ದೇಣಿಗೆ ಒಳ್ಳೆಯದು, ಆದರೆ ಮತಾಂತರಕ್ಕೆ ಅದನ್ನು ಬಳಸಬಾರದು: ಸುಪ್ರೀಂ ಕೋರ್ಟ್

Update: 2022-12-06 14:57 GMT

ಹೊಸದಿಲ್ಲಿ, ಡಿ. 6: ಪರೋಪಕಾರಕ್ಕಾಗಿ ನೀಡುವ ದೇಣಿಗೆ ಒಳ್ಳೆಯದೆ, ಆದರೆ ಅದನ್ನು ಧಾರ್ಮಿಕ ಮತಾಂತರದ ಉದ್ದೇಶಕ್ಕೆ ಬಳಸಬಾರದು ಎಂದು ಸುಪ್ರೀಂ ಕೋರ್ಟ್(Supreme Court) ಸೋಮವಾರ ಹೇಳಿದೆ.

ಮಾಟಮಂತ್ರ, ಮೂಢನಂಬಿಕೆ ಮತ್ತು ಬಲವಂತದ ಧಾರ್ಮಿಕ ಮತಾಂತರಗಳನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನಿರ್ದೇಶನಗಳನ್ನು ನೀಡುವಂತೆ ಕೋರಿ ಬಿಜೆಪಿ ನಾಯಕ ಹಾಗೂ ವಕೀಲ ಅಶ್ವಿನಿ ಕುಮಾರ್ (Ashwini Kumar)ಉಪಾಧ್ಯಾಯ ಸಲ್ಲಿಸಿದ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಾಧೀಶ ಎಮ್.ಆರ್. ಶಾ (M.R. Shah)ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ‘ಲೈವ್ ಲಾ’ ('Live Law')ವರದಿ ಮಾಡಿದೆ. ನ್ಯಾಯಮೂರ್ತಿಗಳಾದ ಶಾ ಮತ್ತು ಸಿ.ಟಿ. ರವಿಕುಮಾರ್ (CT Ravikumar)ಅವರನ್ನೊಳಗೊಂಡ ನ್ಯಾಯಪೀಠವೊಂದು ಪ್ರಕರಣದ ವಿಚಾರಣೆ ನಡೆಸುತ್ತಿದೆ.

ಜನರನ್ನು ಇತರ ಧರ್ಮಗಳಿಗೆ ಮತಾಂತರಗೊಳಿಸುವುದಕ್ಕಾಗಿ ಔಷಧಿಗಳು ಮತ್ತು ಆಹಾರ ಧಾನ್ಯಗಳ ಆಮಿಷ ಒಡ್ಡುವುದು ಗಂಭೀರ ವಿಷಯವಾಗಿದೆ ಎಂದು ಸೋಮವಾರ ನ್ಯಾಯಾಲಯ ಹೇಳಿತು.

‘‘ಯಾರಿಗಾದರೂ ಸಹಾಯ ಮಾಡಬೇಕೆಂದು ನಿಮಗೆ ಅನಿಸಿದರೆ ಸಹಾಯ ಮಾಡಿ, ಆದರೆ, ಮತಾಂತರಕ್ಕಾಗಿ ಹಾಗೆ ಮಾಡುವಂತಿಲ್ಲ’’ ಎಂದು ಶಾ ಹೇಳಿದರು. ‘‘ಆಮಿಷ ಅತ್ಯಂತ ಅಪಾಯಕಾರಿ. ಅದು ತುಂಬಾ ಗಂಭೀರ ವಿಷಯ ಮತ್ತು ಅದು ನಮ್ಮ ಸಂವಿಧಾನದ ಮೂಲ ಸ್ವರೂಪಕ್ಕೆ ವಿರುದ್ಧವೂ ಆಗಿದೆ. ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರೂ ಭಾರತದ ಸಂಸ್ಕೃತಿಯ ಪ್ರಕಾರ ನಡೆದುಕೊಳ್ಳಬೇಕು’’ ಎಂದು ಅವರು ಅಭಿಪ್ರಾಯಪಟ್ಟರು.

ಧಾರ್ಮಿಕ ಮತಾಂತರದ ಬಗ್ಗೆ ಕೇಂದ್ರ ಸರಕಾರವು ರಾಜ್ಯಗಳಿಮದ ಅಂಕಿಅಂಶಗಳನ್ನು ಸಂಗ್ರಹಿಸುತ್ತಿದೆ ಎಂದು ನ್ಯಾಯಾಲಯದಲ್ಲಿ ಸರಕಾರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾತ್ ಮೆಹ್ತಾ (Tushat Mehta)ಹೇಳಿದರು. ‘‘ಧಾನ್ಯಗಳು ಮತ್ತು ಔಷಧಿಗಳಿಗಾಗಿ ಮತಾಂತರ ನಡೆಸಲಾಗಿದೆಯೇ ಅಥವಾ ಅವುಗಳು ನಿಜವಾದ ಧಾರ್ಮಿಕ ಹೃದಯ ಪರಿವರ್ತನೆಯೇ’’ ಎನ್ನುವುದನ್ನು ನಿರ್ಧರಿಸುವುದಕ್ಕಾಗಿ ಸಮಿತಿಗಳನ್ನು ರಚಿಸಲು ಅವಕಾಶ ನೀಡುವ ಕಾನೂನುಗಳನ್ನು ಹಲವು ರಾಜ್ಯಗಳು ಮಾಡಿವೆ ಎಂದು ಮೆಹ್ತಾ ಹೇಳಿದರು.

Similar News