ಕಮಿಷನ್ ಹಣಕ್ಕಾಗಿ ಬಿಜೆಪಿಯಿಂದ ಅಭಿವೃದ್ಧಿ ಜಪ: ಆರ್.ಧರ್ಮಸೇನ ಆರೋಪ

Update: 2022-12-08 16:24 GMT

ಉಡುಪಿ, ಡಿ.8: ಬಿಜೆಪಿ  ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ. ಕೇವಲ ಕಮಿಷನ್ ಹಣಕ್ಕಾಗಿ ಅಭಿವೃದ್ಧಿ ಕಾರ್ಯ ಎಂದು ಹೇಳಿಕೊಂಡು ಬರುತ್ತಿದೆ ಎಂದು ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ರಾಜ್ಯಾಧ್ಯಕ್ಷ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನ ಆರೋಪಿಸಿದ್ದಾರೆ.

ಗುರುವಾರ ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸೌಧ ಎಂಬುದು ಆಡಳಿತ ಕೇಂದ್ರವಾಗಿರದೇ, ಮಧ್ಯವರ್ತಿಗಳ ಕೇಂದ್ರವಾಗಿದೆ ಎಂದು ದೂರಿದ ಅವರು ಬಿಜೆಪಿ ಸರಕಾರ ದಲಿತರಿಗೆ ನೀಡ ಬೇಕಾದ ಸವಲತ್ತುಗಳನ್ನು ನೀಡುತ್ತಿಲ್ಲ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸುತ್ತಿಲ್ಲ. ಬರೇ ಕಮಿಷನ್‌ ಗಾಗಿಯಷ್ಟೇ ಅಭಿವೃದ್ಧಿ ಎಂದು ಹೇಳುತ್ತಿದೆ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ‘ಸಿದ್ರಾಮುಲ್ಲಾ ಖಾನ್’ ಎಂದು ಕರೆದ ಬಿಜೆಪಿ ನಾಯಕ ಸಿ.ಟಿ.ರವಿ ಅವರ ಹೇಳಿಕೆಯನ್ನು ಖಂಡಿಸಿದ ಧರ್ಮಸೇನ, ಕೂಡಲೇ ರವಿ ತಮ್ಮ ಮಾತನ್ನು ಹಿಂದಕ್ಕೆ ಪಡೆಯಬೇಕು. ಈಗ ಪಕ್ಷದ ರಾಷ್ಟ್ರೀಯ ಪದಾಧಿಕಾರಿಯಾಗಿರುವ ರವಿ ಇಂಥ ಹೇಳಿಕೆ ನೀಡುವುದು  ಸರಿಯಲ್ಲ. ಪಕ್ಷ ಸಂಘಟನೆಗೆ ಬದಲು ದೇಶದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡುತ್ತಿರುವ ರವಿ, ದೇಶದ ನಾಗರಿಕನೆನಿಸಿ ಕೊಳ್ಳಲು ನಾಲಾಯಕ್ ಎಂದರು.

ರಾಜ್ಯ ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಯನ್ನು ಟೀಕಿಸಿದ ಧರ್ಮಸೇನ, ಮುಖ್ಯಮಂತ್ರಿಯಂಥ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಇಂಥ ಬೀಸು ಹೇಳಿಕೆ ನೀಡಿ ರಾಜ್ಯದ ಜನತೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಬಾರದು ಎಂದರು.

ಕಾಂಗ್ರೆಸ್ ಆಡಳಿತದ ಸಮಯದಲ್ಲಿ ಯಾರಾದರೂ ಮುಖ್ಯಮಂತ್ರಿಗೆ ಭ್ರಷ್ಟಾಚಾರದ ಬಗ್ಗೆ ಪತ್ರ ಬರೆದಿದ್ದಾರಾ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಆಡಳಿತದಲ್ಲಿ ಅದು ಆಗಿದೆ. ಸಚಿವರ ವಿರುದ್ಧವೇ ಶೇ.40 ಕಮಿಷನ್‌ನ ಆರೋಪ ನೇರವಾಗಿ ಬಂದಿದೆ. ಉಡುಪಿಗೆ ಬಂದು ಪಕ್ಷದವರೇ ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಹಾಗಿದ್ದರೆ ಭ್ರಷ್ಟಾಚಾರದ ಗಂಗೋತ್ರಿ ಯಾರು ಕಾಂಗ್ರೆಸ್ಸೋ, ಬಿಜೆಪಿಯೋ ಎಂದವರು ಪ್ರಶ್ನಿಸಿದರು.

ಪಕ್ಷದ ಎಸ್‌ಸಿ ಘಟಕದ ರಾಜ್ಯಾಧ್ಯಕ್ಷ ಸ್ಥಾನ ವಹಿಸಿಕೊಂಡ ಬಳಿಕ ತಾನು ರಾಜ್ಯ ಪ್ರವಾಸ ಕೈಗೊಂಡಿದ್ದು, ಪಕ್ಷದಿಂದ ದೂರ ಸರಿದಿರುವ ದಲಿತರನ್ನು ಮತ್ತೆ ಕಾಂಗ್ರೆಸ್‌ನತ್ತ ಸೆಳೆಯಲು ಪ್ರಯತ್ನಿಸುತ್ತಿರುವುದಾಗಿ ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿದ್ದ ದಿ.ಬಿ.ರಾಚಯ್ಯ ಅವರ ಪುತ್ರ ಧರ್ಮಸೇನ ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು, ಪರಿಶಿಷ್ಟ ಜಾತಿಯ ಜಿಲ್ಲಾ ಘಟಕದ ಅಧ್ಯಕ್ಷ ಜಯಕುಮಾರ್, ರಾಜ್ಯ ಸಂಚಾಲಕ ಭಾಸ್ಕರ ಪಡುಬಿದ್ರಿ, ಪದಾಧಿಕಾರಿಗಳಾದ ದಿನೇಶ್, ಉಮೇಶ್ ಉಪಸ್ಥಿತರಿದ್ದರು.

Similar News