ಭಾರತ ನಮ್ಮ ಸಂಕಷ್ಟದಿಂದ ಲಾಭ ಪಡೆಯುತ್ತಿದೆ ಎಂದಾದರೆ....: ಉಕ್ರೇನ್‌ ವಿದೇಶ ಸಚಿವ ಹೇಳಿದ್ದೇನು?

ಭಾರತ ರಶ್ಯದಿಂದ ಅಗ್ಗದ ದರದಲ್ಲಿ ತೈಲ ಆಮದು ಮಾಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಡಿಮೈಟ್ರೊ ಕುಲೇಬಾ

Update: 2022-12-06 14:28 GMT

ಹೊಸದಿಲ್ಲಿ: ರಶ್ಯದಿಂದ ಅಗ್ಗದ ದರದಲ್ಲಿ ತೈಲ ಆಮದು ಮಾಡುತ್ತಿರುವ ಭಾರತದ (India) ವಿರುದ್ಧ ಉಕ್ರೇನ್‌ ವಿದೇಶ ಸಚಿವ (Ukraine Minister) ಡಿಮೈಟ್ರೊ ಕುಲೇಬಾ ಕಿಡಿಕಾರಿದ್ದಾರಲ್ಲದೆ ಇದು ʻʻನೈತಿಕವಾಗಿ ಅನುಚಿತʼʼವಾಗಿದೆ ಎಂದಿದ್ದಾರೆ.

"ಉಕ್ರೇನಿಯನ್ನರು ರಷ್ಯಾದ ಆಕ್ರಮಣದಿಂದ ಕಷ್ಟಪಡುತ್ತಿದ್ದಾರೆ ಮತ್ತು ಪ್ರತಿ ದಿನ ಸಾಯುತ್ತಿದ್ದಾರೆಂಬ ಕಾರಣದಿಂದ ರಷ್ಯಾದಿಂದ ಅಗ್ಗದ ದರದಲ್ಲಿ ಭಾರತಕ್ಕೆ ತೈಲು ಖರೀದಿಸುವುದು ಸಾಧ್ಯವಾಗಿದೆ. ನೀವು ನಮ್ಮ ಸಂಕಷ್ಟದಿಂದ ಲಾಭ ಪಡೆಯುತ್ತಿದ್ದೀರಾದರೆ, ನಿಮ್ಮಿಂದ ನಮಗೆ ಬಹಳಷ್ಟು ಸಹಾಯ ದೊರೆತರೆ ಉತ್ತಮ,ʼʼ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಮುಂದಿನ ಹತ್ತು ದೇಶಗಳು ಒಟ್ಟಾಗಿ ಖರೀದಿಸುವುದಕ್ಕಿಂತ ಹೆಚ್ಚು ಪಳೆಯುಳಿಕೆ ಇಂಧನವನ್ನು ಯುರೋಪಿಯನ್‌ ಯೂನಿಯನ್‌ ಈ ವರ್ಷದ ಫೆಬ್ರವರಿಯಿಂದ ನವೆಂಬರ್‌ ನಡುವೆ ಖರೀದಿಸಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಲೇಬ ಹೇಳಿದರು.

"ಯುರೋಪಿಯನ್‌ ಯೂನಿಯನ್‌ನತ್ತ ಬೆರಳು ತೋರಿಸಿ, ಓಹ್‌, ಅವರು ಕೂಡ ಅದೇ ರೀತಿ ಮಾಡುತ್ತಿದ್ದಾರೆ ಎಂದು ಹೇಳಿದರೆ ಸಾಲದು,ʼʼ ಎಂದು ಉಕ್ರೇನ್‌ ಸಚಿವರು ಹೇಳಿದರು.

"ಭಾರತ ಮತ್ತದರ ಪ್ರಧಾನಿ  ತಮ್ಮ ದನಿಯಿಂದ ಬದಲಾವಣೆ ತರಬಹುದು,ʼʼ ಎಂದು ಹೇಳುವ ಮೂಲಕ ಯುದ್ಧವನ್ನು ಅಂತ್ಯಗೊಳಿಸುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಬಹುದೆಂಬ ಸುಳಿವನ್ನು ಅವರು ನೀಡಿದರು.

"ಭಾರತವು ಇರುವುದನ್ನು ಇದ್ದ ಹಾಗೆ,ಅಂದರೆ ಉಕ್ರೇನ್‌ನಲ್ಲಿ ನಡೆಯುತ್ತಿರುವುದು ಯುದ್ಧವಲ್ಲ, ಬದಲು ಉಕ್ರೇನ್‌ ವಿರುದ್ಧ ರಷ್ಯಾದ ಆಕ್ರಮಣʼ ಎಂದು ಹೇಳುವ ದಿನಕ್ಕಾಗಿ ನಾವು ಕಾಯುತ್ತಿದ್ದೇವೆ," ಎಂದು ಅವರು ಹೇಳಿದರು.

Similar News