ಆನರ್ಸ್ ಪದವಿಗೆ ನಾಲ್ಕು ವರ್ಷಗಳ ಪದವಿ ಕೋರ್ಸ್ ಕಡ್ಡಾಯಗೊಳಿಸಲಿರುವ ಯುಜಿಸಿ

Update: 2022-12-10 15:42 GMT

ಹೊಸದಿಲ್ಲಿ,ಡಿ.10: ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC)ದ ನೂತನ ನಿಯಮಾವಳಿಗಳಡಿ ಸ್ನಾತಕಪೂರ್ವ ಕೋರ್ಸ್‌ಗಳಲ್ಲಿ ಆನರ್ಸ್ ಪದವಿಯನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳು ನಾಲ್ಕು ವರ್ಷಗಳ ಪದವಿ ತರಗತಿ ಶಿಕ್ಷಣವನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಲಿದೆ. ಆಯೋಗವು ಸೋಮವಾರ ನೂತನ ನಿಯಮಾವಳಿಗಳನ್ನು ಪ್ರಕಟಿಸುವ ಸಾಧ್ಯತೆಯಿದೆ.

ವಿದ್ಯಾರ್ಥಿಗಳು 120 ಕ್ರೆಡಿಟ್‌ಗಳನ್ನು ಪೂರ್ಣಗೊಳಿಸಿ ಮೂರು ವರ್ಷಗಳಲ್ಲಿ ಪದವಿಯನ್ನು ಮತ್ತು 160 ಕ್ರೆಡಿಟ್‌ಗಳನ್ನು (ಶೈಕ್ಷಣಿಕ ವರ್ಷಗಳ ಸಂಖ್ಯೆಗಳ ಮೂಲಕ ಲೆಕ್ಕ ಹಾಕಲಾಗುತ್ತದೆ) ಪೂರ್ಣಗೊಳಿಸಿ ನಾಲ್ಕು ವರ್ಷಗಳಲ್ಲಿ ಯುಜಿ ಆನರ್ಸ್ (UG Hons)ಪದವಿಯನ್ನು ಪಡೆಯಲು ಸಾಧ್ಯವಾಗಲಿದೆ ಎಂದು ಯುಜಿಸಿಯ ಕರಡು ಪಠ್ಯಕ್ರಮ ಮತ್ತು ಕ್ರೆಡಿಟ್ ಫ್ರೇಮ್‌ವರ್ಕ್‌ನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಮೂರು ವರ್ಷಗಳ ಪದವಿ ಕೋರ್ಸ್‌ಗಳಿಗೆ ಈಗಾಗಲೇ ಪ್ರವೇಶವನ್ನು ಪಡೆದಿರುವ ವಿದ್ಯಾರ್ಥಿಗಳು ನಾಲ್ಕು ವರ್ಷಗಳ ಕೋರ್ಸ್‌ನ್ನು ಮಾಡಲು ಅರ್ಹರಾಗಿರುತ್ತಾರೆ.

ವಿಸ್ತರಿತ ಕೋರ್ಸ್‌ಗೆ ಪ್ರವೇಶ ಪಡೆಯುವುದನ್ನು ವಿದ್ಯಾರ್ಥಿಗಳಿಗೆ ಸಾಧ್ಯವಾಗಿಸಲು ವಿಶ್ವವಿದ್ಯಾಲಯವು ಆನ್‌ಲೈನ್ ಸೇರಿದಂತೆ ಬ್ರಿಡ್ಜ್ ಕೋರ್ಸ್‌ಗಳನ್ನು ಒದಗಿಸಬಹುದು ಎಂದು ಕರಡಿನಲ್ಲಿ ಹೇಳಲಾಗಿದೆ.

ಸುದ್ದಿಸಂಸ್ಥೆಯ ವರದಿಯಂತೆ ನಾಲ್ಕು ವರ್ಷಗಳ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಮೂರು ವರ್ಷಗಳಿಗೆ ಮೊದಲು ಕೋರ್ಸ್‌ನಿಂದ ನಿರ್ಗಮಿಸಲು ಮತ್ತು ನಂತರ ಮರುಸೇರ್ಪಡೆಗೊಳ್ಳಲು ಅವಕಾಶ ಕಲ್ಪಿಸಲಿದೆ. ಕೋರ್ಸ್‌ನಿಂದ ನಿರ್ಗಮಿಸಿದ ಮೂರು ವರ್ಷಗಳಲ್ಲಿ ಮರುಸೇರ್ಪಡೆಗೊಳ್ಳುವ ಆಯ್ಕೆ ಅವರಿಗಿರಲಿದೆ ಮತ್ತು ಏಳು ವರ್ಷಗಳ ನಿಗದಿತ ಅವಧಿಯಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಬೇಕಾಗುತ್ತದೆ.

ನಿರ್ದಿಷ್ಟ ವಿಭಾಗದಲ್ಲಿ ಮೂರು ವರ್ಷಗಳ ಪದವಿ ಶಿಕ್ಷಣವನ್ನು ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಆನರ್ಸ್ ಪದವಿಗಳನ್ನೂ ನೀಡಲಾಗುವುದು ಎಂದು ದಿಲ್ಲಿ ವಿವಿಯ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ. ತನ್ನ ನೂತನ ಪಠ್ಯಕ್ರಮ ಮತ್ತು ಕ್ರೆಡಿಟ್ ಫ್ರೇಮ್‌ವರ್ಕ್‌ನಡಿ ಯುಜಿಸಿಯು ರಾಷ್ಟ್ರೀಯ ಶಿಕ್ಷಣ ನೀತಿ,2020ರ ಶಿಫಾರಸುಗಳನ್ನು ಜಾರಿಗೊಳಿಸಲು ನೋಡುತ್ತಿದೆ. ನೂತನ ಫ್ರೇಮ್‌ವರ್ಕ್ ‘ಭಾರತವನ್ನು ಅರಿಯುವಿಕೆ ’,ಆಧುನಿಕ ಭಾರತೀಯ ಭಾಷೆಗಳು ಮತ್ತು ಯೋಗ ಕೋರ್ಸ್‌ಗಳನ್ನು ಶಿಫಾರಸು ಮಾಡುವ ಮೂಲಕ ಉನ್ನತ ಶಿಕ್ಷಣವನ್ನು ಮಲ್ಟಿ-ಡಿಸಿಪ್ಲಿನರಿ (ಬಹು ಕೋರ್ಸ್‌ಗಳ ಸಂಯೋಜನೆ)ಯನ್ನಾಗಿಸಲು ಯೋಜಿಸಿದೆ ಎಂದು ವರದಿಯು ತಿಳಿಸಿದೆ.

Similar News