ಫಿಫಾ ವಿಶ್ವಕಪ್: ಐತಿಹಾಸಿಕ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ ಮೊರೊಕ್ಕೊ

ಪೆನಾಲ್ಟಿ ಶೂಟೌಟ್ ನಲ್ಲಿ ಸ್ಪೇನ್ ಔಟ್

Update: 2022-12-06 17:54 GMT

ದೋಹಾ, ಡಿ.6: ಜಿದ್ದಾಜಿದ್ದಿನ ಹೋರಾಟದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ 2010ರ ವಿಶ್ವಕಪ್ ಚಾಂಪಿಯನ್ ಸ್ಪೇನ್ ತಂಡವನ್ನು 3-0 ಅಂತರದಿಂದ ಮಣಿಸಿದ ಮೊರೊಕ್ಕೊ ತಂಡ ಫಿಫಾ ವಿಶ್ವಕಪ್‌ನ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ.

ಗ್ರೂಪ್ ಎಫ್‌ನಲ್ಲಿ ಅಜೇಯವಾಗುಳಿದಿದ್ದ ಮೊರೊಕ್ಕೊ ವಿಶ್ವಕಪ್‌ನಲ್ಲಿ ಮೊದಲ ಬಾರಿ ಕ್ವಾರ್ಟರ್ ಫೈನಲ್ ತಲುಪಿದೆ. ಮೊರೊಕ್ಕೊ ತಂಡ ಡಿಸೆಂಬರ್ 10ರಂದು ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ಪೋರ್ಚುಗಲ್ ಅಥವಾ ಸ್ವಿಟ್ಸರ್‌ಲ್ಯಾಂಡ್ ತಂಡವನ್ನು ಎದುರಿಸಲಿದೆ.

ಎಜುಕೇಶನ್ ಸಿಟಿ ಸ್ಟೇಡಿಯಮ್‌ನಲ್ಲಿ ಮಂಗಳವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್‌ನ ನಿಗದಿತ 90 ನಿಮಿಷಗಳ ಆಟದಲ್ಲಿ ಮೊರೊಕ್ಕೊ ಹಾಗೂ ಸ್ಪೇನ್ ತಂಡಗಳು ಗೋಲು ಗಳಿಸುವಲ್ಲಿ ವಿಫಲವಾದವು. ಹೆಚ್ಚುವರಿ 30 ನಿಮಿಷಗಳ ಆಟದಲ್ಲೂ ಉಭಯ ತಂಡಗಳಿಂದ ಗೋಲು ಬರಲಿಲ್ಲ. ಆಗ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಮೊದಲಾರ್ಧದ ಅಂತ್ಯಕ್ಕೆ ಉಭಯ ತಂಡಗಳಿಂದ ಗೋಲು ದಾಖಲಾಗಲಿಲ್ಲ. ಉಭಯ ತಂಡಗಳು ಸ್ಪಷ್ಟ ಗೋಲು ಅವಕಾಶ ಸೃಷ್ಟಿಸಿಕೊಳ್ಳಲು ಪರದಾಡಿದವು.

ಸ್ಪೇನ್ ಮೊದಲ 45 ನಿಮಿಷಗಳ ಆಟದಲ್ಲಿ ಹೆಚ್ಚಿನ ಹಿಡಿತ ಸಾಧಿಸಿತು. ಮೊರೊಕ್ಕೊ ಪ್ರತಿ ಹೋರಾಟದ ಅವಕಾಶಕ್ಕಾಗಿ ಕಾದು ಕುಳಿತಿತು.

ಮೊದಲಾರ್ಧದ ಅಂತ್ಯದಲ್ಲಿ ಮೊರೊಕ್ಕೊಗೆ ಗೋಲು ಗಳಿಸುವ ಉತ್ತಮ ಅವಕಾಶ ಪಡೆದಿತ್ತು. ನಯೆಫ್ ಅಗುರ್ಡ್ ಅವರ ಹೆಡರ್ ಮೂಲಕ ಬಾರಿಸಿದ ಚೆಂಡು ಗೋಲುಪೆಟ್ಟಿಗೆಯ ಬಳಿಯಿಂದ ಹಾದುಹೋಯಿತು.

Similar News