ಥಾಣೆ: ಕತ್ತು ಸೀಳಿದ ಸ್ಥಿತಿಯಲ್ಲಿ 9 ವರ್ಷದ ಬಾಲಕಿಯ ಶವ ಪತ್ತೆ, ಅತ್ಯಾಚಾರ ಶಂಕೆ

Update: 2022-12-02 06:31 GMT

ಕಲ್ಯಾಣ್: ಕಲ್ಯಾಣ್ ರೈಲ್ವೇ ನಿಲ್ದಾಣದ ಬಳಿಯ ವಸತಿ ಸಮುಚ್ಚಯದಲ್ಲಿ ಗುರುವಾರ ಬೆಳಗ್ಗೆ ಒಂಬತ್ತು ವರ್ಷದ ಬಾಲಕಿಯ ಶವ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ವಿವಾದದ ಹಿನ್ನೆಲೆಯಲ್ಲಿ ಇತ್ತೀಚೆಗೆ ಬಾಲಕಿಯ ತಂದೆಯಿಂದ ಥಳಿಸಲ್ಪಟ್ಟ 15 ವರ್ಷದ ಬಾಲಕ ಸೇರಿದಂತೆ ಕೆಲವು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ.

"ಪ್ರಾಥಮಿಕವಾಗಿ ಬಾಲಕಿಯನ್ನು ಕೊಲ್ಲುವ ಮೊದಲು ಅತ್ಯಾಚಾರವೆಸಗಲಾಗಿದೆ ಎಂದು ತೋರುತ್ತಿದೆ. ನಾವು ಶಂಕಿತನನ್ನು ಬಂಧಿಸಿದ್ದೇವೆ. ನಾವು ಯಾವುದೇ ಬಂಧನಕ್ಕೂ ಮುನ್ನ ಕೆಲವು ಸುಳಿವುಗಳನ್ನು ಹುಡುಕುತ್ತಿದ್ದೇವೆ’’ ಎಂದು ಝೋನಲ್ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಸಚಿನ್ ಗುಂಜಾಲ್ ಹೇಳಿದ್ದಾರೆ.

ಬೆಳಗ್ಗೆ 7.30ರ ಸುಮಾರಿಗೆ ವಸತಿ ಸಮುಚ್ಚಯದ ನಿವಾಸಿಗಳು ಬಾಲಕಿಯ ಶವವನ್ನು ಕಂಡು ಮಹಾತ್ಮ ಫುಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಲಕಿಯ ಸ್ಥಿತಿಯನ್ನು ಕಂಡ ಪೊಲೀಸರು ಆಕೆ ರಸ್ತೆಬದಿಯ ನಿವಾಸಿ ಯಾಗಿರಬಹುದೆಂದು  ಶಂಕಿಸಿ  ಆಕೆಯ ಕುಟುಂಬವನ್ನು ಹುಡುಕಲು ಆರಂಭಿಸಿದರು. ಪೋಷಕರು ಸಮೀಪದ ಫುಟ್‌ಪಾತ್‌ನಲ್ಲಿ ಮಲಗಿರುವುದನ್ನು ಪತ್ತೆ ಹಚ್ಚಿದರು. ಪೋಷಕರು ತಮ್ಮ ಮಗಳನ್ನು ಗುರುತಿಸಿದ್ದಾರೆ. ವಿಚಾರಣೆ ನಡೆಸಿದ ನಂತರ, ಹುಡುಗಿಯ ತಂದೆ ಇತ್ತೀಚೆಗೆ ಜಗಳವಾಡಿದ ಹದಿಹರೆಯದವನನ್ನು ಒಳಗೊಂಡಂತೆ ಕೆಲವು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ.

ಅನಾಮಧೇಯ ಆರೋಪಿಗಳ ವಿರುದ್ಧ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಹಾಗೂ  ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸರು ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.

Similar News