ಹಿಮಾಚಲ ಪ್ರದೇಶದ ನೂತನ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಯಾರು?: ಇಲ್ಲಿದೆ ಮಾಹಿತಿ
ಶಿಮ್ಲಾ: ಹಿಮಾಚಲಪ್ರದೇಶ ಮುಖ್ಯಮಂತ್ರಿಯಾಗಿ ಸುಖವಿಂದರ್ ಸಿಂಗ್ ಸುಖು ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಶನಿವಾರ ಸಂಜೆ ಪ್ರಕಟಿಸಿದೆ. ನೂತನ ಮುಖ್ಯಂತ್ರಿಯಾಗಿ ಸುಖವಿಂದರ್ ಅವರು ರವಿವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಹಮೀರ್‌ಪುರ ಜಿಲ್ಲೆಯ ನಾದೌನ್‌ನಿಂದ ನಾಲ್ಕು ಬಾರಿ ಶಾಸಕರಾಗಿರುವ ಸುಖವಿಂದರ್ ಸಿಂಗ್ ಸುಖು ಅವರು ವಕೀಲರಾಗಿದ್ದು, ಕಾಂಗ್ರೆಸ್ ವಿಂಗ್ ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ) ಮೂಲಕವೇ ರಾಜಕಾರಣಕ್ಕೆ ಧುಮುಕಿದ್ದರು.
ರಾಜಮನೆತನದಿಂದ ಬಂದ ವೀರಭದ್ರ ಸಿಂಗ್ ರಿಗಿಂತ ವ್ಯತ್ಯಸ್ಥವಾಗಿ, ಸುಖ್ವಿಂದರ್ ಸಿಂಗ್ ಸುಖು, ಶಿಮ್ಲಾದ ಹಿಮಾಚಲ ಪ್ರದೇಶ ವಿಶ್ವವಿದ್ಯಾನಿಲಯದಲ್ಲಿ NSUI ಕಾರ್ಯಕರ್ತನಾಗಿ, 1980 ರ ದಶಕದ ಚಳವಳಿಗಳ ಮೂಲಕ ರಾಜಕೀಯದ ಆರಂಭದ ದಿನಗಳನ್ನು ಕಳೆದರು.
2000 ದಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗುವ ಮೂಲಕ ಪೂರ್ಣಾವಧಿಯ ರಾಜಕಾರಣಿಯಾದರು.
ರಾಜ್ಯದ ಇನ್ನೊಂದು ಪ್ರದೇಶದ, ಇನ್ನೊಂದು ಜಿಲ್ಲೆಯವರಾಗಿದ್ದರೂ, ಅವರು ಶಿಮ್ಲಾ ಪುರಸಭೆಯ ಚುನಾವಣೆಯಲ್ಲಿ ಎರಡು ಬಾರಿ ಗೆದ್ದರು. ನಂತರ 2008 ರಲ್ಲಿ ರಾಜ್ಯ ಘಟಕದ ಕಾರ್ಯದರ್ಶಿಯಾಗಿದ್ದರು, ಅಂತಿಮವಾಗಿ ರಾಜ್ಯ ಘಟಕದ ಉನ್ನತ ಸ್ಥಾನವನ್ನು ಪಡೆದಿದ್ದರು.