ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ: ಆಪ್ ಗೆ ಮುನ್ನಡೆ

Update: 2022-12-07 08:16 GMT

ಹೊಸದಿಲ್ಲಿ: ದಿಲ್ಲಿ ಮಹಾನಗರ ಪಾಲಿಕೆಗೆ (ಎಂಸಿಡಿ)ಡಿಸೆಂಬರ್ 4ರಂದು ನಡೆದಿದ್ದ  ಚುನಾವಣೆಯ  ಮತ ಎಣಿಕೆಯು ಬುಧವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಿದ್ದು,  134 ಸ್ಥಾನಗಳಲ್ಲಿ ಆಮ್ ಆದ್ಮಿ ಪಕ್ಷ ಮುನ್ನಡೆಯಲ್ಲಿದೆ. ಬಿಜೆಪಿ 103 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 10 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.

ಮಧ್ಯಾಹ್ನದ ವೇಳೆಗೆ 218 ಸ್ಥಾನಗಳ ಫಲಿತಾಂಶ ಹೊರಬಂದಿದ್ದು  ಎಎಪಿ 113, ಬಿಜೆಪಿ 96, ಕಾಂಗ್ರೆಸ್ 7, ಹಾಗೂ ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.

ದಿಲ್ಲಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ 15 ವರ್ಷಗಳ ಪಾರುಪತ್ಯವನ್ನು ಅಂತ್ಯಗೊಳಿಸುವತ್ತ ದಿಟ್ಟ ಹೆಜ್ಜೆ ಇಟ್ಟಿರುವ ಆಮ್ ಆದ್ಮಿ ಪಕ್ಷ  ಸ್ಪಷ್ಟ ಬಹುಮತದತ್ತ (126 ಸೀಟು)  ಸಾಗಿದೆ. ಆಪ್ ಕಾರ್ಯಕರ್ತರು ಈಗಾಗಲೇ ಸಂಭ್ರಮಾಚರಣೆಯನ್ನು ಆರಂಭಿಸಿದ್ದಾರೆ.

ಬಿಗಿ ಭದ್ರತೆಯ ನಡುವೆ 42 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದ್ದು ಕೆಲವೇ ಗಂಟೆಗಳಲ್ಲಿ 250 ವಾರ್ಡ್‌ಗಳಲ್ಲಿ ಸ್ಪರ್ಧಿಸಿರುವ  1,349 ಅಭ್ಯರ್ಥಿಗಳ ಭವಿಷ್ಯ ಹೊರಬರಲಿದೆ.

ಡಿಸೆಂಬರ್ 4 ರಂದು 50 ಪ್ರತಿಶತದಷ್ಟು ಅರ್ಹ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಎಎಪಿ ಹಾಗೂ  ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. 2017 ರಲ್ಲಿ (ಅಂದಿನ) 270 ಮುನ್ಸಿಪಲ್ ವಾರ್ಡ್‌ಗಳಲ್ಲಿ ಬಿಜೆಪಿ 181 ಅನ್ನು ಗೆದ್ದುಕೊಂಡಿತ್ತು.  ಆದರೆ AAP ಕೇವಲ 48  ಗೆದ್ದುಕೊಂಡರೆ  ಕಾಂಗ್ರೆಸ್ 30 ನೊಂದಿಗೆ ಮೂರನೇ ಸ್ಥಾನ ಗಳಿಸಿತ್ತು.

Similar News