ಅಕ್ರಮ ಹಣ ವರ್ಗಾವಣೆ ಪ್ರಕರಣ: ಸಿದ್ದೀಕ್‌ ಕಪ್ಪನ್‌ ಸಹಿತ ‌ ಆರು ಮಂದಿ ವಿರುದ್ಧ ಆರೋಪ ರೂಪಿಸಿದ ನ್ಯಾಯಾಲಯ

Update: 2022-12-08 16:27 GMT

ಲಕ್ನೋ: ಜಾರಿ ನಿರ್ದೇಶನಾಲಯ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಪತ್ರಕರ್ತ ಸಿದ್ದಿಕ್ ಕಪ್ಪನ್ (Siddique Kappan) ಮತ್ತು ಇತರ ಆರು ಮಂದಿ ವಿರುದ್ಧ ಲಕ್ನೋ ನ್ಯಾಯಾಲಯ ಬುಧವಾರ ಆರೋಪ ರೂಪಿಸಿದೆ ಎಂದು The Indian Express ವರದಿ ಮಾಡಿದೆ.

ಡಿಸೆಂಬರ್ 17ರಂದು ಪ್ರಕರಣದ ವಿಚಾರಣೆ ಆರಂಭವಾಗಲಿದೆ.

ಕಪ್ಪನ್ ಮಾತ್ರವಲ್ಲದೆ, ಕೆಎ ರವೂಫ್ ಶರೀಫ್, ಅತೀಕುರ್ರೆಹಮಾನ್, ಮಸೂದ್ ಅಹ್ಮದ್, ಮುಹಮ್ಮದ್ ಆಲಂ, ಅಬ್ದುಲ್ ರಝಾಕ್ ಮತ್ತು ಅಶ್ರಫ್ ಖಾದಿರ್ ಎಂಬವರ ವಿರುದ್ಧವೂ ನ್ಯಾಯಾಲಯ ಆರೋಪಗಳನ್ನು ಮಾಡಿದೆ.

ದಲಿತ ಬಾಲಕಿಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ವರದಿ ಮಾಡಲು ಹತ್ರಾಸ್‌ಗೆ ಪ್ರಯಾಣಿಸುತ್ತಿದ್ದಾಗ ಕಪ್ಪನ್ ಅವರನ್ನು ಇತರ ಮೂವರೊಂದಿಗೆ ಅಕ್ಟೋಬರ್ 5, 2020 ರಂದು ಬಂಧಿಸಲಾಗಿತ್ತು.

ಜಾತಿ ಆಧಾರಿತ ಗಲಭೆಯನ್ನು ಉತ್ತೇಜಿಸಲು ಕಪ್ಪನ್ ಸಂಚು ಹೂಡಿದ್ದಾರೆ ಎಂದು ಪೊಲೀಸರು ಮೊದಲು ಆರೋಪಿಸಿದ್ದರು. ಬಳಿಕ, ದೇಶದ್ರೋಹದ ಆರೋಪಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯ ನಿಬಂಧನೆಗಳನ್ನು ಸೇರಿಸಲಾಗಿತ್ತು.

ಫೆಬ್ರವರಿ 2021 ರಲ್ಲಿ, ಜಾರಿ ನಿರ್ದೇಶನಾಲಯವು ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿತ್ತು. 

ಸೆಪ್ಟೆಂಬರ್ 9 ರಂದು ಯುಎಪಿಎ ಪ್ರಕರಣದಲ್ಲಿ ಕಪ್ಪನ್‌ಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು. ಆದಾಗ್ಯೂ, ಅಕ್ಟೋಬರ್ 31 ರಂದು ಲಕ್ನೋ ನ್ಯಾಯಾಲಯವು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ನಿರಾಕರಿಸಿದ್ದರಿಂದ ಅವರು ಜೈಲಿನಲ್ಲಿಯೇ ಇದ್ದಾರೆ.

Similar News