ರಾಜಸ್ಥಾನದ ಸಿಕಾರ್‌ನಲ್ಲಿ ಗುಂಡಿಟ್ಟು ಗ್ಯಾಂಗ್‌ಸ್ಟರ್ ರಾಜು ಠೇಠ್ ಹತ್ಯೆ

Update: 2022-12-03 16:15 GMT

ಜೈಪುರ,ಡಿ.3: ರಾಜಸ್ಥಾನದ ಸಿಕಾರ್‌ನಲ್ಲಿ ಶನಿವಾರ ಹಾಡಹಗಲೇ ನಾಲ್ವರು ದುಷ್ಕರ್ಮಿಗಳ ಗುಂಪೊಂದು ಗ್ಯಾಂಗಸ್ಟರ್ ರಾಜು ಠೇಠ್‌(Gangster Raju Theth)ನನ್ನು ಉದ್ಯೋಗ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಿಪ್ರಾಲಿ ರಸ್ತೆಯಲ್ಲಿನ ಆತನ ಮನೆಯ ಮುಂದೆಯೇ ಗುಂಡಿಟ್ಟು ಹತ್ಯೆಗೈದಿದೆ. ತನ್ನ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದ ಠೇಠ್ ಜಾಮೀನಿನಲ್ಲಿ ಹೊರಗಿದ್ದ. ಆತ 2017 ಜೂನ್‌ನಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟಿದ್ದ ಕುಖ್ಯಾತ ಕ್ರಿಮಿನಲ್ ಆನಂದಪಾಲ್ ಸಿಂಗ್‌(Anandpal Singh)ನ ಶತ್ರುವಾಗಿದ್ದ ಎಂದು ವರದಿಯಾಗಿದೆ

ಹಂತಕರಿಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು,ಹರ್ಯಾಣಾ ಮತ್ತು ಝುನ್‌ಝುನು ಗಡಿಗಳನ್ನು ಮುಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಠೇಠ್ ಹತ್ಯೆಯ ಬೆನ್ನಲ್ಲೇ ತನ್ನನ್ನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌(Lawrence Bishnoi Gang)ನ ಸದಸ್ಯ ರೋಹಿತ ಗೋದಾರ ಎಂದು ಹೇಳಿಕೊಂಡ ವ್ಯಕ್ತಿ ಫೇಸ್‌ಬುಕ್‌ನಲ್ಲಿ ಕೊಲೆಯ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದಾನೆ. ಆನಂದಪಾಲ್ ಸಿಂಗ್ ಮತ್ತು ಬಲ್ಬೀರ್ ಬನುಡಾ ಹತ್ಯೆಗಳಿಗೆ ಪ್ರತೀಕಾರವಾಗಿ ಠೇಠ್‌ನನ್ನು ಕೊಲೆಮಾಡಲಾಗಿದೆ ಎಂದು ಆತ ಹೇಳಿಕೊಂಡಿದ್ದಾನೆ. ಆನಂದಪಾಲ್ ಸಿಂಗ್ ಗ್ಯಾಂಗ್‌ನ ಸದಸ್ಯನಾಗಿದ್ದ ಬನುಡಾ 2014,ಜುಲೈನಲ್ಲಿ ಬಿಕಾನೇರ್ ಜೈಲಿನಲ್ಲಿ ನಡೆದಿದ್ದ ಗ್ಯಾಂಗ್‌ವಾರ್‌ನಲ್ಲಿ ಕೊಲ್ಲಲ್ಪಟ್ಟಿದ್ದ.

ಅತ್ತ ದಿಲ್ಲಿಯ ನ್ಯಾಯಾಲಯವೊಂದು ಶನಿವಾರ ಪಂಜಾಬಿ ಗಾಯಕ-ರಾಜಕಾರಣಿ ಸಿಧು ಮೂಸೆವಾಲಾ ಕೊಲೆ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿಯ ಎನ್‌ಡಿಎ ಕಸ್ಟಡಿಯನ್ನು ನಾಲ್ಕು ದಿನಗಳ ಅವಧಿಗೆ ವಿಸ್ತರಿಸಿದೆ. 10 ದಿನಗಳ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಬಿಷ್ಣೋಯಿಯನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿತ್ತು.

ಬಿಷ್ಣೋಯಿ ಕಸ್ಟಡಿ ಅವಧಿಯ ವಿಸ್ತರಣೆಯನ್ನು ಕೋರಿದ ಎನ್‌ಐಎ,ನೆರೆಯ ರಾಜಸ್ಥಾನದಲ್ಲಿ ಇಂದು ನಡೆದ ಹತ್ಯೆಯಲ್ಲಿಯೂ ಬಿಷ್ಣೋಯಿ ಕೈವಾಡವನ್ನು ಶಂಕಿಸಲಾಗಿದ್ದು,ಅಲ್ಲಿಯೂ ಸುಪಾರಿ ಹತ್ಯೆಗಳು ನಡೆಯುತ್ತಿವೆ ಎಂದು ತಿಳಿಸಿತು.

ಠೇಠ್ ಹತ್ಯೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆಯನ್ನು ನಡೆಸಲಾಗುವುದು ಮತ್ತು ತಪ್ಪಿತಸ್ಥರನ್ನು ನ್ಯಾಯದ ಕಟಕಟೆಗೆ ತರಲಾಗುವುದು. ಇತ್ತೀಚಿಗೆ ಜೈಪುರದಲ್ಲಿ ಇಂತಹ 2-3 ಘಟನೆಗಳು ನಡೆದಿದ್ದು,ಭಾಗಿಯಾಗಿದ್ದ ಎಲ್ಲ ಕ್ರಿಮಿನಲ್‌ಗಳನ್ನು ಬಂಧಿಸಲಾಗಿದೆ ಎಂದು ರಾಜಸ್ಥಾನದ ಸಚಿವ ಪ್ರತಾಪಸಿಂಗ್ ಖಚರಿಯಾವಾಸ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

Similar News