ಗುಜರಾತಿನಲ್ಲಿ ಕಾಂಗ್ರೆಸ್‌ಗೆ ಪ್ರತಿಪಕ್ಷ ಸ್ಥಾನವೂ ಅನುಮಾನ

Update: 2022-12-08 17:21 GMT

 ಅಹ್ಮದಾಬಾದ್,ಡಿ.8: ಗುಜರಾತ್ ವಿಧಾನಸಭಾ(Gujarat Assembly) ಚುನಾವಣೆಯಲ್ಲಿ ಕೇವಲ 16 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್(Congress) ವಿಪಕ್ಷ ನಾಯಕನ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.

ಗುಜರಾತ್ ವಿಧಾನಸಭೆಯು 182 ಸದಸ್ಯಬಲವನ್ನು ಹೊಂದಿದ್ದು, ಅಧಿಕೃತ ಪ್ರತಿಪಕ್ಷವಾಗಲು ಕಾಂಗ್ರೆಸ್‌ಗೆ ಕನಿಷ್ಠ 18 ಶಾಸಕರ ಅಗತ್ಯವಿದೆ. ಗುಜರಾತ್ ಚುನಾವಣೆಯಲ್ಲಿ ತನ್ನ ಅತ್ಯಂತ ಕೆಟ್ಟ ಪ್ರದರ್ಶನವನ್ನು ನೀಡಿರುವ ಕಾಂಗ್ರೆಸ್‌ಗೆ ಪ್ರತಿಪಕ್ಷ ನಾಯಕನ ನೇಮಕಕ್ಕೆ ಅಗತ್ಯವಾದ ಸಂಖ್ಯೆಯಲ್ಲಿ ಶಾಸಕರಿಲ್ಲ.

ಕೇಂದ್ರದಲ್ಲಿಯೂ 2014 ಮತ್ತು 2019ರ ಚುನಾವಣೆಗಳಲ್ಲಿ ಅನುಕ್ರಮವಾಗಿ ಕೇವಲ 44 ಮತ್ತು 52 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್‌ಗೆ ಪ್ರತಿಪಕ್ಷ ಸ್ಥಾನವನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರತಿಪಕ್ಷ ನಾಯಕನಾಗಿ ಮಾಡಲು ಕಾಂಗ್ರೆಸ್ ಪ್ರಯತ್ನಿಸಿತ್ತಾದರೂ ಆಗಿನ ಸ್ಪೀಕರ್ ಸುಮಿತ್ರಾ(Sumitra) ಮಹಾಜನ ಅವರು ನಿಯಮಗಳನ್ನು ಉಲ್ಲೇಖಿಸಿ ತಡೆದ್ದಿದರು. ಲೋಕಸಭೆಯಲ್ಲಿ ಅಧಿಕೃತ ಪ್ರತಿಪಕ್ಷವಾಗಲು 55 ಸ್ಥಾನಗಳ ಅಗತ್ಯವಿದೆ.

2014ರಲ್ಲಿ ಆರಂಭಗೊಂಡಿದ್ದ ಮೋದಿ ಸರಕಾರದ ಮೊದಲ ಅವಧಿಯಲ್ಲಿ ಲೋಕಪಾಲ ನೇಮಕಕ್ಕಾಗಿ ಸಮಿತಿಯ ಸಭೆಗಳಿಗೆ ಖರ್ಗೆಯವರನ್ನು ಆಹ್ವಾನಿಸಲಾಗಿತ್ತಾದರೂ ಪ್ರತಿಪಕ್ಷ ನಾಯಕನ ಸ್ಥಾನ ಲಭ್ಯವಾಗದ್ದನ್ನು ಪ್ರತಿಭಟಿಸಿ ಅವರು ಆಹ್ವಾನವನ್ನು ತಿರಸ್ಕರಿಸಿದ್ದರು.

1980 ಮತ್ತು 1984ರಲ್ಲಿ ಕಾಂಗ್ರೆಸ್ ಪಕ್ಷವು ಪ್ರತಿಪಕ್ಷಗಳಿಗೆ ಹೀಗೆಯೇ ಮಾಡಿತ್ತು. ಆಗ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್ ಭಾರೀ ಬಹುಮತವನ್ನು ಪಡೆದ ಬಳಿಕ ಯಾವುದೇ ಪಕ್ಷಕ್ಕೆ ಪ್ರತಿಪಕ್ಷ ನಾಯಕನ ಸ್ಥಾನವನ್ನು ನೀಡಲಾಗಿರಲಿಲ್ಲ.

Similar News