ಪಾಕಿಸ್ತಾನ: ಇಂಗ್ಲೆಂಡ್ ಕ್ರಿಕೆಟ್ ತಂಡ ತಂಗಿದ್ದ ಹೋಟೆಲ್ ಬಳಿ ಗುಂಡಿನ ಸದ್ದು; ವರದಿ

Update: 2022-12-09 02:01 GMT

ಮುಲ್ತಾನ್ (ಪಾಕಿಸ್ತಾನ): ಪ್ರವಾಸಿ ಇಂಗ್ಲೆಂಡ್ (England cricket team) ಮತ್ತು ಪಾಕಿಸ್ತಾನ ತಂಡಗಳ ನಡುವಿನ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯ ಶುಕ್ರವಾರ ಮುಲ್ತಾನ್‍ನಲ್ಲಿ ಆರಭವಾಗುವ ಮುನ್ನಾ ದಿನ, ಇಂಗ್ಲೆಂಡ್ ತಂಡ ತಂಗಿದ್ದ ಹೋಟೆಲ್ ಬಳಿ ಗುಂಡು (gunshots) ಹಾರಿಸಿದ ಸದ್ದು ಕೇಳಿ ಬಂದಿದೆ ಎಂದು sports.ndtv.com ವರದಿ ಮಾಡಿದೆ.

ಎರಡು ಗ್ಯಾಂಗ್‍ಗಳ ನಡುವಿನ ಜಗಳದ ಹಿನ್ನೆಲೆಯಲ್ಲಿ ಪರಸ್ಪರ ಗುಂಡು ಹಾರಾಟ ನಡೆಸಲಾಗಿದೆ ಎಂದು 'The Telegraph' ವರದಿ ಮಾಡಿದೆ. ಘಟನೆ ಸಂಬಂಧ ನಾಲ್ವರನ್ನು ಬಂಧಿಸಲಾಗಿದ್ದು, ಘಟನೆಯಲ್ಲಿ ಓರ್ವ ಗಾಯಗೊಂಡಿದ್ದಾರೆ.

ಇಂಗ್ಲೆಂಡ್ ತಂಡ ವಾಸ್ತವ್ಯ ಇರುವ ಹೋಟೆಲ್ ಬಳಿ ಬಿಗಿ ಬಂದೋಬಸ್ತ್ ಆಯೋಜಿಸಲಾಗಿದೆ ಎಂದು ಇತರ ವರದಿಗಳು ಹೇಳಿವೆ. ಯಾವುದೇ ವಿದೇಶಿ ತಂಡ ಆಗಮಿಸಿದರೂ ಬಿಗಿ ಭದ್ರತೆ ಒದಗಿಸಲಾಗುತ್ತದೆ. ಕೆಲ ವರ್ಷಗಳ ಹಿಂದಷ್ಟೇ ಪಾಕಿಸ್ತಾನಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಮರಳಿದ ಹಿನ್ನೆಲೆಯಲ್ಲಿ ಎಲ್ಲ ವ್ಯವಸ್ಥೆಗಳು ಸುಲಲಿತವಾಗಿ ಮುಂದುವರಿಯಬೇಕು ಎನ್ನುವ ನಿರೀಕ್ಷೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯದ್ದು. ಭದ್ರತಾ ಸಮಸ್ಯೆಗಳು ದೇಶದಲ್ಲಿ ದ್ವಿಪಕ್ಷೀಯ ಸರಣಿಗಳನ್ನು ಆಯೋಜಿಸುವ ಕನಸಿಗೆ ಪೆಟ್ಟು ನೀಡಲಿದೆ ಎನ್ನುವುದು ಪಿಸಿಬಿ ನಂಬಿಕೆ.

ಪಾಕಿಸ್ತಾನದಲ್ಲಿ ಮುಂದಿನ ವರ್ಷ ನಡೆಯುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಭಾಗವಹಿಸುತ್ತದೆಯೇ ಎಂಬ ಬಗ್ಗೆ ಪ್ರಶ್ನೆಗಳು ಉದ್ಭವಿಸಿದ ಹಿನ್ನೆಲೆಯಲ್ಲಿ ಪಿಸಿಬಿಯ ಪ್ರತಿಭಟನೆ ವ್ಯಕ್ತವಾಗಿರುವ ನಡುವೆಯೇ ಈ ಘಟನೆ ನಡೆದಿದೆ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸುವ ಹಕ್ಕು ಕೂಡಾ ಪಾಕಿಸ್ತಾನಕ್ಕೆ ಲಭಿಸಿದೆ.

ಈಗಾಗಲೇ ರಾವಲ್ಪಿಂಡಿಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ 74 ರನ್‍ಗಳ ಗೆಲುವು ಸಾಧಿಸಿದೆ. ಎರಡನೇ ಟೆಸ್ಟ್ ಪಂದ್ಯವನ್ನೂ ಸೋತಲ್ಲಿ ಪಾಕಿಸ್ತಾನ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನ ಫೈನಲ್ ತಲುಪುವ ಕನಸು ಭಗ್ನವಾಗಲಿದೆ ಎಂದು sports.ndtv.com ವರದಿ ಮಾಡಿದೆ.

Similar News