ಇರಾನ್ ನೈತಿಕ ಪೊಲೀಸ್ ಘಟಕ ರದ್ದು ಘೋಷಣೆ ನಂಬಲಾಗದು : ಹಿಜಾಬ್ ವಿರೋಧಿ ಕಾರ್ಯಕರ್ತರ ಹೇಳಿಕೆ

Update: 2022-12-05 17:40 GMT

ಪ್ಯಾರಿಸ್, ಡಿ.5: ನೈತಿಕ ಪೊಲೀಸ್ ಘಟಕವನ್ನು ಇರಾನ್ ರದ್ದುಗೊಳಿಸಿದೆ ಎಂಬ ಪ್ರತಿಪಾದನೆಯನ್ನು ಇರಾನ್‌ನಲ್ಲಿ ನಡೆಯುತ್ತಿರುವ  ವಿರೋಧಿ ಪ್ರತಿಭಟನೆಯನ್ನು ಬೆಂಬಲಿಸುವ ಕಾರ್ಯಕರ್ತರು ತಳ್ಳಿಹಾಕಿದ್ದಾರೆ.

ಈ ಘೋಷಣೆ ಬಳಿಕವೂ ಮಹಿಳೆಯರ ದಿರಿಸಿನ ಕುರಿತಾದ ಕಟ್ಟುನಿಟ್ಟಿನ ನಿರ್ಬಂಧದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಕಾರ್ಯಕರ್ತರು ಟ್ವೀಟ್ ಮಾಡಿದ್ದಾರೆ.

ನೈತಿಕತೆಯ ಪೊಲೀಸರಿಗೆ ನ್ಯಾಯಾಂಗದೊಂದಿಗೆ ಯಾವುದೇ ಸಂಬಂಧವಿಲ್ಲ ಮತ್ತು ಅದನ್ನು ರದ್ದುಗೊಳಿಸಲಾಗಿದೆ ಎಂದು ಅಟಾರ್ನಿ ಜನರಲ್ ಮುಹಮ್ಮದ್ ಜಾಫರ್ ಮೊಂಟಝೆರಿ ಹೇಳಿರುವುದಾಗಿ ಐಎಸ್‌ಎನ್‌ಎ ಸುದ್ಧಿಸಂಸ್ಥೆ ಉಲ್ಲೇಖಿಸಿತ್ತು. ಆದರೆ ಈ ಹೇಳಿಕೆಯ ಬಗ್ಗೆ ಸಂದೇಹ ವ್ಯಕ್ತಪಡಿಸಿರುವ ಕಾರ್ಯಕರ್ತರು, ಇದು ಆಂತರಿಕ ಸಚಿವಾಲಯದಿಂದ ನಡೆಸಲ್ಪಡುವ ನೈತಿಕ ಪೊಲೀಸ್ ಕುರಿತು ಸ್ಪಷ್ಟವಾಗಿ ಸೂಚಿಸಿದ ಪ್ರಕಟಣೆಯ ಬದಲು, ಸಮ್ಮೇಳನದಲ್ಲಿ ಪ್ರಶ್ನೆಯೊಂದಕ್ಕೆ ಪೂರ್ವಸಿದ್ಧತೆ ಇಲ್ಲದೆ ನೀಡಿದ ಉತ್ತರದಂತಿದೆ ಎಂದು ಪ್ರತಿಪಾದಿಸಿದ್ದಾರೆ.

ನೈತಿಕ ಪೊಲೀಸ್ ಘಟಕ ರದ್ದಾದರೂ ಇರಾನ್‌ನ ಶಿರವಸ್ತ್ರ ನಿಯಮದಲ್ಲಿ ಯಾವುದೇ ಬದಲಾವಣೆಯಾಗದು. ಮಹಿಳೆಯರ ಉಡುಗೆ ಮತ್ತು ನಾಗರಿಕರ ಖಾಸಗಿ ಜೀವನವನ್ನು ನಿಯಂತ್ರಿಸುವ ಎಲ್ಲಾ ಕಾನೂನು ನಿರ್ಬಂಧಗಳನ್ನು ತೆಗೆದು ಹಾಕದ ಹೊರತು ಇದು ಕೇವಲ ಗಮನ ಬೇರೆಡೆ ಸೆಳೆಯುವ ಕ್ರಮವಾಗಲಿದೆ ಎಂದು ಅಮೆರಿಕ ಮೂಲದ ‘ಅಬ್ದುರಹ್ಮಾನ್ ಬೊರೋಮಂಡ್ ಸೆಂಟರ್ ರೈಟ್ಸ್ ಗ್ರೂಪ್’ನ ಸಹ ಸ್ಥಾಪಕಿ ರೋಯಾ ಬೊರೊಮಂಡ್ ಹೇಳಿದ್ದಾರೆ.

Similar News