ಪ್ರೊ. ಸಾಯಿಬಾಬಾ ಖುಲಾಸೆ ರದ್ದು ಆದೇಶ ಮರುಪರಿಶೀಲಿಸಿ: 19 ಜಾಗತಿಕ ಮಾನವ ಹಕ್ಕುಗಳ ಸಂಘಟನೆಗಳಿಂದ ಸಿಜೆಐಗೆ ಪತ್ರ

Update: 2022-12-06 15:09 GMT

ಹೊಸದಿಲ್ಲಿ: ಮಾವೋವಾದಿಗಳ ಜೊತೆ ನಂಟು ಹೊಂದಿದ್ದಾರೆಂಬ ಆರೋಪ ಹೊತ್ತಿರುವ ಪ್ರೊಫೆಸರ್‌ ಜಿ. ಎನ್‌. ಸಾಯಿಬಾಬಾ (GN Saibaba) ಅವರನ್ನು ಖುಲಾಸೆಗೊಳಿಸಿ ಬಾಂಬೆ ಹೈಕೋರ್ಟ್‌ ಹೊರಡಿಸಿದ ಆದೇಶವನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್‌ ತೀರ್ಮಾನವನ್ನು ಮರುಪರಿಶೀಲಿಸಬೇಕೆಂದು ಕೋರಿ  19 ಜಾಗತಿಕ ಮಾನವ ಹಕ್ಕು ಸಂಘಟನೆಗಳು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ (DY Chandrachud) ಅವರಿಗೆ ಪತ್ರ ಬರೆದಿವೆ.

ʻʻಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಮಾರ್ಗಸೂಚಿಗಳಿಂದ ರಕ್ಷಿಸಲ್ಪಟ್ಟಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಹಯೋಗದ ಸ್ವಾತಂತ್ರ್ಯದ ತಮ್ಮ ಹಕ್ಕುಗಳನ್ನು ಅಹಿಂಸಾತ್ಮಕವಾಗಿ ಚಲಾಯಿಸಿದ್ದಕ್ಕಾಗಿ ಪ್ರೊಫೆಸರ್‌ ಸಾಯಿಬಾಬಾ ಅವರನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗಿದೆ,ʼʼ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಸಾಯಿಬಾಬಾ ಅವರ ಕುಸಿಯುತ್ತಿರುವ ಆರೋಗ್ಯ ಸ್ಥಿತಿಯನ್ನು ಪರಿಗಣಿಸಬೇಕು ಎಂದೂ ಸಂಘಟನೆಗಳು ಮುಖ್ಯ ನ್ಯಾಯಮೂರ್ತಿಗಳನ್ನು ಆಗ್ರಹಿಸಿದೆ. ಐವತ್ತೈದು ವರ್ಷದ ಸಾಯಿಬಾಬಾ ಅವರು ಗಾಲಿಕುರ್ಚಿ ಬಳಸುತ್ತಿದ್ದಾರಲ್ಲದೆ ಅವರು ಎದುರಿಸುತ್ತಿರುವ  ಹಲವಾರು ಆರೋಗ್ಯ ಸಮಸ್ಯೆಗಳಿಂದ ಅವರು ತಮ್ಮ ದೇಹದ ಶೇ 90 ರಷ್ಟು ಭಾಗದ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ.

ಅಕ್ಟೋಬರ್‌ 14 ರಂದು ಬಾಂಬೆ ಹೈಕೋರ್ಟಿನ ನಾಗ್ಪುರ ಪೀಠವು  2017 ರಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಮಾಜಿ ದಿಲ್ಲಿ ವಿವಿ ಪ್ರೊಫೆಸರ್‌ ಸಾಯಿಬಾಬಾ ಅವರನ್ನು ದೋಷಮುಕ್ತಗೊಳಿಸಿತ್ತಲ್ಲದೆ  ಕೇಂದ್ರದ ಅನುಮತಿಯಿಲ್ಲದೆ ಗಡ್ಚಿರೋಲಿಯಲ್ಲಿರುವ ಸೆಷನ್ಸ್‌ ನ್ಯಾಯಾಲಯ ಅವರ ವಿರುದ್ಧ ಯುಎಪಿಎ ಹೇರಿತ್ತು ಎಂದು ತಿಳಿಸಿತ್ತು.

ಆದರೆ ಮಹಾರಾಷ್ಟ್ರ ಸರ್ಕಾರ ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಕದ ತಟ್ಟಿದ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ ಬಾಂಬೆ ಹೈಕೋರ್ಟಿನ ಆದೇಶವನ್ನು ವಜಾಗೊಳಿಸಿತ್ತು.

ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದ ಪತ್ರಕ್ಕೆ ಸಹಿ ಹಾಕಿದ ಸಂಘಟನೆಗಳಲ್ಲಿ ಇಂಟರ್‌ನ್ಯಾಷನಲ್ ಸಾಲಿಡಾರಿಟಿ, ಫ್ರೀಡಂ ನೌ, ನಾರ್ವೇಜಿಯನ್ ವಿದ್ಯಾರ್ಥಿಗಳ ಮತ್ತು ಶಿಕ್ಷಣ ತಜ್ಞರ ಅಂತಾರಾಷ್ಟ್ರೀಯ ಸಹಾಯ ನಿಧಿ, ದಕ್ಷಿಣ ಇಲಿನಾಯ್ಸ್ ಡೆಮಾಕ್ರಟಿಕ್ ಸೋಷಿಯಲಿಸ್ಟ್ಸ್ ಆಫ್ ಅಮೆರಿಕಾ (ಯುಎಸ್ಎ), ಹಿಂದೂಸ್‌ ಫಾರ್ ಹ್ಯೂಮನ್ ರೈಟ್ಸ್ (ಯುಎಸ್ಎ), ಇಂಡಿಯಾ ಲೇಬರ್ ಸಾಲಿಡಾರಿಟಿ (ಯುಕೆ) ಸೇರಿವೆ. ), ಕೋಯೆಲಿಶನ್‌ ಫಾರ್‌ ಜಸ್ಟಿಸ್‌ ಇನ್‌ ಇಂಡಿಯಾ  (ಯುಕೆ), ಇಂಡಿಯನ್ ವರ್ಕರ್ಸ್ ಅಸೋಸಿಯೇಷನ್ (ಯುಕೆ), ಸೌತ್ ಏಷ್ಯಾ ಸಾಲಿಡಾರಿಟಿ ಗ್ರೂಪ್ (ಯುಕೆ), ಟರ್ಬೈನ್  ಬಾಗ್, ಲಂಡನ್, ಸ್ಟಿಚ್ಟಿಂಗ್  ದಿ ಲಂಡನ್ ಸ್ಟೋರಿ, ಆಂಟಿ-ಕ್ಯಾಸ್ಟ್ ಡಿಸ್ಕ್ರಿಮಿನೇಷನ್ ಅಲೈಯನ್ಸ್ (ಯುಕೆ), ದಿ ಹ್ಯುಮಾನಿಸಂ ಪ್ರಾಜೆಕ್ಟ್ (ಆಸ್ಟ್ರೇಲಿಯಾ), ಇಂಡಿಯಾ ಜಸ್ಟಿಸ್ ಪ್ರಾಜೆಕ್ಟ್ (ಜರ್ಮನಿ), ಫ್ರೀ ಸಾಯಿಬಾಬಾ ಒಕ್ಕೂಟ (US), ಭಾತದಲ್ಲಿ ಫ್ಯಾಸಿಸಂ ವಿರುದ್ಧ ಒಕ್ಕೂಟ, ಜೆರಿಕೊ ಮೂವ್‌ಮೆಂಟ್ ಬೋಸ್ಟನ್ ಮತ್ತು ಇಂಡಿಯಾ ಸಿವಿಲ್ ವಾಚ್ ಇಂಟರ್‌ನ್ಯಾಶನಲ್ ಇವುಗಳು ಸೇರಿವೆ.

Similar News