ಕೇಂದ್ರ ಮತ್ತು ದಿಲ್ಲಿ ಸರ್ಕಾರದ ನಡುವೆ ಮುಂದುವರಿದಿರುವ ಬಿಕ್ಕಟ್ಟು ‘ದುರದೃಷ್ಟಕರ’: ಸುಪ್ರೀಂ ಕೋರ್ಟ್

Update: 2022-12-06 12:14 GMT

ಹೊಸದಿಲ್ಲಿ: “ಯಾವುದೇ ವಿಷಯದ ಕುರಿತು ಕೇಂದ್ರ ಮತ್ತು ದಿಲ್ಲಿ ಸರ್ಕಾರಗಳು ಸಹಮತಕ್ಕೆ ಸಿದ್ಧವಿಲ್ಲದಿರುವುದು ದುರದೃಷ್ಟಕರ” ಎಂದು ಹೇಳಿರುವ ಸುಪ್ರೀಂ ಕೋರ್ಟ್, ದಿಲ್ಲಿ ವಿದ್ಯುಚ್ಛಕ್ತಿ ಸುಧಾರಣೆ (ತಿದ್ದುಪಡಿ) ಮಸೂದೆ, 2022 ಕುರಿತಂತೆ ಅವುಗಳ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ವಿಚಾರಣೆ ನಡೆಸಲು ನಿರಾಕರಿಸಿದೆ. ಈ ಕುರಿತು ದಿಲ್ಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸುವಂತೆ ಆಮ್ ಆದ್ಮಿ ಪಕ್ಷ ನೇತೃತ್ವದ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ ಎಂದು timesofindia ವರದಿ ಮಾಡಿದೆ. 

ದಿಲ್ಲಿ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಹಾಗೂ ಸದಸ್ಯರ ನಿವೃತ್ತಿ ಅವಧಿಯ ಏರಿಕೆಗೆ ಅವಕಾಶ ಒದಗಿಸಿದ್ದ ದೆಹಲಿ ವಿದ್ಯುಚ್ಛಕ್ತಿ (ತಿದ್ದುಪಡಿ) ಮಸೂದೆ,  2022ಕ್ಕೆ ಸಹಿ ಹಾಕಲು ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷ ನೇತೃತ್ವದ ದಿಲ್ಲಿ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

“ದೆಹಲಿ ಸರ್ಕಾರ ಹಾಗೂ ಕೇಂದ್ರದ ನಡುವಿನ ತಿಕ್ಕಾಟ ಮುಂದುವರಿದಿರುವುದು ದುರದೃಷ್ಟಕರವಾಗಿದ್ದರೂ, ಈ ಕುರಿತು ಹೈಕೋರ್ಟ್ ನಲ್ಲಿ ನಡೆಯಲಿರುವ ವಿಚಾರಣೆಯ ನಡುವೆ ತಾನು ಮಧ್ಯಪ್ರವೇಶಿಸುವುದಿಲ್ಲ” ಎಂದು ನ್ಯಾ. ಸಂಜಯ್ ಕಿಶನ್ ಕೌಲ್ ಹಾಗೂ ನ್ಯಾ. ಎ.ಎಸ್. ಓಕಾ ಅವರನ್ನೊಳಗೊಂಡಿದ್ದ ಪೀಠವು ಸ್ಪಷ್ಟಪಡಿಸಿದೆ. 

ಆಪ್ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಮಸೂದೆಯು ಲೆಫ್ಟಿನೆಂಟ್ ಗವರ್ನರ್ ಬಳಿ ಕಳೆದ ಏಳು ತಿಂಗಳಿನಿಂದ ಬಾಕಿ ಉಳಿದಿದೆ. ಇದರಿಂದ ಆಯೋಗದ ಕೆಲಸ ಕುಂಠಿತಗೊಂಡಿದೆ ಎಂದು ವಾದಿಸಿದರು. 

Similar News