ಭಾರತದ ಬೆಳವಣಿಗೆ ದರ ಮುನ್ನೋಟವನ್ನು 6.9%ಕ್ಕೆ ಹೆಚ್ಚಿಸಿದ ವಿಶ್ವಬ್ಯಾಂಕ್

Update: 2022-12-06 14:56 GMT

ಹೊಸದಿಲ್ಲಿ, ಡಿ. 6: 2022-23ನೇ ಹಣಕಾಸು ವರ್ಷದ, ಅಂದರೆ ಪ್ರಸಕ್ತ ವರ್ಷದ ಭಾರತದ ಬೆಳವಣಿಗೆ ಮುನ್ನೋ ಟವನ್ನು ವಿಶ್ವಬ್ಯಾಂಕ್ (World Bank)ಮಂಗಳವಾರ ಪರಿಷ್ಕರಿಸಿದ್ದು, 6.5%ದಿಂದ 6.9%ಕ್ಕೆ ಏರಿಸಿದೆ.

ಭಾರತದ ಬೆಳವಣಿಗೆ ಮುನ್ನೋಟವು ಇತರ ಹೆಚ್ಚಿನ ಅಭಿವೃದ್ಧಿಶೀಲ ದೇಶಗಳಿಗೆ ಹೋಲಿಸಿದರೆ ಉತ್ತಮ ಸ್ಥಿತಿಯಲ್ಲಿದೆ ಎಂದು ತನ್ನ ನೂತನ ‘ಇಂಡಿಯಾ ಡೆವೆಲಪ್ಮೆಂಟ್ ಅಪ್ಡೇಟ್’ ('India Development Update')ವರದಿಯಲ್ಲಿ ವಿಶ್ವಬ್ಯಾಂಕ್ ತಿಳಿಸಿದೆ.

ಎರಡನೇ ಹಣಕಾಸು ತ್ರೈಮಾಸಿಕ (ಜುಲೈ-ಸೆಪ್ಟಂಬರ್)ದಲ್ಲೂ ಭಾರತದ 6.3% ಬೆಳವಣಿಗೆಯು ಉತ್ತಮ ಫಲಿತಾಂಶವಾಗಿತ್ತು ಎಂದು ಜಾಗತಿಕ ಬ್ಯಾಂಕ್ ಬಣ್ಣಿಸಿದೆ.

ಭಾರತದ ಎರಡನೇ ತ್ರೈಮಾಸಿಕದ ಒಟ್ಟು ದೇಶಿ ಉತ್ಪನ್ನ (ಜಿಡಿಪಿ) ಬೆಳವಣಿಗೆ ದರವು ಕಳೆದ ಬಾರಿಯ ಇದೇ ಅವಧಿಯ ಒಟ್ಟು ದೇಶಿ ಉತ್ಪನ್ನ ಬೆಳವಣಿಗೆ ದರ 8.4%ಕ್ಕಿಂತ ಕಡಿಮೆಯಾಗಿತ್ತು ಎನ್ನುವುದನ್ನು ಕಳೆದ ವಾರ ಬಿಡುಗಡೆಗೊಂಡ ಜಿಡಿಪಿ ಅಂಕಿಅಂಶಗಳು ತಿಳಿಸಿವೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಎಪ್ರಿಲ್-ಜೂನ್) ಭಾರತದ ಆರ್ಥಿಕತೆಯು 13.5%ದಷ್ಟು ಬೆಳೆದಿತ್ತು ಎಂದು ಅಂಕಿಅಂಶಗಳು ಹೇಳಿದ್ದವು.

ಜಾಗತಿಕ ಆರ್ಥಿಕತೆಯು ಎದುರಿಸುತ್ತಿರುವ ಸವಾಲುಗಳ ಹೊರತಾಗಿಯೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಗತ್ತಿನ ಪ್ರಮುಖ ದೇಶಗಳ ಪೈಕಿ ಭಾರತವೂ ಒಂದಾಗಿದೆ ಎಂದು ವಿಶ್ವಬ್ಯಾಂಕ್ ಅಭಿಪ್ರಾಯಪಟ್ಟಿದೆ. ಇದಕ್ಕೆ ಪ್ರಬಲ ಆಂತರಿಕ ಬೇಡಿಕೆಯೇ ಕಾರಣ ಎಂದು ಅದು ತಿಳಿಸಿದೆ.

‘‘ಹದಗೆಡುತ್ತಿರುವ ಬಾಹ್ಯ ಪರಿಸ್ಥಿತಿಯ ಹೊರತಾಗಿಯೂ ಭಾರತದ ಆರ್ಥಿಕತೆಯು ಅಸಾಧಾರಣವಾಗಿ ಚೇತರಿಸುತ್ತಿದೆ. ಆರ್ಥಿಕತೆಯಲ್ಲಿ ಅನುಸರಿಸಲಾಗುತ್ತಿರುವ ಪ್ರಬಲ ಹಾಗೂ ಪ್ರಾಥಮಿಕ ನಿಯಮಗಳು ಭಾರತೀಯ ಆರ್ಥಿಕತೆಯನ್ನು ಉತ್ತಮ ಸ್ಥಿತಿಯಲ್ಲಿರಿಸಿವೆ’’ ಎಂದು ವಿಶ್ವಬ್ಯಾಂಕ್ನ ಭಾರತ ನಿರ್ದೇಶಕ ಆಗಸ್ಟ್ ಟನೊ ಕೊವಾಮೆ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Similar News