ಜನರು ಅನುಭವಿಸಿದ ಸಂಕಷ್ಟವನ್ನು ನೋಟು ನಿಷೇಧದ ತಪ್ಪೆನ್ನುವಂತಿಲ್ಲ: ಸುಪ್ರೀಂ ಕೋರ್ಟ್ ನಲ್ಲಿ ಕೇಂದ್ರ ಸರಕಾರ ಹೇಳಿಕೆ

Update: 2022-12-06 14:48 GMT

ಹೊಸದಿಲ್ಲಿ: ನೋಟು ನಿಷೇಧದಿಂದಾಗಿ ದೇಶಾದ್ಯಂತ ಜನರು ಅನುಭವಿಸಿದ ಸಂಕಷ್ಟವನ್ನು ಆ ನಿರ್ಧಾರದ ತಪ್ಪೆಂದು ಹೇಳಲು ಸಾಧ್ಯವಿಲ್ಲ ಎಂದು ಅಡ್ವೊಕೇಟ್ ಜನರಲ್ ಆರ್. ವೆಂಕಟರಮಣಿ (R. Venkataramani)ಸೋಮವಾರ ಸುಪ್ರೀಂ ಕೋರ್ಟ್ (Supreme Court)ನಲ್ಲಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ (Narendra Modi)2016 ನವೆಂಬರ್ 8ರಂದು ರೂ. 500 ಮತ್ತು ರೂ. 1000 ಮುಖಬೆಲೆಯ ಕರೆನ್ಸಿ ನೋಟ್ ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿದ್ದರು. ‘‘ಭ್ರಷ್ಟಾಚಾರ, ಕಪ್ಪುಹಣ ಮತ್ತು ಭಯೋತ್ಪಾದನೆ’’ಯನ್ನು ತಡೆಯುವುದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಅಂದು ಹೇಳಿದ್ದರು. ತಮ್ಮ ಹಳೆಯ ನೋಟ್ ಗಳನ್ನು ಹೊಸ ನೋಟುಗಳಿಗೆ ಬದಲಾಯಿಸುವುದಕ್ಕಾಗಿ ಉದ್ದನೆಯ ಸಾಲುಗಳಲ್ಲಿ ನಿಂತಿದ್ದಾಗ ವೃದ್ಧರು ಸೇರಿದಂತೆ ಹಲವಾರು ಮಂದಿ ಮೃತಪಟ್ಟಿದ್ದರು. ಕೋಟ್ಯಂತರ ಕುಟುಂಬಗಳು ಹಣವಿಲ್ಲದೆ ಸುದೀರ್ಘ ಕಾಲ ಪರದಾಡಿದ್ದವು. ಹಲವಾರು ಮಂದಿ ತಮ್ಮ ಹಳೆಯ ನೋಟ್ ಗಳನ್ನು ಹೊಸ ನೋಟ್ ಗಳಿಗೆ ವಿನಿಯಮ ಮಾಡಲು ಸಾಧ್ಯವಾಗದೆ ಆತ್ಮಹತ್ಯೆಗೂ ಶರಣಾಗಿದ್ದರು.

‘‘ನಿರ್ದಿಷ್ಟ ಬ್ಯಾಂಕ್ ನೋಟ್ ಗಳ (ಜವಾಬ್ದಾರಿ ನಿಲುಗಡೆ) ಕಾಯ್ದೆ, 2017 ಮತ್ತು ಅದರ ಅಧಿಸೂಚನೆಯನ್ನು ಜಾರಿಗೆ ತರುವಾಗ ಸಂಭವಿಸಿರಬಹುದಾದ ಸಂಕಷ್ಟಗಳನ್ನು ನಿರ್ಧಾರದ ದೋಷ ಎಂದು ಹೇಳುವಂತಿಲ್ಲ’’ ಎಂದು ಐವರು ನ್ಯಾಯಾಧೀಶರ ಸಂವಿಧಾನ ಪೀಠದ ಮುಂದೆ ವೆಂಕಟರಮಣಿ ಹೇಳಿದರು.

ನೋಟ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ 58 ಅರ್ಜಿಗಳ ವಿಚಾರಣೆಯನ್ನು ಈ ಪೀಠ ನಡೆಸುತ್ತಿದೆ.

ಕರೆನ್ಸಿ ನೋಟ್ ಗಳನ್ನು ನಿಷೇಧಿಸುವ ನಿರ್ಧಾರವು ಆಸ್ತಿಯ ಹಕ್ಕು, ಸಮಾನತೆಯ ಹಕ್ಕು, ವ್ಯಾಪಾರ, ಉದ್ದಿಮೆ ಅಥವಾ ಉದ್ಯೋಗ ನಡೆಸುವ ಹಕ್ಕು, ಜೀವಿಸುವ ಹಕ್ಕು ಮತ್ತು ಜೀವನೋಪಾಯ ಸಂಪಾದಿಸುವ ಹಕ್ಕು ಸೇರಿದಂತೆ ಹಲವಾರು ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿದೆ ಎಂಬುದಾಗಿ ಅರ್ಜಿದಾರರು ದೂರಿದ್ದಾರೆ.

ದೇಶಕ್ಕೆ ಸವಾಲಾಗಿರುವ ನಕಲಿ ಕರೆನ್ಸಿ, ಕಪ್ಪುಹಣ ಮತ್ತು ಭಯೋತ್ಪಾದನೆಗೆ ನಿಧಿ ಪೂರೈಕೆಯಂಥ ಸಮಸ್ಯೆಗಳನ್ನು ಸರಕಾರ ನಿಭಾಯಿಸುವಾಗ, ಜನರಿಗೆ ಕಷ್ಟವಾಯಿತು ಎನ್ನುವುದನ್ನು ಮಾತ್ರ ಪರಿಗಣಿಸುವುದು ಸೂಕ್ತವಲ್ಲ ಎಂದು ಅಟಾರ್ನಿ ಜನರಲ್ ಸೋಮವಾರ ಹೇಳಿದರು.

Similar News