ಹಾಡಹಗಲೇ ಜನನಿಬಿಡ ಮಾರುಕಟ್ಟೆಯಲ್ಲಿ ಮಹಿಳೆಯ ಅಂಗಾಂಗ ಕತ್ತರಿಸಿ ಹತ್ಯೆ

ಆರೋಪಿಗಳ ಬಂಧನ

Update: 2022-12-07 04:09 GMT

ಪಾಟ್ನಾ: ಬಿಹಾರದ ಭಾಗಲ್ಪುರದದಲ್ಲಿ ಹಾಡಹಗಲೇ ಜನನಿಬಿಡ ಮಾರುಕಟ್ಟೆಯಲ್ಲಿ ಮಹಿಳೆಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಮಹಿಳೆಯ ಕೈ, ಕಿವಿಗಳನ್ನು ಕತ್ತರಿಸಿ ಭಯಾನಕವಾಗಿ ಹತ್ಯೆ ಮಾಡಿದ ಪೈಶಾಚಿಕ ದೃಶ್ಯ, ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ.

ಹತ್ಯೆಗೀಡಾದ ನೀಲಂ ಎಂಬ ಮಹಿಳೆ ಶಕೀಲ್ ಮಿಯಾನ್ ಎಂಬ ಲೇವಾದೇವಿದಾರನ ಕೈಯಿಂದ ಮಗಳ ಮದುವೆಗಾಗಿ ಸಾಲ ಪಡೆದಿದ್ದರು ಎನ್ನಲಾಗಿದ್ದು, ಇದನ್ನು ಮರುಪಾವತಿ ಮಾಡಲು ಮಹಿಳೆ ವಿಫಲವಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಈ ಹತ್ಯೆಗೆ ಯಾವುದೇ ಕೋಮು ಹಿನ್ನಲೆ ಕಾರಣವಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಆಯೋಜಿಸಲಾಗಿದೆ.

ಶನಿವಾರ ಶಕೀಲ್ ಮಿಯಾನ್ ಹಾಗೂ ಜುದ್ದೀನ್ ಮಿಯಾನ್ ಎಂಬವರು ಮಹಿಳೆಯ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು. ತಲೆ ಹಾಗೂ ಬೆನ್ನಿಗೂ ತೀವ್ರ ಇರಿತದ ಗಾಯಗಳಾಗಿದ್ದವು. ಆದಾಗ್ಯೂ ಯಾರೂ ಆಕೆಯ ನೆರವಿಗೆ ಬರಲಿಲ್ಲ. ಪ್ರಜ್ಞೆ ಕಳೆದುಕೊಳ್ಳುವ ಮುನ್ನ ಮಹಿಳೆ ದಾಳಿಕೋರರ ಹೆಸರು ಬಹಿರಂಗಪಡಿಸಿದ್ದು, ಇದನ್ನು ಪ್ರತ್ಯಕ್ಷದರ್ಶಿಗಳು ಮೊಬೈಲ್ ಫೋನ್‍ನಲ್ಲಿ ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ವೇಳೆ ಮಹಿಳೆ ಮೃತಪಟ್ಟರು ಎಂದು ವಿವರ ನೀಡಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದೆ. ಈ ಬಗ್ಗೆ ndtv.com ವರದಿ ಮಾಡಿದೆ.

Similar News