ವೀರಮ್ಗಮ್ ಕ್ಷೇತ್ರದಲ್ಲಿ ಹಾರ್ದಿಕ್ ಪಟೇಲ್‌ ಗೆ ಭರ್ಜರಿ ಜಯ

Update: 2022-12-08 16:44 GMT

ಅಹ್ಮದಾಬಾದ್, ಡಿ. 8: ಬಿಜೆಪಿ ನಾಯಕ ಹಾರ್ದಿಕ್ ಪಟೇಲ್(Hardik Patel) ಗುರುವಾರ ಗುಜರಾತ್‌ನ ವೀರಮ್ಗಮ್ (Veeramgam)ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಅವರು ಕಾಂಗ್ರೆಸ್‌ ನಲಖಾಭಾಯಿ ಭರ್ವಾದ್‌ರನ್ನು 50,000ಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದಾರೆ.

2015ರಲ್ಲಿ, ಪಾಟಿದಾರ್ ಸಮುದಾಯಕ್ಕೆಮೀಸಲಾತಿ ನೀಡಬೇಕೆಂದು ಆಗ್ರಹಿಸಿ ನಡೆದ ಚಳವಳಿಯ ಮೂಲಕ ಹಾರ್ದಿಕ್ ಪಟೇಲ್ ಪ್ರವರ್ಧಮಾನಕ್ಕೆ ಬಂದಿದ್ದರು. ಅವರು ಪಾಟಿದಾರ್ ಅನಾಮತ್ ಆಂದೋಲನ್ ಸಮಿತಿ (ಪಿಎಎಎಸ್)ಯ ಮುಖ್ಯಸ್ಥರಾಗಿದ್ದರು ಹಾಗೂ ಸರ್ದಾರ್ ಪಟೇಲ್ ಗ್ರೂಪ್ (ಎಸ್‌ಪಿಜಿ) ಎಂಬ ಗುಜರಾತ್‌ನ ಸಮುದಾಯ ಸಾಮಾಜಿಕ ಗುಂಪಿನ ಸದಸ್ಯರಾಗಿದ್ದರು.

ಅವರು ಮೊದಲು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಆದರೆ, ಪಕ್ಷದ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯ ತಲೆದೋರಿದ ಬಳಿಕ ಅವರು ಬಿಜೆಪಿಗೆ ಸೇರ್ಪಡೆಗೊಂಡರು. ತನ್ನನ್ನು ಕಾಂಗ್ರೆಸ್ ಮತ್ತು ಗುಜರಾತ್‌ನ ಅದರ ಹಿರಿಯ ನಾಯಕರು ಕಡೆಗಣಿಸುತ್ತಿದ್ದಾರೆ ಎನ್ನುವ ಕೊರಗು ಅವರಿಗಿತ್ತು.

ಅಹ್ಮದಾಬಾದ್‌ನಲ್ಲಿರುವ ವೀರಮ್ಗಮ್ ಜಾತಿ ರಾಜಕಾರಣಕ್ಕೆ ಅತೀತವಾಗಿತ್ತು ಎಂದು ಹೇಳಲಾಗಿತ್ತು. ಅಲ್ಪಸಂಖ್ಯಾತ ಸಮುದಾಯಸೇರಿದಂತೆ ವಿವಿಧ ಸಾಮಾಜಿಕ ಮತ್ತು ಧಾರ್ಮಿಕ ಹಿನ್ನೆಲೆಯ ನಾಯಕರು ಕ್ಷೇತ್ರವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ಅದು 2012ರಿಂದ ಕಾಂಗ್ರೆಸ್ ವಶದಲ್ಲಿತ್ತು. ಇದಕ್ಕೂಮೊದಲು, 2007ರ ಚುನಾವಣೆಯಲ್ಲಿ ಅಲ್ಲಿ ಬಿಜೆಪಿ ಗೆದ್ದಿತ್ತು.

Similar News