ಬಿಜೆಪಿಯಿಂದ ಆಪ್‌ ಕೌನ್ಸಿಲರ್‌ಗಳ ಖರೀದಿಗೆ ಯತ್ನ: ಪಕ್ಷದ ನಾಯಕರ ಆರೋಪ

Update: 2022-12-10 12:51 GMT

 ಹೊಸದಿಲ್ಲಿ: ಇತ್ತೀಚೆಗೆ ನಡೆದ ದಿಲ್ಲಿ ಮುನಿಸಿಪಲ್‌ ಕಾರ್ಪೊರೇಷನ್‌ ಚುನಾವಣೆಯಲ್ಲಿ ಆಯ್ಕೆಯಾದ ಕೌನ್ಸಿಲರ್‌ಗಳನ್ನು "ಖರೀದಿಸಲು" ಬಿಜೆಪಿ (BJP) ಯತ್ನಿಸುತ್ತಿದೆ  ಎಂದು ಆಮ್‌ ಆದ್ಮಿ ಪಕ್ಷ (AAP) ಇಂದು ಆರೋಪಿಸಿದೆಯಲ್ಲದೆ ಬಿಜೆಪಿ ತನ್ನ ʻಕೊಳಕು ಆಟಗಳನ್ನುʼ ನಡೆಸುತ್ತಿದೆ ಎಂದು ಹೇಳಿದೆ.

ನೂತನವಾಗಿ ಆಯ್ಕೆಯಾದ ಆಪ್‌ ಕೌನ್ಸಿಲರ್‌ಗಳಾದ ಡಾ ರೊನಾಕ್ಷಿ ಶರ್ಮ, ಅರುಣ್‌ ನವರಿಯಾ ಮತ್ತು ಜ್ಯೋತಿ ರಾಣಿ ಅವರೊಡಗೂಡಿ ಇಂದು ಆಪ್‌ ನಾಯಕ ಮತ್ತು ರಾಜ್ಯ ಸಭಾ ಸದಸ್ಯ ಸಂಜಯ್‌ ಸಿಂಗ್‌ ಮಾಧ್ಯಮಗಳ ಜೊತೆ ಮಾತನಾಡಿ ಈ ಬಾರಿ ಆಪ್‌ಗಿಂತ 30 ಕಡಿಮೆ ಸ್ಥಾನಗಳನ್ನು ಗಳಿಸಿ  ಮತ್ತು ಕಳೆದ ಬಾರಿಗೆ ಹೋಲಿಸಿದಾಗ 80 ಸ್ಥಾನಗಳನ್ನು ಕಳೆದುಕೊಂಡ ಬಿಜೆಪಿ, ಮಹಾರಾಷ್ಟ್ರ,ಅರುಣಾಚಲ ಪ್ರದೇಶ, ಉತ್ತರಾಖಂಡ, ಮಧ್ಯ ಪ್ರದೇಶ, ಕರ್ನಾಟಕ, ಗೋವಾದಲ್ಲಿ ಶಾಸಕರ ಕುದುರೆ ವ್ಯಾಪಾರ ಮಾಡಿದಂತೆ ಇಲ್ಲಿಯೂ ಶುರುವಿಟ್ಟುಕೊಂಡಿದೆ ಎಂದು ದೂರಿದ್ದಾರೆ.

ಈ ರೀತಿ ಪ್ರಜಾಪ್ರಭುತ್ವದ ಕಗ್ಗೊಲೆಗೆ ಯತ್ನಿಸುವವರನ್ನು ಹಾಗೂ ಜನರ ತೀರ್ಪನ್ನು ಅವಮಾನಿಸುವವರನ್ನು ಬಂಧಿಸಬೇಕು ಎಂದು ದಿಲ್ಲಿ ಪೊಲೀಸ್‌ ಆಯುಕ್ತರಿಗೆ ಅವರು ಆಗ್ರಹಿಸಿದರು.

ಎಂಸಿಡಿ ಕೌನ್ಸಿಲರ್‌ಗಳನ್ನು  ಖರೀದಿಸಲು ರೂ. 100 ಕೋಟಿ ಬಜೆಟ್‌ ಅನ್ನು ಬಿಜೆಪಿ ಇಟ್ಟುಕೊಂಡಿದೆ, ತಲಾ ಕೌನ್ಸಿಲರ್‌ಗೆ ಬಿಜೆಪಿ ರೂ. 10 ಕೋಟಿ ಬಜೆಟ್‌ ಹೊಂದಿದೆ,ʼʼ ಎಂದು ಸಿಂಗ್‌ ಹೇಳಿದರು.

ರೊನಾಕ್ಷಿ ಶರ್ಮ ಅವರನ್ನು ಯೋಗೇಂದ್ರ ಚಂಡೋಲಿಯಾ ಎಂಬ ವ್ಯಕ್ತಿ ಸಂಪರ್ಕಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ಅದೇಶ್‌ ಕುಮಾರ್‌ ಗುಪ್ತಾ ಮಾತನಾಡಲು ಬಯಸುತ್ತಾರೆ ಎಂದನಲ್ಲದೆ ಗುಪ್ತಾ ಮತ್ತು ಬಿಜೆಪಿ ಕಾರ್ಯಕರ್ತರು ಎಂಸಿಡಿ ಕೌನ್ಸಿಲರ್‌ಗಳ ಖರೀದಿಗೆ ರೂ. 100 ಕೋಟಿ ಬಜೆಟ್‌ ಉಲ್ಲೇಖಿಸಿದ್ದಾರೆ ಎಂದು ಹೇಳಿದ್ದಾನೆ ಎಂದು ಸಿಂಗ್‌ ಹೇಳಿಕೊಂಡರು.

ಜ್ಯೋತಿರಾಣಿಯ ಪತಿಯನ್ನು ರಸ್ತೆಯಲ್ಲಿ ಓರ್ವ ಹಿಡಿದೆಳೆದು, ಅಡ್ಡ ಮತದಾನ ಮಾಡಿದರೆ ರೂ. 50 ಲಕ್ಷ ಕೊಡುವುದಾಗಿ ಹೇಳಿದ್ದಾನೆ, ಹಾಗೆ ಮಾಡಲು ಸಾಧ್ಯವಿಲ್ಲವೆಂದಾಗ ಯಾರಿಗೂ ತಿಳಿಯುವುದಿಲ್ಲ ಎಂದು ಹೇಳಿದ ಎಂದು ಸಿಂಗ್‌ ಹೇಳಿದರು.

ಪಕ್ಷದ ಕೌನ್ಸಿಲರ್‌ಗಳು ಅರವಿಂದ್‌ ಕೇಜ್ರಿವಾಲ್‌ ಅವರೊಂದಿಗೆ ಇರುತ್ತಾರೆ, ಬಿಜೆಪಿಯ ತಂತ್ರಗಳನ್ನು ಬಹಿರಂಗಗೊಳಿಸುತ್ತಾರೆ ಎಂದು ಸಿಂಗ್‌ ಹೇಳಿದರು.

Similar News