ಗುಜರಾತ್‌ನಲ್ಲಿ 7ನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ; ಹಿಮಾಚಲದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ

Update: 2022-12-08 17:14 GMT

  ಅಹ್ಮದಾಬಾದ್,ಡಿ.9: ಗುಜರಾತ್, ಹಿಮಾಚಲ ಪ್ರದೇಶ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಮತಏಣಿಕೆ ಗುರುವಾರ ನಡೆದಿದ್ದು, ಗುಜರಾತ್‌ನಲ್ಲಿ ಪ್ರಚಂಡ ಬಹುಮತದೊಂದಿಗೆ ಬಿಜೆಪಿ (BJP) ಸತತ ಏಳನೇ ಬಾರಿಗೆ ಅಧಿಕಾರಕ್ಕೇರಿದೆ. ಪರ್ವತ ರಾಜ್ಯ ಹಿಮಾಚಲ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆಗೆ ಬಿಜೆಪಿ ತತ್ತರಿಸಿದೆ. ಅಲ್ಲಿ ಆಡಳಿತಾರೂಢ ಬಿಜೆಪಿಯನ್ನು ಹಿಂದಿಕ್ಕಿ ಕಾಂಗ್ರೆಸ್ (Congress)ಸ್ಪಷ್ಟ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿದೆ.ಒಟ್ಟಿನಲ್ಲಿ ಈ ಎರಡೂ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಸಿಹಿ,ಕಹಿಗಳ ಫಲಿತಾಂಶವನ್ನು ನೀಡಿದೆ.

 ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಒಟ್ಟು 182 ಸ್ಥಾನಗಳ ಪೈಕಿ ಬಿಜೆಪಿಯು 156 ಸ್ಥಾನಗಳನ್ನು ಗೆದ್ದು ದಾಖಲೆಯ ಬಹುಮತ ಗಳಿಸಿದೆ. ಗುಜರಾತ್ ವಿಧಾನಸಭಾ ಚುನಾವಣೆಯ ಇತಿಹಾಸದಲ್ಲೇ ರಾಜಕೀಯ ಪಕ್ಷವೊಂದು 150ಕ್ಕೂ ಅಧಿಕ ಸ್ಥಾನಗಳನ್ನು ಪಡೆದಿರುವುದು ಇದೇ ಮೊದಲ ಸಲ. ಕಾಂಗ್ರೆಸ್ ದಯನೀಯ ಸೋಲನ್ನು ಕಂಡಿದ್ದು, ಕೇವಲ 17 ಸ್ಥಾನಗಳಲ್ಲಿ ಮಾತ್ರವೇ ಜಯಗಳಿಸಿದೆ. ಗುಜರಾತ್‌ನಲ್ಲಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ ಆತ್ಮವಿಶ್ವಾಸ ಹೊಂದಿದ್ದ ಆಮ್ ಆದ್ಮಿ ಪಕ್ಷ ಎರಡಂಕಿಯ ಸ್ಥಾನಗಳನ್ನು ಪಡೆಯಲು ವಿಫಲವಾಗಿದ್ದು, ಕೇವಲ 5 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಇತರ ಮೂರು ಸ್ಥಾನಗಳು ಪಕ್ಷೇತರರ ಪಾಲಾಗಿವೆ.

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಚಲಾವಣೆಯಾದ ಶೇ.55ರಷ್ಟು ಮತಗಳು ಬಿಜೆಪಿಯ ಪಾಲಾಗಿವೆ. ಕಾಂಗ್ರೆಸ್ ಕೇವಲ 10 ಶೇಕಡ ಮತಗಳನ್ನಷ್ಟೇ ಪಡೆಯಲು ಶಕ್ತವಾಗಿದೆ..

 ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಪಾಟೀದಾರ್ ನಾಯಕ ಹಾರ್ದಿಕ್ ಪಟೇಲ್(Hardik Patel), ಓಬಿಸಿ ಮುಖಂಡ ಅಲ್ಪೇಶ್ ಠಾಕೂರ್ (Alpesh Thakur)ಭರ್ಜರಿ ಜಯಭೇರಿ ಬಾರಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಇವರಿಬ್ಬರೂ ಬಿಜೆಪಿ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದರು. ಮುಖ್ಯಮಂತ್ರಿ ಭೂಪೇಂದ್ರ ಪಾಟೀಲ್ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರೆಲ್ಲರೂ ಗೆಲುವು ಸಾಧಿಸಿದ್ದಾರೆ.

 ಇತ್ತ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ದಲಿತ ನಾಯಕ ಜಿಗ್ನೇಶ್ ಮೆವಾನಿ (Jignesh Mevani)ಕೂಡಾ ವಿಜಯದ ನಗೆ ಬೀರಿದ್ದಾರೆ.

ಗುಜರಾತ್‌ನಲ್ಲಿ ಬಿಜೆಪಿಯು ಕಳೆದ 27 ವರ್ಷಗಳಿಂದ ಅಧಿಕಾರದಲ್ಲಿದೆ. ಪ್ರಧಾನಿಯಾಗುವ ಮುನ್ನ ಪ್ರಧಾನಿ ನರೇಂದ್ರ ಮೋದಿಯವರು ದೀರ್ಘ ಕಾಲ ಆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. 2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಗೆ ಪ್ರಬಲ ಸ್ಪರ್ಧೆಯನ್ನು ನೀಡಿತ್ತು. ಆದರೆ ಈ ಸಲ ಆಮ್ ಆದ್ಮಿ ಪಕ್ಷವು ಕಾಂಗ್ರೆಸ್ ಮತಗಳ ಬುಟ್ಟಿಗೆ ಕೈಹಾಕಿದ ಪರಿಣಾಮವಾಗಿ, ಕೈ ಪಕ್ಷದ ಘೋರ ಪರಾಭವನ್ನು ಕಂಡಿತೆಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ.

  

2017ರ ವಿಧಾನಸಭಾ ಚುನಾವಣೆಯಲ್ಲಿ 99 ಸ್ಥಾನಗಳ ಅಲ್ಪಬಹುಮತದೊಂದಿಗೆ ಬಿಜೆಪಿ ಆಡಳಿತದ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿತ್ತು.

ಹಿಮಾಚಲದಲ್ಲಿ ಕಾಂಗ್ರೆಸ್ ವಿಜಯ ಪತಾಕೆ, ಬಾಡಿದ ಕಮಲ ಪರ್ವತ  : ರಾಜ್ಯ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವಿನ ಪತಾಕೆ ಹಾರಿಸಿದ್ದು, 39 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಸ್ಪಷ್ಟ ಬಹುಮತ ದಾಖಲಿಸಿದೆ. ಇದರೊಂದಿಗೆ ಹಿಮಾಚಲ ಪ್ರದೇಶದಲ್ಲಿ ಐದು ವರ್ಷಗಳಿಗೊಮ್ಮೆ ಆಡಳಿತ ಪಕ್ಷವನ್ನು ಬದಲಾಯಿಸುವ 4 ದಶಕಗಳ ಪರಂಪರೆಯನ್ನು ಮತದಾರರು ಮುಂದುವರಿಸಿದ್ದಾರೆ. ಇದೇ ವೇಳೆ ಹಿಮಾಚಲ ಪ್ರದೇಶದ ವಿಧಾನಸಭೆಯನ್ನು ಪ್ರವೇಶಿಸುವ ಆಮ್ ಆದ್ಮಿ ಪಕ್ಷದ ಕನಸು ನುಚ್ಚು ನೂರಾಗಿದ್ದು, ಅದು ಒಂದೇ ಒಂದು ಸ್ಥಾನವನ್ನು ಗೆಲ್ಲಲೂ ವಿಫಲವಾಗಿದೆ.

ಬಿಜೆಪಿಗೆ 26 ಸ್ಥಾನಗಳಷ್ಟೇ ದೊರೆತಿದ್ದು,ಸತತ ಎರಡನೆ ಬಾರಿಗೆ ಆಡಳಿತದ ಚುಕ್ಕಾಣಿ ಹಿಡಿಯುವ ಅದರ ಕನಸು ಭಗ್ನವಾಗಿದೆ. ಬಿಜೆಪಿಯ ಮೂವರು ಬಂಡುಕೋರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

  2017ರ ವಿಧಾನಸಭಾ ಚುನಾವಣೆಯಲ್ಲಿ ಹಿಮಾಚಲದಲ್ಲಿ ಕಾಂಗ್ರೆಸ್ ಕೇವಲ 21 ಸ್ಥಾನಗಳಲ್ಲಿ ಜಯ ಗಳಿಸಿತ್ತು. ಬಿಜೆಪಿ 44 ಸ್ಥಾನಗಳನ್ನು ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಈ ಸಲದ ಚುನಾವಣೆಯಲ್ಲಿ ಕಮಲಪಕ್ಷವು ಹಿಂದಿನ ಸಾಲಿಗಿಂತ 18 ಸ್ಥಾನಗಳನ್ನು ಕಳೆದುಕೊಂಡಿದೆ.

 1985ರ ಬಳಿಕ ಹಿಮಾಚಲ ಪ್ರದೇಶದಲ್ಲಿ ಒಂದೇ ಒಂದು ಪಕ್ಷವೂ ಸತತವಾಗಿ ಎರಡನೆ ಬಾರಿಗೆ ಅಧಿಕಾರಕ್ಕೇರಲು ಸಫಲವಾಗಿಲ್ಲ. ಈ ಸಲವೂ ಈ ಇತಿಹಾಸ ಪುನಾರವರ್ತನೆಗೊಂಡಿದ್ದು, ಸತತ ಎರಡನೆ ಬಾರಿ ಅಧಿಕಾರಕ್ಕೇರುವ ಬಿಜೆಪಿಯ ಪ್ರಯತ್ನ ವಿಫಲವಾಗಿದೆ.

   ಅಮಿತ್‌ಶಾ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಚುನಾವಣಾ ತಂತ್ರಗಾರಿಕೆಯನ್ನು ಬಗ್ಗುಬಡಿದಿರುವ ಕಾಂಗ್ರೆಸ್ ಪಕ್ಷವು ವಿಜಯದ ಪತಾಕೆಯನ್ನು ಹಾರಿಸಿದೆ. ಕಾಂಗ್ರೆಸ್‌ನ ‘ಸ್ಟಾರ್ ಪ್ರಚಾರಕಿ’ ಪ್ರಿಯಾಂಕಾಗಾಂಧಿಯವರ ಬಿರುಸಿನ ಚುನಾವಣಾ ಪ್ರಚಾರ ಪಕ್ಷಕ್ಕೆ ವರದಾನವಾಯಿತು. ಸ್ತ್ರೀಯರಿಗೆ ಪ್ರತಿ ತಿಂಗಳು 1500 ರೂ. ಮಾಸಾಶನ,300 ಯೂನಿಟ್‌ವರೆಗೆ ಉಚಿತ ವಿದ್ಯುತ್, 680 ಕೋಟಿ ರೂ. ವರೆಗೆ ಸ್ಟಾರ್ಟ್‌ಅಪ್ ಫಂಡ್, ಒಂದು ಲಕ್ಷ ಸರಕಾರಿ ಉದ್ಯೋಗ, ಸಂಚಾರಿ ಚಿಕಿತ್ಸಾ ಕ್ಲಿನಿಕ್‌ಗಳ ಮತ್ತಿತರ ಭರವಸೆಗಳು ಕಾಂಗ್ರೆಸ್‌ನ ಗೆಲುವಿಗೆ ಸೋಪಾನವಾದವು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.

Similar News