ಮಿಕವಾಗಿ ವಿಮರ್ಶಿಸಿತ್ತು. ‘‘ನಿಮ್ಮ ಮಕ್ಕಳು ಪತ್ರಕರ್ತರಾಗದಂತೆ ನೋಡಿಕೊಳ್ಳಿ, ಪತ್ರಕರ್ತರಾಗಿ ಸತ್ಯ ಹೇಳಿದರೆ ಸಣ್ಣ ತಪ್ಪುಗಳನ್ನು ಹುಡುಕಿ ಜೈಲಿಗೆ ಹಾಕಲಾಗುತ್ತದೆ’’ ಎಂದು ವ್ಯಂಗ್ಯದಿಂದಲೇ ವ್ಯವಸ್ಥೆಯನ್ನು ಟೀಕಿಸಿದ್ದರು. ‘‘ಸ್ವಾತಂತ್ರ್ಯದ ಘೋಷಣೆ ಕೂಗುವ ಆ ಸ್ಥಳದ ಮೇಲೆ ಜೈಲರ್ ಕಣ್ಣು ಬಿದ್ದಿದೆ. ಜೈಲರ್ ಅವರೇ, ನೀವು ಆ ಜೈಲರ್ ಅಲ್ಲ. ಜೈಲರ್ ಮತ್ತೊಬ್ಬರಿದ್ದಾರೆ’’ ಎನ್ನುವ ಮೂಲಕ, ಪ್ರಭುತ್ವವನ್ನು ತಿವಿದಿದ್ದರು. ಪ್ರಶ್ನಿಸುವ ಪತ್ರಕರ್ತರನ್ನು ಜೈಲಿನಲ್ಲಿರಿಸಿದರೆ ಜೈಲಿನಿಂದ ಪತ್ರಿಕೆಗಳು ಹೊರಡಬಹುದು ಮತ್ತು ಹೊರಗಿರುವ ಪತ್ರಿಕೆಗಳಲ್ಲಿ ಸಾಫ್ಟ್ ಸ್ಟೋರಿಗಳಷ್ಟೇ ಬಂದಾವು ಎಂದು ವ್ಯಂಗ್ಯವಾಡಿದ್ದರು. ಸಿದ್ಧಾರ್ಥ್ ವರದರಾಜನ್, ರಾಜದೀಪ್ ಸರ್ದೇಸಾಯಿ, ಅಮಿತ್ ಸಿಂಗ್ ಮೊದಲಾದ ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಾಗಿರುವ ಬಗ್ಗೆ ಪ್ರಸ್ತಾಪಿಸಿ, ಪ್ರಶ್ನಿಸುವ ಪತ್ರಕರ್ತರ ವಿರುದ್ಧದ ಎಫ್‌ಐಆರ್ ಆಟ ನಿಲ್ಲಬೇಕು ಎಂದು ಆಗ್ರಹಿಸಿದ್ದರು. ಗೋದಿ ಮೀಡಿಯಾಗಳು ಇರುವವರೆಗೆ ಸ್ವಾತಂತ್ರ್ಯವೂ ಈ ದೇಶದಲ್ಲಿ ಸಾಧ್ಯವಿಲ್ಲ. ಹಾಗಾಗಿ ಮೊದಲು ನಿಮ್ಮ ಮನೆಯಲ್ಲಿರುವ ಟಿವಿಯನ್ನು ಹೊರಗೆ ಬಿಸಾಡಿ ಬಿಡಿ ಎಂದೇ ಹೇಳಿ ಜನರನ್ನು ಎಚ್ಚರಿಸಿದ್ದ ಅನನ್ಯ ಪತ್ರಕರ್ತ ಅವರು. ಅವರ ಮಾತಿನಲ್ಲಿ ಅವತ್ತಿಗೂ ಇವತ್ತಿಗೂ ಅದೇ ಪ್ರಖರತೆ.

 ದೇಶದ ಮಾಧ್ಯಮ ವಲಯದಲ್ಲಿ ವಿಭಿನ್ನ ಧ್ವನಿಯಾಗಿದ್ದ ಎನ್‌ಡಿಟಿವಿ ಇನ್ನು ಹಾಗಿರಲು ಆಗದು. ಸ್ವಾತಂತ್ರ್ಯದ ಕುರಿತ ತುಡಿತ ದೊಡ್ಡದೆಂದು ನಂಬುವ ರವೀಶ್ ಈಗ ಅದರ ಭಾಗವಲ್ಲ. ಭಾರತೀಯ ಟಿವಿ ನ್ಯೂಸ್‌ನಿಂದ ರವೀಶ್‌ರಂತಹ ಮಹತ್ವದ ಧ್ವನಿಯ ನಿರ್ಗಮನ ನಿಜಕ್ಕೂ ಕಾಡುತ್ತದೆ. ದೇಶವಿದೇಶಗಳಲ್ಲಿ ವೀಕ್ಷಕರು ಕಾತರದಿಂದ ಕಾಯುತ್ತಿದ್ದ ಪ್ರೈಮ್ ಟೈಮ್ with ರವೀಶ್ ಇನ್ನು ಪ್ರತಿರಾತ್ರಿ ಎನ್‌ಡಿಟಿವಿಯಲ್ಲಿ ಬರುವುದಿಲ್ಲ. ಟಿಆರ್‌ಪಿಗಾಗಿ ಏನನ್ನೂ ಮಾಡಲು ಹೇಸದ ಟಿವಿ ಆ್ಯಂಕರ್‌ಗಳ ನಡುವೆ ತಾನು ಝೀರೋ ಟಿಆರ್‌ಪಿ ಆ್ಯಂಕರ್ ಎಂದು ಸ್ವಯಂಘೋಷಿಸಿಕೊಂಡರೂ ಭಾರತದಲ್ಲಿ ಮಾತ್ರವಲ್ಲ ಜಾಗತಿಕವಾಗಿಯೂ ಅದೆಷ್ಟೋ ಅಭಿಮಾನಿ ವೀಕ್ಷಕರನ್ನು ಸಂಪಾದಿಸಿರುವ ದಿಟ್ಟ ಪತ್ರಕರ್ತ ರವೀಶ್ ಕುಮಾರ್.

ಸದ್ಯ ರವೀಶ್ ಕುಮಾರ್ ಅವರು ತಮ್ಮ ಅಧಿಕೃತ ಯೂಟ್ಯೂಬ್ ಚಾನಲ್ ಮೂಲಕ ಆಗಾಗ ವೀಕ್ಷಕರ ಮುಂದೆ ಬರುತ್ತಿದ್ದಾರೆ. Ravish Kumar Official  ಇದು ಅವರ ಅಧಿಕೃತ ಯೂಟ್ಯೂಬ್ ಚಾನೆಲ್. ಅತ್ಯಂತ ವೇಗವಾಗಿ ಈ ಚಾನಲ್‌ಗೆ 9 ಲಕ್ಷ ಜನ ಸಬ್‌ಸ್ಕ್ರೈಬ್ ಮಾಡಿದ್ದಾರೆ. ಅವರ ರಾಜೀನಾಮೆ ಕುರಿತ ವೀಡಿಯೊಗೆ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವ್ಯೆಸ್, 25 ಸಾವಿರಕ್ಕೂ ಹೆಚ್ಚು ಕಮೆಂಟ್‌ಗಳು ಬಂದಿವೆ.

ಅವರದಾಗಿ ಉಳಿದಿರದ ಎನ್‌ಡಿಟಿವಿಯಿಂದ ರವೀಶ್ ಹೊರನಡೆದಿದ್ದಾರೆ ನಿಜ. ಆದರೆ ಸತ್ಯವನ್ನು ಹೇಳುವ ಅವರ ಶೋ ಅವರ ಮೇಲೆ ಅಗಾಧ ಪ್ರೀತಿಯುಳ್ಳವರ ಮನಸ್ಸುಗಳೊಳಗೆ ನಿರಂತರವಾಗಿರುತ್ತದೆ. ‘ರವೀಶ್ ಕಿ ರಿಪೋರ್ಟ್’ಗಾಗಿ, ಅವರ ಪ್ರೈಮ್ ಟೈಂಗಾಗಿ ಈ ದೇಶದ ಸೂಕ್ಷ್ಮಮತ್ತು ಸೆಕ್ಯುಲರ್ ಮನಸ್ಸಿನ ಬಹುದೊಡ್ಡ ವರ್ಗವೊಂದು ಕಾಯುತ್ತದೆ ಮತ್ತು ತಮ್ಮಿಳಗಿನ ಮಿಡಿತವೇ ಆಗಿರುವ ಪತ್ರಿಕಾ ವೃತ್ತಿಯ ಕಾರಣದಿಂದಾಗಿ ರವೀಶ್ ತಮ್ಮ ಅದೇ ಪ್ರಶಾಂತವೂ ಪ್ರಖರವೂ ಆದ ದನಿಯೊಂದಿಗೆ ಮತ್ತೆ ನಮ್ಮೆಲ್ಲರ ಎದುರು ಬಂದು ನಿಲ್ಲುತ್ತಾರೆ.

ಯಾಕೆಂದರೆ-

ಬೋಲ್ನಾ ಹಿ ಹೈ, ಲೋಕತಂತ್ರ್, ಸಂಸ್ಕೃತಿ ಔರ್ ರಾಷ್ಟ್ರ ಕೆ ಬಾರೇ ಮೆ.

Similar News