ಇಸ್ರೊ ಗೂಢಚಾರಿಕೆ ಪ್ರಕರಣ: ನಾಲ್ವರು ಆರೋಪಿಗಳ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

Update: 2022-12-02 06:25 GMT

ಹೊಸದಿಲ್ಲಿ: 1994ರಲ್ಲಿ ಇಸ್ರೋದಲ್ಲಿ(ISRO) ಗೂಢಚಾರಿಕೆ ನಡೆಸಿದ್ದರು ಎಂದು ವಿಜ್ಞಾನಿ ನಂಬಿ ನಾರಾಯಣನ್ (Nambi Narayanan) ಅವರನ್ನು ಪ್ರಕರಣದಲ್ಲಿ ಸಿಲುಕಿಸಿದ್ದ ಆರೋಪ ಎದುರಿಸುತ್ತಿರುವ ನಾಲ್ವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಿದ್ದನ್ನು ಸುಪ್ರೀಂ ಕೋರ್ಟ್ (Supreme Court) ರದ್ದುಪಡಿಸಿದೆ. ಈ ಆರೋಪದಲ್ಲಿ ಮಾಜಿ ಪೊಲೀಸ್ ಮಹಾನಿರ್ದೇಶಕರು ಸೇರಿದಂತೆ ನಾಲ್ವರು ಆರೋಪಿಗಳಿಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತ್ತು. ಪ್ರಕರಣವನ್ನು ಕೇರಳ ಹೈಕೋರ್ಟ್‍ಗೆ ಹಿಂದಿರುಗಿಸಿರುವ ಸುಪ್ರೀಂ ಕೋರ್ಟ್, ಪ್ರತಿ ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಪ್ರತ್ಯೇಕವಾಗಿ ಪರಿಗಣಿಸುವಂತೆ ಸೂಚಿಸಿದೆ.

ನ್ಯಾ. ಎಂ.ಆರ್. ಶಾ ಹಾಗೂ ನ್ಯಾ. ಸಿ.ಟಿ. ರವಿಕುಮಾರ್ ಅವರನ್ನು ಒಳಗೊಂಡಿದ್ದ ಪೀಠವು, ನಾಲ್ವರು ಆರೋಪಿಗಳನ್ನು ಇನ್ನು ಐದು ವಾರಗಳ ಕಾಲ ಬಂಧಿಸದಂತೆಯೂ ಸಿಬಿಐಗೆ ನಿರ್ದೇಶಿಸಿದೆ.

“ಎಲ್ಲ ಮೇಲ್ಮನವಿಗಳಿಗೂ ಅವಕಾಶ ನೀಡಲಾಗಿದೆ. ಹೈಕೋರ್ಟ್ ನೀಡಿರುವ ನಿರೀಕ್ಷಣಾ ಜಾಮೀನು ಆದೇಶವನ್ನು ರದ್ದುಪಡಿಸಿ, ಅದನ್ನು ಬದಿಗಿಡಲಾಗಿದೆ. ಎಲ್ಲ ಪ್ರಕರಣಗಳನ್ನು ಮತ್ತೆ ಹೈಕೋರ್ಟ್‍ಗೆ ಮರಳಿಸಲಾಗಿದ್ದು, ಅವುಗಳ ಜ್ಯೇಷ್ಠತೆಯನ್ನು ಆಧರಿಸಿ ಪ್ರತ್ಯೇಕವಾಗಿ ನಿರ್ಣಯ ಕೈಗೊಳ್ಳಬೇಕು. ಯಾವುದೇ ಆರೋಪಿಯ ಮನವಿಯನ್ನು ಜ್ಯೇಷ್ಠತೆಯ ಆಧಾರದಲ್ಲಿ ಪರಿಗಣಿಸಿರುವುದು ನ್ಯಾಯಾಲಯದ ಗಮನಕ್ಕೆ ಬಂದಿಲ್ಲ” ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

“ಇನ್ನು ಆದೇಶ ಹೊರಡಿಸುವುದು ಹೈಕೋರ್ಟ್ ಗೆ ಬಿಟ್ಟಿದ್ದು. ಹೈಕೋರ್ಟ್ ಆದಷ್ಟೂ ಶೀಘ್ರವಾಗಿ, ಅದರಲ್ಲೂ ನಾಲ್ಕು ವಾರಗಳೊಳಗೆ ನಿರೀಕ್ಷಣಾ ಜಾಮೀನು ಅರ್ಜಿ ಕುರಿತು ನಿರ್ಧಾರ ತಳೆಯಬೇಕು” ಎಂದು ಪೀಠವು ಸೂಚಿಸಿದೆ.

Similar News