'ಬಂಗಾಳಿಗಳಿಗಾಗಿ ಮೀನು ಬೇಯಿಸುತ್ತೀರಾ' ಹೇಳಿಕೆಗೆ ಕ್ಷಮೆಯಾಚಿಸಿದ ನಟ ಪರೇಶ್ ರಾವಲ್

Update: 2022-12-02 06:53 GMT

ಹೊಸದಿಲ್ಲಿ: ಗುಜರಾತ್ ರಾಜ್ಯದ ಜನರು ಹಣದುಬ್ಬರವನ್ನು ಸಹಿಸಿಕೊಳ್ಳುತ್ತಾರೆ ಆದರೆ 'ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯರನ್ನಲ್ಲ' ಎಂದು ಗುಜರಾತ್‍ನಲ್ಲಿ ಬಿಜೆಪಿ ಪರ  ಚುನಾವಣಾ ಪ್ರಚಾರ ವೇಳೆ ಹೇಳಿ ಟೀಕೆಗೊಳಗಾಗಿದ್ದ ನಟ ಪರೇಶ್ ರಾವಲ್ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.

"ಗ್ಯಾಸ್ ಸಿಲಿಂಡರ್‍ಗಳು ದುಬಾರಿಯಾಗಿವೆ, ಆದರೆ ಅವುಗಳ ಬೆಲೆ ಕಡಿಮೆಯಾಗಲಿವೆ. ಜನರಿಗೆ ಉದ್ಯೋಗ ಕೂಡ ದೊರೆಯಲಿದೆ. ಆದರೆ ರೋಹಿಂಗ್ಯ ವಲಸಿಗರು ಮತ್ತು ಬಾಂಗ್ಲಾದೇಶಿಗಳು ದಿಲ್ಲಿಯಂತೆ ಇಲ್ಲಿಯೂ ನಿಮ್ಮ ಸುತ್ತಮುತ್ತ ವಾಸಿಸಲು ಆರಂಭಿಸಿದರೆ ಏನಾಗುತ್ತದೆ? ಗ್ಯಾಸ್ ಸಿಲಿಂಡರ್‍ಗಳೊಂದಿಗೆ ನೀವು ಏನು ಮಾಡುತ್ತೀರಿ? ಬಂಗಾಳಿಗಳಿಗೆ ಮೀನು ಬೇಯಿಸುತ್ತೀರಾ?,'' ಎಂದು ಮಂಗಳವಾರ ವಲ್ಸಾಡ್‍ನಲ್ಲಿ ಚುನಾವಣಾ ಪ್ರಚಾರ ವೇಳೆ ರಾವಲ್ ಹೇಳಿದ್ದಾರೆ.

"ಗುಜರಾತ್ ಜನರು ಹಣದುಬ್ಬರ ಸಹಿಸುತ್ತಾರೆ, ಆದರೆ ಇದನ್ನಲ್ಲ...ಅವರು ನಿಂದನೆಗಳನ್ನು ಮಾಡುವ ರೀತಿ.  ಅವರಲ್ಲಿರುವ ಒಬ್ಬ ವ್ಯಕ್ತಿ ತನ್ನ ಬಾಯಿಗೆ ಡಯಾಪರ್ ಹಾಕಬೇಕು,'' ಎಂದು ರಾವಲ್ ಹೇಳಿ ಈ ಮೂಲಕ ಪರೋಕ್ಷವಾಗಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಗುರಿ ಮಾಡಿದ್ದರು ಮಾಡಿದ್ದರು.

"ಅವರು ಖಾಸಗಿ ವಿಮಾನದಲ್ಲಿ ಆಗಮಿಸಿ ನಂತರ ತೋರ್ಪಡಿಕೆಗಾಗಿ ರಿಕ್ಷಾದಲ್ಲಿ ಕುಳಿತುಕೊಳ್ಳುತ್ತಾರೆ. ನಾವು ಜೀವನಮಾನ ಪೂರ್ತಿ ನಟನೆಯಲ್ಲಿ ಕಳೆದಿದ್ದೇವೆ. ಆದರೆ ಈ ರೀತಿಯ ನಾಟಕ ಮಾಡುವವರನ್ನು ನೋಡಿಲ್ಲ. ಮತ್ತು ಹಿಂದುಗಳ ವಿರುದ್ಧ ಬಹಳಷ್ಟು ನಿಂದನೆಗಳು. ಅವರು ಶಾಹೀನ್ ಬಾಗ್‍ನಲ್ಲಿ ಬಿರಿಯಾನಿ ಒದಗಿಸಿದ್ದರು,'' ಎಂದು ಪರೇಶ್ ರಾವಲ್ ಹೇಳಿದ್ದರು.

ಅವರ ಮಾತುಗಳು ಬಂಗಾಳಿಗಳ ವಿರುದ್ಧದ ದ್ವೇಷದ ಭಾಷಣ ಎಂದು ಹಲವರು ಟೀಕಿಸಿದ್ದರು. ಟೀಕೆಗಳ ಬೆನ್ನಲ್ಲೇ ಕ್ಷಮೆಯಾಚಿಸಿ ಪೋಸ್ಟ್ ಮಾಡಿರುವ ಪರೇಶ್ ರಾವಲ್ ತಾವು 'ಅಕ್ರಮ ಬಾಂಗ್ಲಾದೇಶಿಗಳನ್ನು' ಉಲ್ಲೇಖಿಸಿದ್ದಾಗಿ ಹೇಳಿದರು.

"ಖಂಡಿತವಾಗಿ ಮೀನಿನ ವಿಚಾರ ಒಂದು ಸಮಸ್ಯೆಯಲ್ಲ, ಏಕೆಂದರೆ ಗುಜರಾತಿಗಳು ಕೂಡ ಮೀನು ತಿನ್ನುತ್ತಾರೆ. ಬಂಗಾಳಿ ಎಂದು ಹೇಳುವ ಮೂಲಕ ನಾನು ಅಕ್ರಮ ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯರನ್ನು ಉಲ್ಲೇಖಿಸಿದ್ದೆ. ಆದರೂ ನಿಮ್ಮ ಭಾವನೆಗಳಿಗೆ ನೋವುಂಟಾಗಿದ್ದರೆ ಕ್ಷಮೆಯಾಚಿಸುತ್ತೇನೆ,'' ಎಂದು ಪರೇಶ್ ರಾವಲ್ ಹೇಳಿದ್ದಾರೆ.

"ಮೀನಿನ ವಿಚಾರ ಆಗಿರಬಾರದಾಗಿತ್ತು. ಅವರು ಸ್ಪಷ್ಟೀಕರಣ ನೀಡಬೇಕು,'' ಎಂದು ಸಾಮಾಜಿಕ ಜಾಲತಾಣಿಗರೊಬ್ಬರ ಪೋಸ್ಟ್ ಗೆ ಪ್ರತಿಕ್ರಿಯೆಯಾಗಿ ಪರೇಶ್ ರಾವಲ್ ಕ್ಷಮೆಯಾಚಿಸಿದ್ದಾರೆ.

Similar News