ಶ್ರೀಲಂಕಾ, ನ್ಯೂಝಿಲ್ಯಾಂಡ್, ಆಸ್ಟ್ರೇಲಿಯ ವಿರುದ್ಧ ಸರಣಿಗೆ ಭಾರತ ಆತಿಥ್ಯ

Update: 2022-12-08 17:48 GMT


ಹೊಸದಿಲ್ಲಿ, ಡಿ.8: ಎಲ್ಲ ಮಾದರಿಯನ್ನು ಒಳಗೊಂಡಿರುವ ಶ್ರೀಲಂಕಾ, ನ್ಯೂಝಿಲ್ಯಾಂಡ್ ಹಾಗೂ ಆಸ್ಟ್ರೇಲಿಯ ವಿರುದ್ಧ ಸ್ವದೇಶದಲ್ಲಿ ನಡೆಯಲಿರುವ ಸರಣಿಗೆ ಬಿಸಿಸಿಐ ಗುರುವಾರ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಟೀಮ್ ಇಂಡಿಯಾ ವಿರುದ್ಧ ಸ್ವದೇಶದಲ್ಲಿ ನಡೆಯಲಿರುವ ಸರಣಿಯು 6 ಟ್ವೆಂಟಿ-20, 9 ಏಕದಿನ ಹಾಗೂ 4 ಟೆಸ್ಟ್ ಪಂದ್ಯಗಳನ್ನು ಒಳಗೊಂಡಿದೆ. ಜನವರಿಯಲ್ಲಿ ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಟ್ವೆಂಟಿ-20 ಸರಣಿ ಮೂಲಕ ಇದು ಆರಂಭವಾಗಲಿದೆ.


ಟಿ-20 ಪಂದ್ಯಗಳು ಜನವರಿ 3,5 ಹಾಗೂ 7ರಂದು ಮುಂಬೈ, ಪುಣೆ ಹಾಗೂ ರಾಜ್ಕೋಟ್ನಲ್ಲಿ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ. ಭಾರತ ಹಾಗೂ ಶ್ರೀಲಂಕಾ ನಂತರ ಜ.10,12 ಹಾಗೂ 15 ರಂದು ಗುವಾಹಟಿ, ಕೋಲ್ಕತಾ ಹಾಗೂ ತಿರುವನಂತಪುರದಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡುತ್ತವೆ.
ಭಾರತವು ನಂತರ ನ್ಯೂಝಿಲ್ಯಾಂಡ್ ವಿರುದ್ಧವೂ ಜ.18, 21 ಹಾಗೂ 24ರಂದು ಹೈದರಾಬಾದ್, ರಾಯ್ಪುರ ಹಾಗೂ ಇಂದೋರ್ನಲ್ಲಿ 3 ಪಂದ್ಯಗಳ ಏಕದಿನ ಸರಣಿ ಆಡಲಿದೆ.


ಭಾರತವು ನ್ಯೂಝಿಲ್ಯಾಂಡ್ ವಿರುದ್ಧ ಜ.27, 29 ಹಾಗೂ ಫೆ.1ರಂದು ರಾಂಚಿ, ಲಕ್ನೊ ಹಾಗೂ ಅಹಮದಾಬಾದ್ನಲ್ಲಿ 3 ಪಂದ್ಯಗಳ ಟ್ವೆಂಟಿ-20 ಸರಣಿಯನ್ನು ಆಡಲಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯದ ಭಾರತ ಪ್ರವಾಸವು ಫೆಬ್ರವರಿ 9ರಿಂದ ನಾಗ್ಪುರದಲ್ಲಿ ಆರಂಭವಾಗಲಿದೆ. ಭಾರತವು ಮುಂದಿನ 3 ಟೆಸ್ಟ್ ಪಂದ್ಯಗಳನ್ನು ದಿಲ್ಲಿ(ಫೆ.17), ಧರ್ಮಶಾಲಾ(ಮಾ.1) ಹಾಗೂ ಅಹ್ಮದಾಬಾದ್(ಮಾ.9)ನಲ್ಲಿ ಆಡಲಿದೆ. ಭಾರತ ಹಾಗೂ ಆಸ್ಟ್ರೇಲಿಯ ನಡುವೆ ಮುಂಬೈ(ಮಾ.17), ವಿಝಾಗ್(ಮಾ.19) ಹಾಗೂ ಚೆನ್ನೈ(ಮಾ.22)ನಲ್ಲಿ ನಡೆಯುವ 3 ಪಂದ್ಯಗಳ ಏಕದಿನ ಸರಣಿಯ ಮೂಲಕ ಸ್ವದೇಶಿ ಋತು ಅಂತ್ಯವಾಗಲಿದೆ.

Similar News