ಎರಡನೇ ಏಕದಿನ: ಬಾಂಗ್ಲಾದೇಶ ವಿರುದ್ಧ ಸತತ ಎರಡನೇ ಸೋಲು ಕಂಡ ಭಾರತ, ಕೈತಪ್ಪಿದ ಸರಣಿ

Update: 2022-12-07 14:40 GMT

 ಮೀರ್ಪುರ, ಡಿ.7: ಬಾಂಗ್ಲಾದೇಶ ಬೌಲರ್‌ಗಳ ಶಿಸ್ತುಬದ್ಧ ದಾಳಿ ಹಾಗೂ ಮೆಹಿದಿ ಹಸನ್ ಮಿರಾಝ್ ಅವರ ಆಲ್‌ರೌಂಡ್ ಆಟಕ್ಕೆ ಕಂಗಾಲಾದ ಭಾರತವು ಬುಧವಾರ ನಡೆದ ಎರಡನೇ ಏಕದಿನ ಪಂದ್ಯವನ್ನು 5 ರನ್ ಅಂತರದಿಂದ ಸೋಲುಂಡಿದೆ.

ಈ ಗೆಲುವಿನ ಮೂಲಕ ಬಾಂಗ್ಲಾದೇಶವು 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ. ಗೆಲ್ಲಲು 272 ರನ್ ಗುರಿ ಬೆನ್ನಟ್ಟಿದ್ದ ಭಾರತವು 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 266ರನ್ ಗಳಿಸಿ ಸೋಲೊಪ್ಪಿಕೊಂಡಿದೆ.

ರೋಹಿತ್ ಶರ್ಮಾ ಔಟಾಗದೆ 51 ರನ್ ಗಳಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಶ್ರೇಯಸ್ ಅಯ್ಯರ್(82 ರನ್) ಹಾಗೂ ಅಕ್ಷರ್ ಪಟೇಲ್(56) ಒಂದಷ್ಟು ಹೋರಾಟ ನೀಡಿದರು.

ಇಬಾದತ್ ಹುಸೈನ್(3-45) ಯಶಸ್ವಿ ಬೌಲರ್ ಎನಿಸಿಕೊಂಡರು. ಮೆಹಿದಿ ಹಸನ್(2-46) ಹಾಗೂ ಶಾಕಿಬ್ ಅಲ್ ಹಸನ್(2-39) ತಲಾ ಎರಡು ವಿಕೆಟ್‌ಗಳನ್ನು ಪಡೆದರು.

ಇದಕ್ಕೂ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಬಾಂಗ್ಲಾದೇಶ ಕೆಳ ಕ್ರಮಾಂಕದ ಬ್ಯಾಟರ್ ಮೆಹಿದಿ ಹಸನ್ ಮಿರಾಝ್ ಸಿಡಿಸಿದ ಚೊಚ್ಚಲ ಶತಕ(ಔಟಾಗದೆ 100, 83 ರನ್, 8 ಬೌಂಡರಿ, 4 ಸಿಕ್ಸರ್)ಹಾಗೂ ಮಹಮೂದುಲ್ಲಾ(77 ರನ್, 96 ಎಸೆತ, 7 ಬೌಂಡರಿ) ಅರ್ಧಶತಕದ ಸಹಾಯದಿಂದ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 271 ರನ್ ಗಳಿಸಿತು.

ಬಾಂಗ್ಲಾದೇಶದ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ. 19ನೇ ಓವರ್ ಅಂತ್ಯದಲ್ಲಿ 69 ರನ್ ಗಳಿಸುವಷ್ಟರಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದ ಸುಳಿಯಲ್ಲಿತ್ತು. ಆಗ ಜೊತೆಯಾದ ಮಹಮೂದುಲ್ಲಾ ಹಾಗೂ ಮೆಹಿದಿ ಹಸನ್ 7ನೇ ವಿಕೆಟ್‌ಗೆ 148 ರನ್ ಜೊತೆಯಾಟ ನಡೆಸಿ ಇನಿಂಗ್ಸ್ ರಿಪೇರಿ ಮಾಡಿದರು.

ಮಹಮೂದುಲ್ಲಾ ಔಟಾದ ನಂತರ ನಸುಮ್ ಅಹ್ಮದ್ ಅವರೊಂದಿಗೆ 8ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 54 ರನ್ ಸೇರಿಸಿದ ಮೆಹಿದಿ ಹಸನ್ ತಂಡವು ಸ್ಪರ್ಧಾತ್ಮಕ ಸ್ಕೋರ್ ಗಳಿಸಲು ನೆರವಾದರು.

ಭಾರತದ ಬೌಲಿಂಗ್‌ನಲ್ಲಿ ವಾಶಿಂಗ್ಟನ್ ಸುಂದರ್(3-37) ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು. ಮುಹಮ್ಮದ್ ಸಿರಾಜ್(2-73) ಹಾಗೂ ಉಮ್ರಾನ್ ಮಲಿಕ್(2-58)ತಲಾ ಎರಡು ವಿಕೆಟ್ ಪಡೆದರು.

Similar News