ಮೈನಪುರಿ ಉಪಚುನಾವಣೆ : ಎಸ್‌ಪಿಯ ಡಿಂಪಲ್ ಯಾದವಗೆ 2.88 ಲಕ್ಷ ಕ್ಕೂ ಅಧಿಕ ಮತಗಳ ಅಂತರದ ಭಾರೀ ಗೆಲುವು

Update: 2022-12-08 17:31 GMT

ಹೊಸದಿಲ್ಲಿ,ಡಿ.8: ಉತ್ತರ ಪ್ರದೇಶದ ಮೈನಪುರಿ ಲೋಕಸಭಾ(Mainpuri Lok Sabha) ಕ್ಷೇತ್ರದ ಉಪಚುನಾವಣೆಯಲ್ಲಿ ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ (Akhilesh Yadav)ಅವರ ಪತ್ನಿ ಹಾಗೂ ಪಕ್ಷದ ಅಭ್ಯರ್ಥಿ ಡಿಂಪಲ್ ಯಾದವ್(Dimple Yadav) ಅವರು ಬಿಜೆಪಿಯ ರಘುರಾಜ್ ಸಿಂಗ್ (Raghuraj Singh)ಶಾಕ್ಯರನ್ನು 2,88,461 ಮತಗಳ ಭಾರೀ ಅಂತರದಿಂದ ಪರಾಭವಗೊಳಿಸಿದ್ದಾರೆ. ಎಸ್‌ಪಿಯ ಭದ್ರಕೋಟೆಯೆಂದೇ ಪರಿಗಣಿಸಲಾಗಿರುವ ಮೈನಪುರಿ ಲೋಕಸಭಾ ಸ್ಥಾನವನ್ನು ಪ್ರತಿನಿಧಿಸಿದ್ದ ಮುಲಾಯಂ ಸಿಂಗ್ (Mulayam Singh)ಅವರು ಅ.10ರಂದು ನಿಧನರಾದ ಬಳಿಕ ಕ್ಷೇತ್ರವು ತೆರವಾಗಿತ್ತು.

2019ರ ಲೋಕಸಭಾ ಚುನಾವಣೆಯಲ್ಲಿ ಮುಲಾಯಂ ಬಿಜೆಪಿಯ ಪ್ರೇಮಸಿಂಗ್ ಶಾಕ್ಯ(Premsingh Shakya)ರನ್ನು 94,000ಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದರು. ಆಗ ಎಸ್‌ಪಿ(Sp) ಮತ್ತು ಬಿಎಸ್‌ಪಿ (BSP)ಮೈತ್ರಿ ಮಾಡಿಕೊಂಡಿದ್ದವು.

ಡಿಂಪಲ್ ಗೆಲುವಿನ ಅಂತರ ತನ್ನ ಮಾವನಿಗಿಂತಲೂ ಹೆಚ್ಚಿರುವುದು ‘ನೇತಾಜಿ’ ಮತ್ತು ಅವರು ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳಲ್ಲಿ ಜನರ ನಂಬಿಕೆಯನ್ನು ತೋರಿಸಿದೆ.

ಬಿಜೆಪಿ ಅಭ್ಯರ್ಥಿ ಶಾಕ್ಯ ತನ್ನ ದೌಲಪುರ ಮತಗಟ್ಟೆಯಲ್ಲಿಯೂ 187 ಮತಗಳ ಅಂತರದಿಂದ ಸೋತಿದ್ದಾರೆ.

ಡಿಂಪಲ್ ಯಾದವ 6,18,120 ಮತಗಳನ್ನು (ಶೇ.64.08) ಮತಗಳನ್ನು ಗಳಿಸಿದ್ದರೆ ಶಾಕ್ಯ 3,29,659 ಮತಗಳನ್ನು (ಶೇ.34.18) ಪಡೆದಿದ್ದಾರೆ.

ಈ ವರ್ಷದ ಜೂನ್‌ನಲ್ಲಿ ನಡೆದಿದ್ದ ಅಝಮ್‌ಗಡ ಮತ್ತು ರಾಮಪುರ ಲೋಕಸಭಾ ಉಪಚುನಾವಣೆಗಳಲ್ಲಿ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಪ್ರಚಾರ ಕಾರ್ಯವನ್ನು ಕೈಗೊಂಡಿರಲಿಲ್ಲ ಮತ್ತು ಎರಡೂ ಕ್ಷೇತ್ರಗಳಲ್ಲಿ ಪಕ್ಷವು ಸೋತಿತ್ತು. ಇದರಿಂದ ಪಾಠ ಕಲಿತುಕೊಂಡ ಅಖಿಲೇಶ ಉಪಚುನಾವಣೆಯುದ್ದಕ್ಕೂ ಮೈನಪುರಿಯಲ್ಲಿ ಮೊಕ್ಕಾಂ ಹೂಡಿ ಕ್ಷೇತ್ರದಾದ್ಯಂತ ಪತ್ನಿ ಡಿಂಪಲ್ ಪರವಾಗಿ ಪ್ರಚಾರ ನಡೆಸಿದ್ದರು.

2024ರ ಸಾರ್ವತ್ರಿಕ ಚುನಾವಣೆಗಳಲ್ಲಿ ಉತ್ತರ ಪ್ರದೇಶದ ಎಲ್ಲ 80 ಲೋಕಸಭಾ ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಿಕೊಂಡಿರುವ ಬಿಜೆಪಿ ಮೈನಪುರಿ ಉಪಚುನಾವಣೆಯಲ್ಲಿ ಗೆಲ್ಲಲು ಗಮನವನ್ನು ಕೇಂದ್ರೀಕರಿಸಿತ್ತು.

ಒಮ್ಮೆ ಪಿಎಸ್‌ಪಿಎಲ್ ಮುಖ್ಯಸ್ಥ ಶಿವಪಾಲ್ ಯಾದವ್ (Shivpal Yadav)ಅವರ ಆಪ್ತರೆಂದು ಪರಿಗಣಿಸಲ್ಪಟ್ಟಿದ್ದ ಶಾಕ್ಯರನ್ನು ಕಣಕ್ಕಿಳಿಸಿದ್ದ ಬಿಜೆಪಿ ಅವರ ಬೆಂಬಲದ ಭರವಸೆಯನ್ನು ಹೊಂದಿತ್ತು. ಆದರೆ ಶಿವಪಾಲ್ ಮತ್ತೆ ಅಖಿಲೇಶ್ ಜೊತೆ ಕೈ ಜೋಡಿಸಿದ್ದು ಮತ್ತು ಡಿಂಪಲ್ ಪರ ಪ್ರಚಾರ ಮಾಡಿದ್ದು ಬಿಜೆಪಿಗೆ ಆಶಾಭಂಗವನ್ನುಂಟು ಮಾಡಿದೆ.

2014ರ ಚುನಾವಣೆಯಲ್ಲಿ ಮೈನಪುರಿ ಲೋಕಸಭಾ ಕ್ಷೇತ್ರದಲ್ಲಿ ಮುಲಾಯಂ ತನ್ನ ಪ್ರತಿಸ್ಪರ್ಧಿ ಬಿಜೆಪಿಯ ಶತ್ರುಘ್ನ ಸಿಂಗ್ ಚೌಹಾಣ(Shatrughan Singh Chauhan)ರನ್ನು 3,64,666 ಮತಗಳ ಅಂತರದಿಂದ ಸೋಲಿಸಿದ್ದರು. ಅದು ಈಗಲೂ ದಾಖಲೆಯಾಗಿ ಉಳಿದುಕೊಂಡಿದೆ.

Similar News