ವಿಧಾನ ಸಭಾ ಉಪಚುನಾವಣೆ: ತಲಾ 2 ಸ್ಥಾನ ಗೆದ್ದ ಕಾಂಗ್ರೆಸ್,ಬಿಜೆಪಿ

Update: 2022-12-08 17:07 GMT

  ಹೊಸದಿಲ್ಲಿ,ಡಿ.9: ಲೋಕಸಭಾ ಕ್ಷೇತ್ರ ಹಾಗೂ ಐದು ರಾಜ್ಯಗಳ ಆರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಗಳ ಫಲಿತಾಂಶ ಗುರುವಾರ ಹೊರಬಿದ್ದಿದ್ದು, ಮೈನ್‌ಪುರಿ(Mainpuri) ಲೋಕಸಭಾ ಕ್ಷೇತ್ರದಲ್ಲಿ ಎಸ್ಪಿ ಅಭ್ಯರ್ಥಿ, ಡಿಂಪಲ್ ಯಾದವ್ (Dimple Yadav)ಪ್ರಚಂಡ ಗೆಲುವು ಸಾಧಿಸಿದ್ದಾರೆ. ಅವರು ಎದುರಾಳಿ ಬಿಜೆಪಿಯ ರಘುರಾಜ್ ಸಿಂಗ್ (Raghuraj Singh)ಅವರನ್ನು 2,88,136 ಮತಗಳ ಅಂತರದಿಂದ ಸೋಲಿಸಿದ್ದಾರೆ. ಎಸ್ಪಿ ಹಿರಿಯ ನಾಯಕ ಮುಲಾಯಂಸಿಂಗ್ ಯಾವ್ (Mulayamsingh Yaw)ಅವರ ನಿಧನದಿಂದ ತೆರವಾದ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು . ಡಿಂಲ್ ಯಾದವ್ ಅವರು ಮುಲಾಯಂ ಅವರ ಸೊಸೆ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಪತ್ನಿ.

 ಉಪಚುನಾವಣೆ ನಡೆದ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ತಲಾ 2, ರಾಷ್ಟ್ರೀಯ ಲೋಕದಳ, ಬಿಜೆಡಿ ತಲಾ ಒಂದು ಸ್ಥಾನ ಗೆದ್ದಿದೆ.

   ಉತ್ತರಪ್ರದೇಶದಲ್ಲಿ ಉಪಚುನಾವಣೆ ನಡೆದ ರಾಮ್‌ಪುರದಲ್ಲಿ ಬಿಜೆಪಿ, ಕತೌಲಿಯಲ್ಲಿ ಆರ್‌ಎಲ್‌ಡಿ ಗೆಲುವು ಸಾಧಿಸಿವೆ.ಬಿಹಾರದ ಕುರಾಹನಿ ಕ್ಷೇತ್ರ ಬಿಜೆಪಿ ಪಾಲಾಗಿದೆ. ಒಡಿಶಾದ ಪದ್ಮಪುರದಲ್ಲಿ ಬಿಜು ಜನತಾದಳ ಜಯಗಳಿಸಿದೆ. ರಾಜಸ್ಥಾನದ ಸದರ್‌ಶಹರ್ ಹಾಗೂ ಚತ್ತೀಸ್‌ಗಢ ಭಾನುಪ್ರತಾಪಪುರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ.

  ಉತ್ತರಪ್ರದೇಶದ ರಾಮಪುರ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಚ್ಚರಿಯ ಜಯಗಳಿಸಿದೆ. ಎಸ್ಪಿ ನಾಯಕ ಅಝಂ ಖಾನ್ ಅವರ ಭದ್ರಕೋಟೆಯೆಂದೇ ಪರಿಗಣಿಸಲ್ಪಟ್ಟ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಕಾಶ್ ಸಕ್ಸೇನಾ(Akash Saxena) ಅವರು ಎಸ್ಪಿ ಅಭ್ಯರ್ಥಿ ಆಸೀಮ್ ರಾಝಾ(Aseem Raza) ಅವರನ್ನು 30 ಸಾವಿರ ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ದ್ವೇಷ ಭಾಷಣ ಪ್ರಕರಣದ ಹಿನ್ನೆಲೆಯಲ್ಲಿ ಆಝಂ ಖಾನ್(Azam Khan) ಅವರನ್ನು ನ್ಯಾಯಾಲಯವು ಶಾಸಕತ್ವದಿಂದ ಅನರ್ಹಗೊಳಿಸಿದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿದೆ.

ಈ ಆರು ಕ್ಷೇತ್ರಗಳಿಗೆ ಡಿ.5ರಂದು ಮತದಾನ ನಡೆದಿದ್ದು, ಗುರುವಾರ ಬೆಳಗ್ಗೆ 8.00 ಗಂಟೆಗೆ ಮತ ಏಣಿಕೆ ಆರಂಭವಾಗಿತ್ತು.

   ಉತ್ತರಪ್ರದೇಶದ ಕತೌಲಿ ವಿಧಾನಸಭಾ ಕ್ಷೇತ್ರ ರಾಷ್ಟ್ರೀಯ ಲೋಕದಳದ ಪಾಲಾಗಿದೆ. ಆರ್‌ಎಲ್‌ಡಿ ಅಭ್ಯರ್ಥಿ ಮದನ್ ಭೈಯಾ ಅವರು ಬಿಜೆಪಿಯ ರಾಜಕುಮಾರಿ ಅವರನ್ನು 22 ಸಾವಿರ ಮತಗಳಿಂದ ಪರಾಭವಗೊಳಿಸಿದ್ದತಾರೆ. ಹಿಂದಿನ ಬಿಜೆಪಿ ಶಾಸಕ ಸಿಂಗ್ ಸೈನಿ ಅವರನ್ನು ಅನರ್ಹಗೊಳಿಸಿದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿತ್ತು.

ಚತ್ತೀಸ್‌ಗಢದ ಭಾನುಪ್ರತಾಪಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾವಿತ್ರಿ ಮನೋಜ್ ಮಾಂಡವಿ ಅವರು ಎದುರಾಳಿ ಬಿಜೆಪಿ ಅಭ್ಯರ್ಥಿ ಬ್ರಹ್ಮಾನಂದ ನೇತ್ರಂ ಅವರನ್ನು 21 ಸಾವಿರ ಮತಗಳಿಂದ ಪರಾಭವಗೊಳಿಸಿದ್ದಾರೆ. ಬಿಹಾರದ ಕುರ್ಹಾನ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೇದಾರ್ ಪ್ರಸಾದ್ ಗುಪ್ತಾ ಅವರು , ಜೆಡಿಯು ಅಭ್ಯರ್ಥಿ ಮನೋಜ್ ಖುಶವಾಹಾ ಅವರನ್ನು 3632 ಮತಗಳಿಂದ ಸೋಲಿಸಿದ್ದಾರೆ.

 ರಾಜಸ್ಥಾನದ ಸದರ್‌ಶಹರ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಲ್ಲಿ ಕಾಂಗ್ರೆಸ್‌ನ ಅನಿಲ್ ಕುಮಾರ್ ಶರ್ಮಾ ಬಿಜೆಪಿಯ ಅಶೋಕ್ ಕುಮಾರ್‌ರನ್ನು 26 ಸಾವಿರ ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.

   ಒಡಿಶಾದ ಪದ್ಮಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜು ಜನತಾದಳದ ಅಭ್ಯರ್ಥಿ ಬಾರ್ಶಾ ಸಿಂಗ್ ಬರಿಹಾ ಗೆಲುವು ಸಾಧಿಸಿದ್ದಾರೆ. ಅವರು ಬಿಜೆಪಿಯ ಪ್ರದೀಪ್ ಪುರೋಹಿತ್ ಅವರನ್ನು 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದಾರೆ.

Similar News