ಇಂದು ಮೊದಲ ಏಕದಿನ: ಭಾರತ-ಬಾಂಗ್ಲಾದೇಶ ಹಣಾಹಣಿ

Update: 2022-12-03 17:47 GMT

ಮೀರ್ಪುರ, ಡಿ.3: ಮೂರು ಪಂದ್ಯಗಳ ಏಕದಿನ ಸರಣಿಯು ರವಿವಾರ ಇಲ್ಲಿ ಆರಂಭವಾಗಲಿದ್ದು, ಆತಿಥೇಯ ಬಾಂಗ್ಲಾದೇಶ ತಂಡ ತನ್ನ ತವರು ನೆಲದಲ್ಲಿ ಪ್ರವಾಸಿ ಭಾರತೀಯ ಕ್ರಿಕೆಟ್ ತಂಡಕ್ಕೆ ಕಠಿಣ ಸವಾಲೊಡ್ಡುವ ಸಾಧ್ಯತೆಯಿದೆ.

2023ರ ಏಕದಿನ ವಿಶ್ವಕಪ್‌ನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತವು 50 ಓವರ್‌ಗಳಲ್ಲಿ ತನ್ನ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಬಯಸಿದೆ.

2022ರಲ್ಲಿ 19 ಏಕದಿನ ಇನಿಂಗ್ಸ್‌ಗಳಲ್ಲಿ ಧವನ್ ಭಾರತದ ಪರ ಇನಿಂಗ್ಸ್ ಆರಂಭಿಸಿದ್ದಾರೆ. ಕೆ.ಎಲ್.ರಾಹುಲ್ 45 ಏಕದಿನ ಪಂದ್ಯಗಳಲ್ಲಿ 85 ಪ್ಲಸ್ ಸ್ಟ್ರೈಕ್‌ರೇಟ್‌ನಲ್ಲಿ ಐದು ಶತಕ ಹಾಗೂ 10 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಒಂದು ವೇಳೆ ರಾಹುಲ್ ಅವರು ರೋಹಿತ್ ಶರ್ಮಾರೊಂದಿಗೆ ಇನಿಂಗ್ಸ್ ಆರಂಭಿಸಿದರೆ, ಧವನ್‌ಗೆ ವಿಶ್ರಾಂತಿ ನೀಡಬಹುದು.

ವಿರಾಟ್ ಕೊಹ್ಲಿ 3ನೇ ಕ್ರಮಾಂಕಕ್ಕೆ ಸಹಜ ಆಯ್ಕೆಯಾಗಿದ್ದು, ಶ್ರೇಯಸ್ ಅಯ್ಯರ್ 4ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಮಿಂಚಿದ್ದ ರಿಷಭ್ ಪಂತ್ 5ನೇ ಕ್ರಮಾಂಕದಲ್ಲಿ ಆಡಲಿದ್ದಾರೆ.

ಖಾಯಂ ನಾಯಕ ತಮೀಮ್ ಇಕ್ಬಾಲ್ ಅನುಪಸ್ಥಿತಿಯಲ್ಲಿ ಆಡಲಿರುವ ಬಾಂಗ್ಲಾದೇಶ ವಿರುದ್ಧ ಭಾರತದ ಬೌಲಿಂಗ್ ವಿಭಾಗದಲ್ಲಿ ದೀಪಕ್ ಚಹಾರ್, ಮುಹಮ್ಮದ್ ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್ ಅವರಿದ್ದಾರೆ. ಇಕ್ಬಾಲ್ ಅನುಪಸ್ಥಿತಿಯಲ್ಲಿ ಲಿಟನ್ ದಾಸ್ ಬಾಂಗ್ಲಾದೇಶವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ದಾಸ್ ಕ್ಯಾಲೆಂಡರ್ ವರ್ಷದಲ್ಲಿ ಎಲ್ಲ ಮಾದರಿ ಕ್ರಿಕೆಟ್‌ನಲ್ಲಿ ಗರಿಷ್ಠ ರನ್(1,703 ರನ್)ಗಳಿಸಿದ್ದಾರೆ. ಬಾಂಗ್ಲಾವು 1988ರ ಬಳಿಕ ಭಾರತ ವಿರುದ್ಧ ಕೇವಲ 5 ಏಕದಿನ ಪಂದ್ಯವನ್ನು ಜಯಿಸಿದೆ. 2015ರಲ್ಲಿ ಕೊನೆಯ ಬಾರಿ ಭಾರತವನ್ನು ಬಾಂಗ್ಲಾ ಸೋಲಿಸಿತ್ತು. ಬಾಂಗ್ಲಾದೇಶದ ಬೌಲಿಂಗ್ ವಿಭಾಗವು ಭಾರತದ ಬಲಿಷ್ಠ ಬ್ಯಾಟಿಂಗ್ ಸರದಿಯ ಎದುರು ಕಠಿಣ ಸವಾಲು ಎದುರಿಸಲಿದೆ.

Similar News